ಬುಧವಾರ, ಅಕ್ಟೋಬರ್ 20, 2010

ಸರ್ಕಾರಿ ಕಚೇರಿಯಲ್ಲೊಂದು ಸಂದರ್ಶನ

ಕೊಳಚೆ ನಿರ್ಮೂಲನ ಮಂಡಳಿಯಲ್ಲಿನ ಸಂದರ್ಶನಕ್ಕಾಗಿ ವಿದ್ಯಾ ಕುಮಾರ್ ಬೆಳಗ್ಗೆ 9 ಕ್ಕೆ ಅಣಿಯಾಗಿ ಬಂದು ಕಚೇರಿಯ ಬಾಗಿಲ ಬಳಿ ಒಂದು ಗಂಟೆ ಕಾದರು ಯಾರು ಕಾಣುವುದಿಲ್ಲ. ತಾನು ವಿಳಾಸ ತಪ್ಪಿ ಬೇರೆಲ್ಲೋ ಬಂದಿರಬೇಕು ಎಂದು ಅನುಮಾನಿಸಿ ಹೊರಡಬೇಕೆನ್ನುವಷ್ಟರಲ್ಲಿ ಜಾವನ ಜಬ್ಬಾರ್ ಪ್ರತ್ಯಕ್ಷನಾಗುತ್ತಾನೆ. ಆದೆ ಕೊಳಚೆ ನಿರ್ಮೂಲನ ಮಂಡಳಿಯಂದು, ಆ ದಿನವೇ ಅಲ್ಲಿ ಸಂದರ್ಶನವಿರುವುದೆಂದು ಜಬ್ಬಾರನಿಂದ ಖಚಿತವಾದ ಮೇಲೆ ಒಳ ನಡೆಯುತ್ತಾನೆ. ಅದು ಅವನಿಗೆ ಕೆಲವು ಸರ್ಕಾರಿ ಕಛೇರಿಗಳ ಪಾಡು ಏನೆಂದು ಅರ್ಥವಾಗುತ್ತದೆ.

೧೦-೧೫ ಕ್ಕೆ ಮಂಡಳಿಯ ಅಧ್ಯಕ್ಷ ಉದರಪೂರ್ಣರ ಆಗಮನವಾಗುತ್ತದೆ. ತಮ್ಮ ಕೋಟನ್ನು ಕುರ್ಚಿಗೆ ಹೊದ್ದಿಸಿ, ಮಕ್ಕಳಿಗಿಂತಲೂ ಹೆಚ್ಚು ಪ್ರೀತಿಯಿಟ್ಟು ಬೆಳೆಸಿದ ತಮ್ಮ ಹೊಟ್ಟೆಯನ್ನು ಚಂದದಿಂದ ಸವರಿಕೊಂಡು ಆಸನ ಮೇಲೆ ವರಗುತ್ತಾನೆ. ಜಬ್ಬಾರನಿಂದ ಒಂದು ಕಡಕ್ ಚಹಾ ತರಿಸಿ ಕುಡಿದು ಮುಗಿಸುವಷ್ಟರಲ್ಲಿ ಮಂಡಳಿಯ ಹಿರಿಯ ಗುಮಾಸ್ತ, ಸುಡುಗಾಡು ಸೀತಾರಾಮು 'ಥೂ! ಹಾಳು ಸುಡುಗಾಡು, ಏನು ಕೆಲ್ಸನೂ ಏನು ಜನಗಳೋ. ಈ ಅಧ್ಯಕ್ಷರದ್ದು ಬೇರೆ ಸುಡುಗಾಡು ಕಿರಿಕಿರಿ' ಎಂದು ಗೊಣಗಿಕೊಂಡು ಪ್ರವೇಶಿಸುತ್ತಾನೆ. ಆ ದಿನ ನಡೆಯಬೇಕಿರುವ ಸಂದರ್ಶನಕ್ಕೆ ಮಂದಾಕಿನಿಯವರು ಏಕೆ ಇನ್ನು ಬಂದಿಲ್ಲವೆಂದು ತಮ್ಮ ತಮ್ಮ ಅಭಿಪ್ರಾಯ ಹಂಚಿಕೊಳ್ಳುತ್ತಿರುವಾಗ ಮೇಕಪ್ ಮಂದಾಕಿನಿಯವರು ಬೆಕ್ಕಿನ ನೆಡಿಗೆಯೊಂದಿಗೆ ತಮ್ಮ ಮೇಕಪ್ ಸರಿ ಪಡಿಸಿಕೊಳ್ಳುತ್ತಾ ಆಗಮಿಸುತ್ತಾರೆ. ತಮ್ಮ ಮನೆಯ ನಾಯಿಯ ಮದುವೆ ವಾರ್ಷಿಕೋತ್ಸವದ ಸಿಹಿ ಹಂಚುತ್ತಾ ತಡವಾಗಿ ಬಂದ ಕಾರಣ ತಿಳಿಸುತ್ತಾಳೆ. ಆ ಸಿಹಿಯನ್ನು ಕೊಂಚ ಅಸಹ್ಯವಾದರೂ ಸಹಿಸಿಕೊಂಡು ಇಬ್ಬರು ತಿನ್ನುತ್ತಾರೆ. ಅಷ್ಟರಲ್ಲಿ ಮಂದಾಕಿನಿ ಒಮ್ಮೆ ತಮ್ಮ ಮೇಕಪ್ ಸರಿಯಿದೆಯೇ ಎಂದು ತಮ್ಮ ಕಿರುಗನ್ನದಿಯಲ್ಲಿ ಪರೀಕ್ಷಿಸಿ ಕೊಳ್ಳುತ್ತಾಳೆ. ಈ ಎಲ್ಲಾ ತಮಾಷೆಯನ್ನು ವಿದ್ಯಾಕುಮಾರ ದೂರದಿನಲೇ ನೋಡಿ ನಿಟ್ಟುಸಿರು ಬಿಡುತ್ತಾನೆ.

ತಮ್ಮ ಮಾತುಗಳನ್ನು ಅಲ್ಲಿಗೆ ನಿಲ್ಲಿಸಿ ಸಂದರ್ಶನ ಶುರು ಮಾಡಲು ಮೂವರು ಅಣಿಯಾಗುತ್ತಾರೆ. 'ಏನು ಸಂದರ್ಶನನೋ, ಸುಡುಗಾಡು ಅಭ್ಯರ್ಥಿಗಳೋ...! ನಡೀರಿ ಅದೇನು ಸುಡುಗಾಡು ಸಂದರ್ಶನ ಮಾದೆಬಿಡೋಣ' ಎಂದು ಸೀತಾರಾಮು ಸಿಡುಕುತ್ತಾನೆ. ಉದರಪೂರ್ಣ 'ಒಬ್ಬೊಬ್ಬರನ್ನೇ ಒಳಗೆ ಕಳ್ಸೋ ಜಬ್ಬಾರ' ಎಂದು ಆಜ್ಞೆ ಕೊಡುತ್ತಾನೆ. 'ಇರೋದೇ ಒಬ್ಬ ಒಬ್ಬೊಬ್ಬರನ್ನ ಬೇರೆ ಕರಿಬೇಕಂತೆ!' ಎಂದು ಮನಸ್ಸಿನಲ್ಲೇ ಗೊಣಗಿಕೊಂಡು ಜಬ್ಬಾರ ವಿದ್ಯಾಕುಮಾರನ ಹೆಸರು ಕೂಗುತ್ತಾನೆ. ಕಡೆಗೂ ತನ್ನ ಸರತಿ ಬಂತೆಂದು ಖುಷಿಯಿಂದ ಒಳಹೊಗುತ್ತಾನೆ. ಅವನನ್ನು ಕೂರಿಸುವ ಮುಂಚೆಯೇ 'ಹ್ಞೂ ಏನು ನಿನ್ನ ಹೆಸರು? ಏನು ಓದಿದ್ಯ?' ಎಂದು ಸೀತಾರಾಮು ಪ್ರಶ್ನೆ ಮಳೆ ಸುರಿಸುತ್ತಾನೆ. ಉತ್ತರಿಸಲು ಬಾಯಿ ಬಿಡುವ ಹೊತ್ತಿಗೆ ಭರ್ರನೆ ಬಂದ ಮಂತ್ರಿ ಕುಮಾರ ಅವನನ್ನು ತಳ್ಳಿಕೊಂಡು ಒಳನುಗ್ಗುತ್ತಾನೆ. ಜಬ್ಬಾರನು ಹಿಂದೆಯೇ ಓಡಿ ಬರುತ್ತಾನೆ. 'ನಮಸ್ಕಾರ ನಮಸ್ಕಾರ ನಮಸ್ಕಾರ, ನಿಶ್ಚಿಂತೆ ಮಾಡ್ಕೋಬೇಡಿ ನನ್ನ ಪರಿಚಯ ನಾನೇ ಮಾಡ್ಕೊತೀನಿ' ಮಂತ್ರಿಕುಮಾರ ತನ್ನ ಪರಿಚಯ ಶುರು ಮಾಡುತ್ತಾನೆ. 'ನಾನು ಒಳಚರಂಡಿ ಖಾತೆ ಸಚಿವರ ಹತ್ತಿರದ ಸಂಬಂಧಿ, ದೂರದ ತಮ್ಮ ಆಗ್ಬೇಕು.' ಅಷ್ಟು ಪರಿಚಯವಾಗುತ್ತಿದ್ದಂತೆ ಉದರಪೂರ್ಣ ವಿದ್ಯಾಕುಮಾರನನ್ನು 'ಆಮೇಲೆ ಕರಿತೀನಿ ಅಲ್ಲಿವರೆಗೂ ಆಚೆ ಕೂತಿರು'ಎಂದು ವಿದ್ಯಾಕುಮಾರನನ್ನ ಹೊರಗೆ ದೂಡುತ್ತಾನೆ. 'ಮಂತ್ರಿಗಳು ಈ ಕೆಲಸ ನಂಗೆ ಕೊಡಿಸ್ತೀನಿ ಮಾತು ಕೊಟ್ಟವ್ರೆ. ಈಗ ನೋಡಿ ಇನ್ನೇನು ಅವ್ರು ಕರೆ ಮಾಡೆಬಿಡ್ತಾರೆ. ಒಂದು-ಎರಡು-ಮೂರು...' ಅನ್ನುತ್ತಿದ್ದಂತೆ ಕಚೇರಿಯ ದೂರವಾಣಿ ರಿಂಗಣಿಸುತ್ತದೆ. ಉದರಪೂರ್ಣ ಅದಕ್ಕೆ 'ನಮಸ್ಕಾರ, ಅಧ್ಯಕ್ಷ ಉದರಪೂರ್ಣ ಸ್ಪೀಕಿಂಗು' ಎಂದು ತುಸು ಇಂಗ್ಲಿಷ್ ಸೇರಿಸಿಯೇ ಉತ್ತರಿಸುತ್ತಾನೆ. ಅತ್ತ ಕಡೆಯಿಂದ 'ಈಗ ಬಂದಿರೋ ಹುಡುಗ ನಮ್ಮ ಮಂತ್ರಿಗೆ ಹತ್ತಿರದ ಸಂಬಂಧ ದೂರದ ಬ್ರದರ್ರು. ಈ ಕೆಲಸ ಅವನಿಗೆ ಕೊಡಿ. ಕೆಲಸ ಮುಗಿದ ಮೇಲೆ ಬಂದು ಮಂತ್ರಿಗಳನ್ನ ಬಂದು ನೋಡಬೇಕಂತೆ' ಎಂದು ಮಂತ್ರಿಗಳ ಖಾಸಗಿ ಸಹಾಯಕ ತಿಳಿಸುತ್ತಾನೆ. ಸಂದರ್ಶನ ಮಾಡಲು ಕುಳಿತಿದ್ದ ಮೂರು ಜನ ಮಂತ್ರಿಕುಮಾರನ ಕುಶಲ ವಿಚಾರಿಸಿ ಬೀಳ್ಕೊಡುತ್ತಾರೆ. 'ವಿದ್ಯಗಮಾರನ್ನ ಕರೆಯಪ್ಪ' ಎಂದು ಮಂದಾಕಿನಿ ತನ್ನ ಮೆಕಪನ್ನು ಮತ್ತೆ ಸರಿ ಮಾಡಿಕೊಳ್ಳುತ್ತ ಜಬ್ಬಾರನಿಗೆ ಹೇಳುತ್ತಾಳೆ. 'ಅಯ್ಯೋ ಅವ್ನು ಗಮಾರ ಅಲ್ಲ ಕುಮಾರ ಕಣ್ರೀ' ಎಂದು ಉದರಪೂರ್ಣ ಮಂದಾಕಿನಿಯನ್ನ ತಿದ್ದುತ್ತಾರೆ. 'ಗಮಾರನೋ ಕುಮಾರನೋ ಕರೀರಿ ಅವನ್ನ' ಎಂದು ಸೀತಾರಾಮು ಮತ್ತೆ ಸಿಡುಕುತ್ತಾನೆ.

ಈ ಗಲಾಟೆಯ ಮಧ್ಯದಲ್ಲಿ ಕ್ಯಾಶ್ ಕುಮಾರಿ ಕಂತೆ ನೋಟಿನಲ್ಲಿ ಗಾಳಿ ಬೀಸಿಕೊಳ್ಳುತ್ತ ವಿದ್ಯಾಕುಮಾರನ ಪಕ್ಕ ಬಂದು ಕೂರುತ್ತಾಳೆ. ವಿದ್ಯಾಕುಮಾರನನ್ನು ಕರೆಯಲು ಬಂದ ಜಬ್ಬಾರನಿಗೆ ಹಾಗೆಯೇ ಒಂದು ನೂರರ ನೋಟನ್ನು ಎಸೆಯುತ್ತಾಳೆ ಅದನ್ನು ಆಯ್ದುಕೊಂಡ ಜಬ್ಬಾರ ಒಳಗೆ ಹೋಗಿ 'ಸಾರ್, ಆ ವಿದ್ಯಾಕುಮಾರ ಎಲ್ಲೋ  ಹೋಗವನೆ ಇನ್ನೊಬ್ರು ಇದ್ದಾರೆ ಕಳಿಸ್ತೀನಿ' ಎಂದು ಕ್ಯಾಶ್ ಕುಮಾರಿಯನ್ನ ಒಳ ಕಳುಹಿಸಿ, ಅಲ್ಲೇ ಇದ್ದರು ಇಲ್ಲವಾಗಿದ್ದ ವಿದ್ಯಕುಮಾರನನ್ನ ಸಮಾಧಾನ ಪಡಿಸುತ್ತಾನೆ. ಇತ್ತ ಒಳ ಬಂದು ಕುಳಿತ ಕ್ಯಾಶ್ ಕುಮಾರಿಯನ್ನ ಮೂರು ಜನ ಸಂದರ್ಶನಕಾರರು ಪ್ರಶ್ನಿಸಲು ಮುಂದಾಗುತ್ತಾರೆ. 'ನಾನು ಕ್ಯಾಶ್ ಕುಮಾರಿ, ನಮ್ಮ ಅಪ್ಪನ ಹತ್ರ ತುಂಬಾ ದುಡ್ಡಿದೆ. ಮನೆನಲ್ಲಿ ತುಂಬಾ ಬೇಜಾರು ಹೊಡಿತ ಇತ್ತು, ಕಾಲ ಕಳ್ಯೋಕೆ ಏನಾದ್ರೂ ಮಾಡಬೇಕಲ್ಲ ಅದಕ್ಕೆ ಇಲ್ಲಿ ಕೆಲ್ಸಕ್ಕೆ ಸೇರೋಣ ಅಂತ ಬಂದೆ' ಎಂದು ತನ್ನ ಪ್ರಶ್ನೆಗಳು ಬರುವ ಪರಿಚೆಯ ಮಾಡಿಕೊಡುತ್ತಾಳೆ. ಮೇಜಿನ ಕೆಳಗೆ ಕೈ ಆಡಿಸಲು ಪ್ರಯತ್ನಿಸಿ, 'ಅಯ್ಯೋ ಇದೇನ್ರಿ ಈ ಮೇಜಿನ ಕೆಳಗೆ ಜಾಗನೇ ಇಲ್ಲ. ನಿಮ್ಮ ಕಛೇರಿಲಿ ಮಜಿನ ಕೆಳಗಿನ ವ್ಯವಹಾರ ನೆಡ್ಯೋದೆ ಇಲ್ವಾ?!' ಎಂದು ಕ್ಯಾಶ್ ಕುಮಾರಿ ಆಶ್ಚರ್ಯದಿಂದ ಉದ್ಗರಿಸುತ್ತಾಳೆ. ಅದಕ್ಕೆ ಉದರಪೂರ್ಣ 'ಛೆ ಛೆ ಹಾಗೇನಿಲ್ಲ. ಈಗ ಲೋಕಾಯುಕ್ತರ ಕಾಟ ಜಾಸ್ತಿ ಆಗಿದೆ ನೋಡಿ ಅದಕ್ಕೆ ಎಲ್ಲಾ ಈ ಥರದ ಮೆಜನ್ನೇ ಹಾಕ್ಸಿದ್ದಿವಿ. ಆ ವಿಚಾರ ಆದ್ರೆ ಕೆಳಗೆ ಚಹಾ ಅಂಗಡಿಯಲ್ಲಿ ಹೋಗಿ ತಲುಪಿಸಿ ಬಿಡಿ. ನಾವು ನಂತರ ತಗೊತೀವಿ.' ಎಂದು ತಮ್ಮ ಬುದ್ಧಿವಂತಿಕೆಯ ಹೊಸ ಯೋಜನಗಳನ್ನು ಹೇಳುತ್ತಾರೆ. ಅಲ್ಲಿಯವರೆಗೂ ಅವರ ಸೀರೆ, ಒಡವೆಯ ಮೇಲೆ ಕಣ್ಣು ಇಟ್ಟಿದ್ದ ಮಂದಾಕಿನಿ ಕಡೆಗೂ ಬಾಯಿ ಬಿಟ್ಟು ಕೇಳಿಯೇ ಬಿಡುತ್ತಾಳೆ, 'ರೀ ರೀ, ಈ ಸೀರೆ ಎಲ್ಲಿ ತಗೊಂಡ್ರಿ? ಹೊಸ ಥರ ಇದೇ!'. 'ಒಹ್! ಇದು ಹೊಸ ವಿನ್ಯಾಸ. _________ ಸೀರೆ ಅಂತ' ಎಂದು ಸೌಂದರ್ಯ ವರ್ಧಕ ವಸ್ತುಗಳ ಬಗ್ಗೆ ಮಂದಾಕಿನಿ ಮತ್ತು ಕ್ಯಾಶ್ ಕುಮಾರಿ ಮಾತಿಗಿಳಿಯುತ್ತಾರೆ. ಇದರಿಂದ ರೇಗಿ ಹೋದ ಸೀತಾರಾಮು 'ಅದೇನು ಹಾಳು ಸುಡುಗಾಡು ಎಲ್ಲಿ ಹೋದರು ಇದೇ ವಿಷ್ಯ ಮಾತಾಡ್ತೀರಲ್ಲ್ರಿ. ಥೂ ಹಾಳು ಸುಡುಗಾಡು' ಮಂದಾಕಿನಿಯ ಮೇಲೆ ಸಿಡುಕುತ್ತಾರೆ. 'ಸರಿ ನಾನು ಕೆಳಗಿನ ಅಂಗಡಿಯಲ್ಲಿ ನಿಮ್ಮ ದಕ್ಷಿಣೆ ತಲುಪಿಸಿ ಹೋಗ್ತೀನಿ' ಎಂದು ಮುನಿಸಿಕೊಂಡೆ ಕ್ಯಾಶ್ ಕುಮಾರಿ ಹೊರಡುತ್ತಾಳೆ.

ಈಗ ವಿದ್ಯಾಕುಮಾರನ ಸರತಿ. ಯಾರು ಅಡ್ಡ ಬರುತ್ತಿಲ್ಲವೆಂದು ಖಚಿತ ಪಡಿಸಿಕೊಂಡು, ಮತ್ತೊಮ್ಮೆ ಅಕ್ಕ ಪಕ್ಕ ನೋಡಿ, ವಿದ್ಯಾಕುಮಾರ ಒಳಹೊಗುತ್ತಾನೆ. 'ಸಂದರ್ಶನ ಶುರು ಮಾಡೋಣವೆ' ಎಂದು ಉದರಪೂರ್ಣ, ಮಂದಾಕಿನಿ ಮತ್ತು ಸೀತಾರಾಮು ಅವರಿಗೆ ಹೇಳುತ್ತಾರೆ. ಅಲ್ಲಿಯವರೆಗಿನ ಎಲ್ಲಾ ಕಥೆಗಳನ್ನು ಎದುರೆ ನೋಡಿದ ವಿದ್ಯಾಕುಮಾರ, 'ನೋಡಿ ಸಾರ್, ಸರ್ಕಾರಿ ಕಚೇರಿ ಕತೆಯೆಲ್ಲ ಹಿಂಗೆನೆ ಅಂತ ಗೊತ್ತು ಬಿಡಿ ಸಾರ್. ಇಲ್ಲಿ ಕೆಲಸ ಪಡ್ಯೋಕೆ ಒಂದು ದುಡ್ಡು ಬೇಕು ಇಲ್ಲ ಅಂದ್ರೆ ಪ್ರಭಾವಿ ವ್ಯಕ್ತಿಯ ಶಿಫಾರಸ್ಸು ಬೇಕು. ಅದೆಲ್ಲ ಗೊತ್ತಿದ್ರು ಇಲ್ಲಿ ಯಾಕೆ ಬಂದಿದ್ದೀನಿ ಗೊತ್ತ?!' ಎಂದು ಪ್ರಶ್ನೆ ಇಟ್ಟಾಗ ಮೂವರು ಸಂದರ್ಶಕರು ತಬ್ಬಿಬ್ಬಾಗಿ ನೋಡುತ್ತಾರೆ. ' ಇದು ನನ್ನ ನೂರೊಂದನೆ ಸಂದರ್ಶನ. ಇದು ಮುಗಿಸಿ ನಾನು ಗಿನ್ನಿಸ್ ದಾಖಲೆ ಮಾಡ್ತೀನಿ. ಅದರಿಂದ ಬಾರೋ ದುಡ್ಡಲ್ಲಿ ಬಡ್ಡಿ ವ್ಯಾಪಾರ ಮಾಡ್ಕೊಂಡು ನೆಮ್ಮದಿಯಾಗಿರ್ತೀನಿ. ಬರ್ಲಾ. ಹಾಂ, ನಿಮ್ಮ ಮಕ್ಕಳಿಗೆ ಕೆಲ್ಸಕ್ಕೆ ಸೇರ್ಸೋಕೆ ದುಡ್ಡು ಬೇಕಿದ್ರೆ ಬನ್ನಿ ಸ್ವಲ್ಪ ರಿಯಾಯಿತಿ ಮೇಲೆ ಸಾಲ ಕೊಡ್ತೀನಿ' ಎಂದು ಹೇಳಿ ಹೊರಟು ಹೋಗುತ್ತಾನೆ. ಮೂವರು ಸಂದರ್ಶಕರು ಇಬ್ಬರ ಮುಖವನ್ನೊಬ್ಬರು ನೋಡಿಕೊಳ್ಳುತ್ತಾರೆ!!.

ಭಾನುವಾರ, ಆಗಸ್ಟ್ 1, 2010

ಸ್ನೇಹ.....ಗೆಳೆತನ.....ದೋಸ್ತಿ....

ಅಂಬೆಗಾಲಿಡುತ್ತ ಆಡುವಾಗ ಸಿಗುವ ಪಕ್ಕ ಮನೆಯ ಗೆಳೆಯರಿಂದ ಕೈಗೊಂದು ಕೋಲು ಬಂದು ಉದ್ಯಾನದಲ್ಲಿ ಓಡಾಡುವವರೆಗೂ ಸ್ನೇಹಿತರ ಬಳಗ ಬೆಳೆಯುತ್ತಲೇ ಹೋಗುತ್ತೆ. ಶಾಲೆಯ ಬೆಂಚಿನಲ್ಲಿ ಪಕ್ಕ ಕೂರುವ ಮೊದಲನೆ ಗೆಳೆಯನೆ ಇರಬಹುದು, ಇಲ್ಲವೇ ಎಂದೋ ಒಮ್ಮೆ ಮಳೆಯೆಂದು ಸೂರಿನಡಿ ನಿಂತಿದ್ದಾಗೆ ಕೊಡೆ ಹಿಡಿದು ಅನಿರೀಕ್ಷಿತವಾಗಿ ಬರುವ ಸ್ನೇಹಿತನೆ ಇರಬಹುದು, ಒಮ್ಮೆ ಭಾವನೆಗಳ ಸ್ಪಂದನ ಹೊಂದಿಕೊಂಡರೆ ಆಯಿತು ಮೊದಲ ನೋಟದ ಪ್ರೇಮದಂತೆ ಸ್ನೇಹ ಬೆಳೆದು ಹೋಗುವುದು. ಪ್ರತಿಯೊಬ್ಬರೂ ತಾವು ಹುಟ್ಟಿನಿಂದ ಬೆಳೆದು ಹೋದಂತೆ ಅವರವರ ಸ್ನೇಹಿತರ ಬಳಗ ಹೆಚ್ಚುತ ಹೋಗುತ್ತದೆ. ಹಾಂ, ಅಣ್ಣ-ತಮ್ಮ, ಅಪ್ಪ-ಅಮ್ಮ, ಮಾವ-ಅತ್ತೆ, ಹೀಗೆ ಇನ್ನಿತರ ರಕ್ತಸಂಬಂಧಗಳಿಗೆ ಇರೋ ನಿರ್ದಿಷ್ಟ ವ್ಯಾಖ್ಯಾನ ಈ ಸ್ನೇಹ ಅನ್ನೋ ಸಂಬಂಧಕ್ಕೆ ಇಲ್ಲ. ಹಾಗೆ ಅರ್ಥ ಹುಡುಕುತ್ತ ಹೋದರೆ ನಾವು ಅದರ ಎಲ್ಲಾ ಭಾವರೂಪಗಳನ್ನು ವರ್ಣಿಸುತ್ತೇವೆ ಹೊರತು ಒಂದು ಖಂಡಿತವಾದ ಅರ್ಥ ಕೊಡುವುದಕ್ಕೆ ಕಷ್ಟವಾಗುತ್ತದೆ. ನಮ್ಮ ಸಂಬಧಿಗಳಲ್ಲಿ, ನೆಂಟರಲ್ಲಿ ಎಷ್ಟೇ ಹೊಂದಿಕೊಂಡಿದ್ದರು ಸ್ನೇಹಿತರ ಬಳಿ ಸಿಗುವ ಸಾಂತ್ವಾನ, ಆತ್ಮೀಯತೆ, ಸಲುಗೆ, ರಕ್ತ ಸಂಬಧಿಗಳಿಂದ ಸಿಗುವುದಿಲ್ಲ. ನಾವು ಎಷ್ಟೋ ಬಾರಿ ನಮ್ಮ ತಂದೆ-ತಾಯಿಯ ಬಳಿ ಹೇಳಿಕೊಳ್ಳಲಾಗದ ವಿಷಯಗಳನ್ನು ಸ್ನೇಹಿತರ ಬಳಿ ಹೇಳಿಕೊಂಡು ಚರ್ಚಿಸುತ್ತೇವೆ, ಸಲಹೆ-ಉತ್ತರ ಕಂಡುಕೊಳ್ಳುತೇವೆ. ಜೀವನ ನಿರ್ಧಾರಗಳಲ್ಲಿ ಹೆಜ್ಜೆ ತಪ್ಪಿ ಹೋದರೆ ಕೈ ಹಿಡಿದು ಎತ್ತುವರು ಕೂಡ ಈ ಸ್ನೇಹಿತರೆ. ಈ ಸ್ನೇಹಿತರ ಪ್ರಭಾವ ಜೀವನವನ್ನೇ ಬದಲಿಸುವಷ್ಟು ಶಕ್ತಿಯುತವಾಗಿರುತ್ತದೆ. ನಮಗೆ ಸಿಗುವ ಅಥವಾ ನಾವೇ ಜೀವನದಲ್ಲಿ ಆಯ್ದುಕೊಳ್ಳುವ ಸ್ನೇಹಿತರ ಮಹತ್ವ ಅತಿ ಹೆಚ್ಚು. ಸ್ನೇಹಿತರಲ್ಲಿ ಕೆಟ್ಟವರು-ಒಳ್ಳೆಯವರಿರಬಹುದೇ ಹೊರತು ಸ್ನೇಹ ಮಾತ್ರ ಎಂದಿಗೂ ಯಾವುದೇ ಕಳಂಕ ಹತ್ತದ, ಹತ್ತಿ ಕೊಳ್ಳಲು ಸಾಧ್ಯವಿಲ್ಲದ ನಿರ್ಮಲ ಭಾವ. ಮನೆಗಳಲ್ಲಿ ನಡೆಯುವ ಶುಭ ಕಾರ್ಯಗಳಿಗೆ ಬಂದು ಹೋಗುವ ಬಂಧುಗಳು ಮತ್ತೆ ಕಾಣಿಸುವುದು ಮುಂದಿನ ಶುಭ ಕಾರ್ಯಕ್ಕೆ ಕರೆದಾಗ ಮಾತ್ರ ಆದರೆ ಸ್ನೇಹಿತರು ಅದರ ಮುಂಚಿಂದಲೂ, ಮುಗಿದ ಮೇಲೂ ಜೊತೆಯಲ್ಲೇ ಇರುತ್ತಾರೆ.


ಸ್ನೇಹಿತರೊಂದಿಗೆ ಸೇರಿ ಹರಟುವ ಆ ಖುಷಿಯೇ ಬೇರೆ. ಅಲ್ಲಿ ಸಿಗುವ ಆ ಸಲುಗೆ, ಆ ಮುಗ್ಧ ಮಾತುಗಳು, ಅನುಭವಸಿದವರೇ ಪುಣ್ಯವಂತರು. ಹೊಸದಾಗಿ ಪರಿಚೆಯವಾದಾಗ 'ಬನ್ನಿ... ಹೋಗಿ' ಎನ್ನುವ ಮಾತುಗಳು ಯಾವಾಗ 'ಲೋ...ನಿಮ್ಮಜ್ಜಿ...' ಎಂದು ಎಷ್ಟು ಸಲೀಸಾಗಿ ಬದಲಾಗುತ್ತವೋ ತಿಳಿಯುವುದೇ ಇಲ್ಲ. ತಂದೆ-ತಾಯಿ ಬಂಧುಗಳು ಸೇರಿ ನಮಗೆ ಅರಿವು ಬರುವ ಮುಂಚೆಯೇ ಒಂದು ಹೆಸರನ್ನಿಟ್ಟಿರುತ್ತರಾದರು, ಬೆಳೆಯುತ್ತ ನಮ್ಮ ವಿಶೇಷ ಲಕ್ಷಣ-ಸ್ವಭಾವವನ್ನು ಗುರುತಿಸಿ ನಮಗೆ ಮತ್ತೊಂದು ಅಡ್ಡ ಹೆಸರಿಡುವ ಸಂಸ್ಕೃತಿ ಸ್ನೇಹದಲ್ಲಿ ಮಾತ್ರವೇ ಕಾಣಸಿಗುತ್ತೆ. ಅರಿಯದ ಚಿಕ್ಕ ವಯಸ್ಸಿನಲ್ಲಿನ ಸ್ನೇಹವೇ ಇರಲಿ, ಯೌವನದಲ್ಲಿ 'ಸಕ್ಕತ್ತಾಗವ್ಳೆ ನೋಡೋ ಮಗ...' ಎಂದು ಚಂದ ಹುಡುಗಿಯನ್ನು ಟೀಕಿಸುವ ತುಂಟು ಸ್ನೇಹವೇ ಆಗಲಿ, ಇಲ್ಲವೇ ಕಾಲೇಜಿನಲ್ಲಿ ಮಜಾ ಮಾಡಿ ಪರೀಕ್ಷೆಯ ಹಿಂದಿನ ದಿನದ ರಾತ್ರಿ ಕೂಡಿ ಓದುವ ಜೊತೆಯೇ ಇರಲಿ ಎಲ್ಲಿಯೂ ಸ್ನೇಹದಲ್ಲಿ ಸಣ್ಣ ಕಪ್ಪು ಚುಕ್ಕೆಯ ಕಳಂಕವು ಕಾಣುವುದಿಲ್ಲ. ಕೈಲ್ಲೊಂದು ನೌಕರಿ ಹಿಡಿದು ಮನೆಯವರು ಮದುವೆ ಗೊತ್ತು ಮಾಡಿ, ಹೊಸ ಸಂಗಾತಿಯಾಗುವಳ ಜೊತೆ ಹರಟುವಾಗ ಕೂಡ ರೇಗಿಸುವ ಹಕ್ಕು ಕೇವಲ ಸ್ನೇಹಿತರಿಗೆ ಮಾತ್ರ ಮೀಸಲಿರುತ್ತದೆ. ನಂತರ ಮದುವೆಯಲ್ಲೂ ಸಹ ನೆಂಟರ ಜೊತೆಗಿನ ಚಿತ್ರಗಳಿಗಿಂತ ಹಳೆಯ ಗೆಳೆಯರೊಂದಿಗೆ ಸೇರಿ ತಗೆಸಿಕೊಂಡ ಚಿತ್ರಗಳೇ ಹೆಚ್ಚು ನೆನಪಿನಲ್ಲಿ ಉಳಿಯುತ್ತವೆ ಎನ್ನುವ ಮಾತು ತಗೆದು ಹಾಕುವಂತಿಲ್ಲ. ಎಂದೋ ಒಮ್ಮೆ ಕುಳಿತಿದ್ದಾಗ ಹಳೆಯ ಚಿತ್ರಗಳಲ್ಲಿ ಸ್ನೇಹಿತರ ಮುಖ ಕಂಡಾಗ ಆಗುವ ನೆನಪುಗಳು ಆ ಸಂತೋಷ ವರ್ಣನಾತೀತ.


ತಂದೆ-ತಾಯಿಯ ವಾತ್ಸಲ್ಯ, ಅಣ್ಣ-ತಮ್ಮರ ಆತ್ಮೀಯತೆ, ಸಂಗಾತಿಯ ಸಲುಗೆ, ಗುರುವಿನ ನಿರ್ದೇಶನ ಎಲ್ಲವು ಸ್ನೇಹವೊಂದರಲ್ಲೇ ಅಡಕವಾಗಿರುವುದು ನಿಜಕ್ಕೂ ಆಶ್ಚರ್ಯವೇ!. ಸ್ನೇಹದ ಬಗ್ಗೆ ಹೀಗೆ ಹೇಳುತ್ತಾ ಹೋದರೆ ಪುಟಗಳೇ ಸಾಲದೇ ತುಂಬಿ ಹೋಗುತ್ತವೆ. ನೀವು ಒಮ್ಮೆಯಾದರು ನಿಮ್ಮ ಬಾಲ್ಯದಿಂದ ಇಲ್ಲಿಯವರೆಗಿನ ನಿಮ್ಮ ಸ್ನೇಹಿತರನ್ನು ನೆನಪಿಸಿಕೊಂಡು ಅವರನ್ನು ಭೇಟಿ ಮಾಡಿ, ಸಾಧ್ಯವಾಗದಿದ್ದರೆ ಒಂದು ಕರೆಯನ್ನಾದರೂ ಮಾಡಿ. ಅವರೊಂದಿಗೆ ಮತ್ತೊಮ್ಮೆ ಮಾತಾಡಿ. ಅದು ನಿಮ್ಮಲ್ಲಿ ಗೊತ್ತಿಲ್ಲದೆ ಒಂದು ಹೊಸ ಸ್ಪ್ಪೋರ್ತಿ ತಾನಾಗೆ ಅರಳುವಂತೆ ಮಾಡುತ್ತದೆ.

ಹಾಗೆ ನನ್ನ ಕವನಗಳ ಪುಟದಿಂದ ಒಂದು ಕವನ,
+++++++++++++++++++++++++
ಈ ಸುಂದರ ಇಳೆ ಮೇಲೆ
ನೀ ಬರುವ ಮುಂಚಿಂದಲೇ
ಅಂಟಿಕೊಂಡೇ ಬರುವುದು
ಕರುಳ ಬಳ್ಳಿಯ ಕಳೆಯದ ಸ್ನೇಹ

ಅಂಬೆಗಾಲಿನಿಂದ ಮೇಲೆದ್ದು
ತನ್ನ ಕಾಲಲ್ಲಿ ನೆದೆಯೋತನಕ
ಕೈ ಹಿಡಿದು ನಡೆಸಿದ್ದು
ಜನುಮದಾತನ ಕೈಗಳ ಬೆಚ್ಚನೆಯ ಸ್ನೇಹ


ಕುಣಿಕುಣಿದು ನಲಿವಾಗ
ಆಟದಲಿ ಜೊತೆಯಾಗಿ
ಖುಷಿಯನ್ನು ಹಂಚಿದ್ದು
ಒಡಹುಟ್ಟಿದವರೊಡೊನಾಟದ ನಲುಮೆಯ ಸ್ನೇಹ


ಸರಸತಿಯ ತವರಿನಲ್ಲಿ
ಕೈಹಿಡಿದು ತಿದ್ದಿಸಿ
ವ್ಯಕ್ತಿತ್ವ ರೂಪಿಸಿ ಬೆಳೆಸಿದ್ದು
ಕಳಿಸಿದ ಗುರುಗಳ ಬಾಂಧವ್ಯದ ಸ್ನೇಹ


ಸೋತಾಗ ಸಂತೈಸಿ
ಗೆಲುವನ್ನು ಉಲ್ಬಣಿಸಿ
ಸದಾಕಾಲ ಜೊತೆಗಿರುವ
ಜೊತೆ ಬೆಳೆದು ಬಾಳಿದ ಗೆಳೆಯೆರ ಸ್ನೇಹ


ಎಲ್ಹೆಜ್ಜೆ ಜೊತೆ ನೆಡೆದು
ಜೀವನವ ಹಂಚಿಕೊಂಡು
ಕಡೆತನಕ ಕೈಹಿಡಿದ
ಮನೆ ತುಂಬಿ ಮನ ಬೆಳಗಿದ ಮಡದಿಯ ಸ್ನೇಹ


ಜನುಮದಿಂದ ಕೊನೆವರೆಗೆ
ಉಸಿರಿತ್ತು ಕಾಪಾಡಿ
ಪೋಷಿಸಲು ನೆಲೆ ಕೊಟ್ಟು
ಪ್ರಕೃತಿಯು ಹಂಚಿದ ಕರುಣೆಯ ಸ್ನೇಹ


ಸ್ನೇಹದಿಂದಲೇ ಆರಂಭವಾಗಿ
ಸ್ನೇಹದಲೇ ಕೊನೆಗೊಳ್ಳುವಾಗ
ಕೊಡುತಲಿರು ಎಡೆಬಿಡದೆ
ಹಂಚಿದಕ್ಕಿಂತ ಹೆಚ್ಚಾಗುವ ಆಸ್ತಿ ಈ ಸ್ನೇಹ
+++++++++++++++++++++++++


ಇಲ್ಲಿಯವರೆಗೆ ನನ್ನ ಬಾಳ ಪುಟದಲ್ಲಿ ತಮ್ಮ ಹಸ್ತಾಕ್ಷರಗಳನ್ನು ಬರೆದ ಎಲ್ಲಾ ಸ್ನೇಹಿತರಿಗೂ ಧನ್ಯವಾದಗಳು.

ಭಾನುವಾರ, ಜುಲೈ 18, 2010

ಹಣೆಬರಹ!!

ನಿನ್ನೆ ಸಂಜೆ ಅಮ್ಮನ ಸ್ನೇಹಿತೆಯೊಬ್ಬರು ಮನೆಗೆ ಬಂದಿದ್ದರು. ಅವರ ಮಗ ಶಂಕರ  ಈ ವರ್ಷ ತನ್ನ ತಾಂತ್ರಿಕ ವಿದ್ಯೆ ಮುಗಿಸಿದ್ದನಂತೆ. ಅಯ್ಯೋ, ತಾಂತ್ರಿಕ ಅಂದ್ರೆ ತಂತ್ರ-ಮಂತ್ರ ಮಾಡೋ ವಿದ್ಯೆ ಅಲ್ಲ! ಇಂಜಿನಿಯರಿಂಗ್ ಅಂತಾರಲ್ಲ ಅದು. ಇದು ಒಂಥರಾ ತಂತ್ರ ಮಂತ್ರ ಮಾಡೋ ವಿದ್ಯೆನೆ ಬಿಡಿ. ಅವನಿಗೆ ಇನ್ನು ಕೆಲಸದ ಬೇಟೆ ಶುರು ಅಲ್ವ, ಅದಕ್ಕೆ ನನಗೆ ಪರಿಚೆಯ ಮಾಡಿಸಿ ನನಗೆ ಗೊತ್ತಿದ್ದಲ್ಲಿ ಕೆಲಸವಿದ್ದರೆ ತಿಳಿಸೋಕೆ ಕೇಳಿದ್ರು. ಹುಡುಗನು ಚೂಟಿಯೇ, ಅವನಿಗೂ ನಮಗೆ ಹಿಡಿದಿರುವ ಹಾಗೆ ಖಾಸಿಗಿ ಕಂಪನಿಯ, ಹೆಚ್ಚಿನ ಸಂಬಳದ ವ್ಯಾಮೋಹವೋ ಏನೋ, 'ನನಗೆ ಟೀಚಿಂಗ್ ಮಾಡೋಕೆ ಇಷ್ಟ ಇಲ್ಲ. ಕಂಪಿನಿ ಕಡೆನೇ ಕೆಲಸ ಮಾಡಬೇಕು' ಅಂತ ತನ್ನ ಆಸೆಯನ್ನ ನನ್ನ ಮುಂದಿಟ್ಟ. ನಾವು ಆಗ ಒಂದು ವರ್ಷ ಕೆಲಸಕ್ಕಾಗಿ ಅಲೆದು ಪಟ್ಟ ಪಾಡು ಹಾಗೆ ಕಣ್ಣಿನ ಪರದೆಯ ಮೇಲೆ ಒಂದು ಚಿತ್ರವಾಗಿ ಬಂದು ಹೋಯಿತು. ಆ ಅನುಭವವನ್ನು ಶಂಕರನೊಂದಿಗೆ ಹಂಚಿಕೊಂಡೆ. ಅವನು ಕೂಡ ಆಗಲೇ ಕೆಲವೊಂದು ಕಡೆ ಅಲೆದು ಬಂದಿದ್ದ. ಅವನಿಗೆ ಬೆಂಗಳೂರಿನಲ್ಲೇ ಇದ್ದು ಕೆಲಸ ಹುಡುಕಲು ಪ್ರಯತ್ನಿಸು ಆಗ ಸುಲಭ ಆಗುತ್ತೆ ಅಂತ ಇನ್ನೊಂದು ಬುದ್ಧಿ ಮಾತು ಸೇರಿಸಿ ಹೇಳಿದೆ. ಚಹಾ ಮುಗಿಸಿ ಅವರು ಹೊರಡಲು ನಿಂತರು. ಆಗ ಕಡೆಯ ಮಾತುಗಳೆಂಬಂತೆ 'ಏನೋ ಇವನ್ನ ಇಂಜಿನಿಯರ್ ಓದಿಸಬೇಕು ಅಂತ ನಂಗೆ ಆಸೆಯಿತ್ತು, ಓದಿಸ್ದೆ. ಇನ್ನು ಮುಂದಕ್ಕೆ ಏನೋ ಅವನ ಹಣೆಬರಹ ಇದ್ದ ಹಾಗೆ ಆಗುತ್ತೆ' ಅನ್ನುವ ಮಾತುಗಳ ಶಂಕರನ ಅಮ್ಮನಿಂದ ಹೊರಬಂತು. ಆ ಮಾತು ಕ್ಷಣಕಾಲ ನನ್ನ ದಂಗು ಬಡಿಸ್ತು. ಅಲ್ಲ, ಮಗ ಏನು ಓದಬೇಕು ಅಂತ ನಿರ್ಧಾರ ಮಾಡಿದವರು ಇವರು, ಓದಿಸಿದವರು ಅವರು, ಓದಿದ್ದು ಇವನು, ಇಷ್ಟೆಲ್ಲಾ ಇವರೇ ಮಾಡ್ಕೊಂಡು ಮುಂದಿದ್ದು ಮಾತ್ರ ಹಣೆಬರಹದ ಮೇಲೆ ಹಾಕ್ತರಲ್ಲ ಇದು ನ್ಯಾಯನ?! ಆ ಹಣೆಬರಹ ಅನ್ನೋದೇನಾದ್ರೂ ಇದನ್ನೆಲ್ಲಾ ಕೇಳಿಸ್ಕೊಂಡ್ರೆ ಇವರ ಮೇಲೆ ಮಾನ ನಷ್ಟ ಮೊಕ್ಕದ್ದಮೆ ಹಾಕೋದ್ರಲ್ಲಿ ಅನುಮಾನಾನೆ ಇಲ್ಲ.

ನಮ್ಮ ಜನಗಳೇ ಹೀಗೆ ನೋಡಿ, ಮಗ ಯಾರನ್ನೋ ಪ್ರೀತಿ ಮಾಡಿದ್ರೆ, ಅಥವಾ ರಸ್ತೆಯಲ್ಲಿ ಯಾರೋ ವಾಹನದ ಅಪಘಾತ ಆಗಿ ರಕ್ತ ಹರಿದ್ರೆ, ಅವರ ಮೇಲೆ ಹಿಗ್ಗ ಮುಗ್ಗ ಮಾತುಗಳು, ಏಟುಗಳು ಧಾರಾಳವಾಗಿಯೇ ಸುರಿಸ್ತಾರೆ. ಅದೇ, ತಾವೇ ತಮ್ಮ ಮಗನಿಗೆ ಒಂದು ಗಯ್ಯಾಳಿಯಾದ ಹುಡುಗಿಯನ್ನು ತಂದು ಮದುವೆ ಮಾಡಿದ್ರೆ 'ಅವನ ಹಣೆಬರಹದಲ್ಲಿ ಅಂತ ಹುಡುಗಿ ಸಿಗಬೇಕು ಅಂತ ಇತ್ತು ಹಾಗೆ ಆಗಿದೆ ಅಷ್ಟೇ' ಅಂತಾರೆ!, ಆ ಅಪಘಾತದಲ್ಲಿ ತರಚಿದ ಗಾಯ ಸಹ ಆಗದೆ ಪಾರಾದರೆ 'ಹಣೆಬರಹ ಚನ್ನಾಗಿತ್ತು ಅದಕ್ಕೆ ಏನೋ ಆಗದೆ ಪಾರಾದ' ಅಂತ ಸುಮ್ಮನಾಗುತ್ತಾರೆ!. ಈ ಎರಡು ನಿದರ್ಶನದಲ್ಲಿ ಘಟನೆಗಳು ಒಂದೇ ಆದರೆ ಪ್ರತಿಕ್ರಿಯೆಗಳು ಮಾತ್ರ ಬೇರೆ!!. ಇದನ್ನ ಗಮನಿಸಿದರೆ, 'ಹಣೆಬರಹ'ನ ತಾವು ಮಾಡಿದ ತಪ್ಪುಗಳನ್ನು ಹೊರಿಸಿ ಕೈ ತೊಳೆದುಕೊಳ್ಳುವುದಕ್ಕೆ, ಇಲ್ಲವೇ ತಮ್ಮ ಅಸಹಾಯಕತೆಗೆ ಒಂದು ಕಾರಣದಂತೆ ಉಪಯೋಗಿಸ್ಕೊತಾಯಿರೋದು ಸ್ಪಷ್ಟವಾಗಿ ಕಾಣುತ್ತೆ. ಪಾಪ, ಈ ಹಣೆಬರಹದ ಹಣೆಬರಹ ಹೀಗೆ ಯಾಕಿದ್ಯೋ! 

ಆ ದೇವರು ಹಣೆಬರಹ ಅಂತ ಎಲ್ಲರ ಹಣೆನಲ್ಲಿ ಬರೆದಿದ್ದಾನೆ ಅಂತಾನೆ ಇಟ್ಟುಕೊಳ್ಳೋಣ. ಹಾಗಿದ್ದ ಮೇಲೆ ನಾವು ಆ ನಿಯಮಗಳ ಅನುಸಾರವಾಗಿ ನಡೆಯುವ ಗೊಂಬೆಗಳು ಅಲ್ಲವಾ? ಹಾಗಿದ್ದ ಮೇಲೆ ನಮ್ಮಲ್ಲಿ ಆಲೋಚನಾ ಸಾಮರ್ಥ್ಯ, ಪ್ರತಿಕ್ರೆಯಿಸುವ ಮನೋಭಾವ, ಸುಖ-ದುಖ, ಪ್ರೀತಿಸುವ ಭಾವನೆಗಳು ಇಲ್ಲವೆಂದಾಗುವುದಿಲ್ಲವ? ಆ ನಿಯಮಗಳ ಪ್ರಕಾರ ನೆಡೆದು ಗುರಿ ಮುಟ್ಟುವುದೊಂದೇ ನಮ್ಮ ಕೆಲಸವಾಗಬೇಕಿತ್ತು. ಆದರೆ ನಾವು ಹಾಗೆ ಬದುಕುತಿದ್ದೀವ?. ಇಲ್ಲವಲ್ಲ, ನಾವು ನಮ್ಮ ಕೆಲಸಗಳ ಬಗ್ಗೆ ಯೋಚಿಸುತ್ತೇವೆ, ಸುಖ-ದುಖ, ಪ್ರೇಮದ ಭಾವಗಳು ನಮ್ಮಲ್ಲಿ ಅರಳುತ್ತವೆ, ತಪ್ಪುಗಳಿದ್ದರೆ ತಿದ್ದಿಕೊಳ್ಳಲು ಬುದ್ಧಿ ಉಪಯೋಗಿಸುತ್ತೇವೆ. ಅಂದ ಮೇಲೆ, ನಮ್ಮ ಮೇಲೆ ಯಾವುದೇ ನಿಯಮಗಳನ್ನ ಹೇರದೆ ನಮ್ಮ  ನಿರ್ಧಾರಗಳನ್ನು ಆಲೋಚಿಸುವ, ಅನುಭವಿಸುವ, ಅರಿತುಕೊಳ್ಳುವ ಶಕ್ತಿಯನ್ನು ನಮಗೆ ದೇವರು ಕೊಟ್ಟಿದ್ದಾನೆಂದು ಆಯಿತಲ್ಲ. ಹಾಗಿದ್ದ ಮೇಲೂ ನಮ್ಮ ಜನ 'ಎಲ್ಲಾ ತಮ್ಮ ಹಣೆಬರಹ' ಅಂತ ಗೊಳುವುದು ಮಾತ್ರ ಬಿಡುವುದಿಲ್ಲ. ನಿಜವಾಗಿ ಎಲ್ಲಾ ಹಣೆಬರಹದ ಕರಾಮತ್ತೆ ಆಗಿದ್ದರೆ ಕೊಲೆ ಮಾಡುವುದು ಕೊಲೆಗಾರನ ಹಣೆಬರಹವೆಂದು ಕ್ಷಮಿಸಬೇಕಾಗಿ ಬರುತ್ತೆ!! ಹಾಗೆ ವಿಜ್ಞಾನಿಗಳು ಮಾಡುವ ಸಂಶೋದನೆ ಅವರ ಸಂಶೋಧನೆಗಳಾಗದೆ ಅವರ ಹಣೆಬರಹದ ಸಂಶೋಧನೆಗಳಾಗಿ ಹೋಗುತ್ತವೆ. ಇದು ಓದಿದರೇನೇ ಹುಚ್ಚು ಎನಿಸಿವುದಿಲ್ಲವೇ?! ದೇವರು ನಮಗೆ ಎಲ್ಲವನ್ನು ಕೊಟ್ಟು ಜೀವಿಸುವ ಅವಕಾಶ ಕೊಟ್ಟಿರುವಾಗ ನಾವು ನಮ್ಮ ಆಗುಹೋಗುಗಳನ್ನು ಹಣೆಬರದ ತಲೆಗೆ ಏಕೆ ಕಟ್ಟಬೇಕು?! ಹೋಗಲಿ ಬಿಡಿ, ಆ ಹಣೆಬರಹದ ಹಣೆಲಿ ಹಾಗೆ ಬರೆದಿದ್ರೆ ನಾವು ತಾನೆ ಏನು ಮಾಡೋಕೆ ಆಗತ್ತೆ!.

ಶನಿವಾರ, ಜೂನ್ 26, 2010

ಬೊಂಬೆಯಾಡದ ಮಾತುಗಳು

ರಾಜೇಶನಿಗೆ ಆಗ ತಾನೇ ಮದುವೆಯಾಗಿತ್ತು. ಮೂರು ವರ್ಷಗಳಿಂದ ನಡೆಸಿದ ಅವನ ಕನಸಿನ ಕಣ್ಮಣಿಯ ಬೇಟೆ ಈಗ ಮುಗಿದಿತ್ತು. ಮುಂಚೆಯೆಲ್ಲಾ ಅದೇನೋ ಮದುವೆಯೆಂದರೆ ಸಿಟ್ಟುಗೊಂಡು ತನ್ನ ಕೋಣೆಯೊಳಗೆ ಹೋಗಿ ಚಿಲಕ ಜಡಿದುಕೊಳ್ಳುತ್ತಿದ್ದವನು ಈಗ ತಾನೇ ಓಡಾಡಿ ಮದುವೆಯಾಗಲು ನಿಂತ. ಹಿಂದಿನ ಮೂರು ಜ್ಯೋತಿಷಿಗಳು ಹೇಳಿದ ಭವಿಷ್ಯಕ್ಕಿಂತ ಈ ಬಾರಿಯ ಜ್ಯೋತಿಷಿಯ ಭವಿಷ್ಯವನ್ನು ನಿಜ ಮಾಡಲೇಬೇಕೆಂಬ ಹಠ ಅವನಲ್ಲಿದ್ದಂತೆ ಕಂಡಿತು. ಅಪ್ಪ-ಅಮ್ಮ ಅವನ ಅಲರ್ಜಿಯ ಔಷಧಿಗಾಗಿ ಮೂರ್ನಾಲ್ಕು ಜ್ಯೋತಿಷಿಗಳುಮಂತ್ರವಾದಿಗಳ ಹತ್ರ ಚನ್ನಾಗಿಯೇ ಪೂಜೆ ಮಾಡಿಸಿದ್ದರು. ಅವೆಲ್ಲದರ ಒಕ್ಕಲೂರಿನ ಶಕ್ತಿ ಅವನ ಮನಸಿನಲ್ಲಿ ಈ ವರ್ಷ ಮದುವೆ ಆಗಲೇಬೇಕೆಂಬ ನಿರ್ಧಾರ ತಂದಿತ್ತು. ಅವನ ಸಂಭ್ರಮ ನೋಡುತ್ತಿದ್ದರೆ ಅವನ ಮೊದಲ ವಧು ಪರೀಕ್ಷೆಯ ಸಂದರ್ಭ ನೆನಪಿಗೆ ಬರುತ್ತೆ. ಆಗ ಅವನಿಗೆ ಮದುವೆಯೆಂದರೆ ಅಲರ್ಜಿಯಾಗುತ್ತಿತ್ತು. ಆ ದಿನ ಮನೆಯವರ ಬಲವಂತಕ್ಕೆ, ಅಮ್ಮನ ತಮ್ಮ ನಾಗುಮಾಮನೊಂದಿಗೆ ಕುಣಿಗಲ್ಲಿನಲ್ಲಿ ಹುಡುಗಿ ನೋಡಲು ಹೋದವನು, ಹುಡುಗಿಯ ಮುಖವನ್ನು ನೋಡದೆ ಕಾಫಿ ತಿಂಡಿಯನ್ನು ಹೀರಿ ವಾಪಸ್ಸು ಬಂದಿದ್ದ. ಆದರೆ ಈಗ ತಾನೇ ಮನೆಯಲ್ಲಿ ಹೇಳಿ ವಧು ಬೇಟೆ ಶುರು ಮಾಡಿಸಿದ್ದ. ಇವನೂಡ್ಡಿದ ವಧು ಪರೀಕ್ಷೆಯಲ್ಲಿ ಶೀಲಾ ಉತ್ತೀರ್ಣಳಾಗಿದ್ದಳು. ಇವನು ಮೊದಲು ಹೋಗಿ ಅವಳನ್ನ ನೋಡ್ಕೊಂಡು ಬಂದು ಹಸಿರು ನಿಶಾನೆ ಕೊಟ್ಟ ಮೇಲೆ ತಂದೆ, ತಾಯಿ, ನಾಗುಮಾಮ ಮತ್ತು ಅವನ ಮಗನನ್ನು ಕರೆದುಕೊಂಡು ಹೋಗಿ ಭಾವಿ ಬಾಳ ಸಂಗಾತಿಯನ್ನು ತೋರಿಸಿದ. ಹಿಂತಿರುಗುವಾಗ 'ಹೇಗಿದ್ದಾಳೋ ಆ ಹುಡುಗಿ' ಅಂತ ತನ್ನ ಕಣ್ಮಣಿಯ ಆಯ್ಕೆ ಸರಿಯಿದೆಯೋ ಇಲ್ಲವೋ ಎಂಬ ಗೊಂದಲವನ್ನು ಆಗ ತಾನೇ ಏಳನೇ ತರಗತಿ ಪ್ರವೇಶಿಸಿದ್ದ ನಾಗುಮಾಮನ ಮಗ ರುಕ್ಮಂಗದನನ್ನು ಕೇಳಿದ. ಆ ಪ್ರಶ್ನೆ ಅವನಿಗೆ ತಾನು ಪಾಸು ಮಾಡಿದ ಆರನೇ ತರಗತಿಯ ಗಣಿತದ ಪ್ರಶ್ನೆ ಪತ್ರಿಕೆಗಿಂತಲೂ ಕಷ್ಟವಾಗಿತ್ತು. ಏನು ಹೇಳಬೇಕೆಂದು ಅರ್ಥವಾಗದೆ ಆಕಳಿನಂತೆ ತಲೆಯಾಡಿಸಿ ಒಪ್ಪಿಗೆ ಸೂಚಿಸಿದ. ಇವನು ಮದುವೆಯಾದರೆ ಸಾಕು ಎಂದು ಕಾಯುತಿದ್ದ ಶ್ರೀಮತಿ/ಶ್ರೀ ವೆಂಕಟೇಶಯ್ಯ ಎರಡೇ ವಾರದಲ್ಲಿ ನಿಶ್ಚಿತಾರ್ಥ ಮುಗಿಸಬೇಕೆಂದು ಬೀಗರ ಜೊತೆ ಮಾತು ಮಾಡಿದರು. ಮುಂದಿನ ತಿಂಗಳು ಆಷಾಡ ನಂತರ ಶ್ರಾವಣ ಹಾಗಾಗಿ ನವೆಂಬರ್ ನಲ್ಲಿ ಮದುವೆ ಮಾಡುವುದೆಂಬ ಒಡಂಬಡಿಕೆಯಾಯ್ತು. ಕಡೆಗೂ ಲಗ್ನ ಪತ್ರಿಕೆಯಲ್ಲಿ ಹಾಕಿಸಿದಂತೆ ಗುರು-ಹಿರಿಯರ ಆಶಿರ್ವಾದದಿಂದ ನೆಂಟರ ಸಮ್ಮುಖದಲ್ಲಿ ಭಾರಿ ವಿಜ್ರುಂಭಣೆಯಿಂದ ರಾಜೇಶ-ಶೀಲಾ ಸಪ್ತಪದಿ ತುಳಿದರು. ಮೊದಲ ಬಾರಿ ಗಂಡನ ಮನೆಗೆ ಬಂದ ಶೀಲಾಳಿಗೂ ಕೋಣೆಯಲ್ಲಿನ ಆ ಬೊಂಬೆ ಕುತೂಹಲವನ್ನು ಹುಟ್ಟಿಸಿತ್ತು.

*    *    *    *    *

ಕ್ರಾಪ್ ತಗೆದು ಸರಿಯಾಗಿ ಬಾಚಿದ ರೇಷ್ಮೆಯಂಥ ಕೇಶರಾಶಿ, ಅದರ ಮೇಲೆ ಪುಟ್ಟ ಟೊಪ್ಪಿ, ವ್ಯಾಯಾಮ ಮಾಡಿದರು ಬಾರದಂಥ ಆದರೂ ಹೂವಿನಷ್ಟೇ ಮೃದು ಎನಿಸುವ ಮೈಕಟ್ಟು, ಮೂಳೆಗಳೇ ಇಲ್ಲವೆಂಬಂತೆ ಎಲ್ಲ ದಿಕ್ಕುಗಳಲ್ಲಿಯೂ ತಿರುಗುವ ಕೈ ಕಾಲುಗಳು, ಎಂಥವರನ್ನೇ ಆಗಲಿ ತನ್ನ ಮುಗ್ಧತೆಯಲ್ಲಿ ಆಕರ್ಷಿಸುವಂಥ ಗುಂಡಗಿನ ನೀಲಿ ಕಣ್ಣುಗಳು, ಅದರ ಕೆಳಗೆ ಒತ್ತುಕೊಂಡಂತಿದ್ದ ಸಣ್ಣನೆ ಮೂಗು, ಅರಳಿದ ತುಟಿಗಳಲ್ಲಿ ತುಂಬಿಕೊಂಡ ನಗು - ಆ ಬೊಂಬೆಯನ್ನು ನೋಡಿದಾಗಲೇ ವೆಂಕಟೇಶಯ್ಯ 'ನನ್ನ ಮಗನಿಗೆ ಈ ಬೊಂಬೇನೆ ಸರಿ!' ಅಂತ ಅಂಗಡಿಯವನು ಹೇಳಿದ ಬೆಲೆಗೆ ಚೌಕಾಶಿಯನ್ನೋ ಮಾಡದೆ ಖರೀದಿ ಮಾಡಿಯೇಬಿಟ್ಟರು. ದೊಡ್ಡ ಹಸಿರು ಪಟ್ಟೆಗಳಿರುವ ಪುಟ್ಟ ಜೇಬಿನ ಅಂಗಿ ಅದಕ್ಕೆ ಹೊಂದುವಂತೆ ಹಾಲಿನ ಕೆನೆಯ ರಂಗಿನ ಷರಾಯಿ ತೊಟ್ಟುಕೊಂಡು ತಂದೆಯ ಕೈಯಲ್ಲಿ ಸವಾರಿ ಮಾಡಿಕೊಂಡು ಮನೆ ಸೇರುತ್ತಿದ್ದಂತೆ ಪುಟ್ಟ ನಡಿಗೆಯಲ್ಲಿ ಓಡಿಬಂದ ರಾಜೇಶ ಆ ಬೊಂಬೆಯನ್ನು ತನ್ನ ಕೈಗಳ ಅಂಬಾರಿಗೆ ಇಳಿಸಿಕೊಂಡ. ಅವನ ಮನಸ್ಸನ್ನು ತನ್ನೆಡೆಗೆ ಸೆಳೆಯುವಲ್ಲಿ ಆ ಬೊಂಬೆ ಸಫಲವಾಗಿತ್ತು. ಅವರಿರುವ ವಠಾರದ ಮನೆಯ ಜಗ್ಗುಲಿಯ ಮೇಲೆ ಸಂಜೆ ಆಡಲು ಸಿಗುವ ತನ್ನ ಬಳಗದಲ್ಲಿ ಆ ಬೊಂಬೆಯನ್ನು ತೋರಿಸಿ ಅದರ ವಯ್ಯಾರಗಳನ್ನು ಹಾವ ಭಾವದೊಂದಿಗೆ ನಟಿಸಿ ವರ್ಣಿಸುತ್ತ ಹೆಮ್ಮೆ ಪಡುತಿದ್ದ. 'ಈ ಬೊಂಬೆ ನಂದು ಯಾರಗೂ ಕೊಡಲ್ಲ. ನಿಂಗೆ ಬೇಕಿದ್ರೆ ನಿಮ್ಮಪ್ಪಂಗೆ ಹೇಳಿ ಕೊಡಿಸ್ಕೋ' ಅಂತ ಮೇಲಿನ ವಠಾರದ ಗೆಳೆಯ ಪ್ರಮೋದನ ಜೊತೆ ಒಮ್ಮೆ ಬೊಂಬೆಯ ವಿಷೆಯವಾಗಿ ಜಗಳವಾಡಿ ಬಂದಿದ್ದ. ಯಾರೇ ಸ್ನೇಹಿತರು ಆ ಬೊಂಬೆಯನ್ನು ಮುಟ್ಟಲು ಬಂದರೂ ಹೀಗೆ ರೇಗಿ ಬೆಳುತಿದ್ದ. ಮಾರುಕಟ್ಟೆಗೆ ಹೋಗುವಾಗ ಅಮ್ಮ ಇವನ ಕೈ ಎಷ್ಟು ಬಿಗಿಯಾಗಿ ಹಿಡಿಯುತ್ತಿದ್ದರೋ ಅಷ್ಟೇ ಬಿಗಿಯಲ್ಲಿ ಬೊಂಬೆಯನ್ನು ಹಿಡಿದು ಬರುತಿದ್ದ. ದಾರಿಯಲ್ಲಿ ಬೇರೆ ಹುಡುಗರು ಈ ಬೊಂಬೆ ನೋಡಿ ಮಾತಾಡಿಕೊಂಡರೆ ಮೂಗಿನಿಂದ ಸೋರುವ ಸಿಂಬಳವನ್ನು ಸೊರಕ್ಕೆಂದು ಎಳೆದುಕೊಂಡು ಕೊಬ್ಬಿನಿಂದ ಹೋಗುತಿದ್ದ. ಬೊಂಬೆ ಇವನ ಪ್ರತಿಷ್ಥೆಯ ಸಂಕೇತವಾಯಿತು. ರಾತ್ರಿ ಮಲಗುವಾಗ ಕೂಡ ಅದನ್ನು ತಟ್ಟಿ ಮಲಗಿಸುವವರೆಗೂ ಇವನಿಗೆ ನಿದ್ರೆ ಬರುತ್ತಿರಲಿಲ್ಲ.

ಶಾಲೆಗೇ ಹೋಗುವಂತಾಗುವವರೆಗೂ ಆ ಒಂದು ವರ್ಷ ಅವನ ದಿನಚರಿಯಲ್ಲಿ ಆ ಬೊಂಬೆ ಬೆರೆತು ಹೋಗಿತ್ತು. ರಾಜೇಶ ಶಾಲೆಗೇ ಹೋಗಿ ಬರುವವರೆಗೂ ಆ ಬೊಂಬೆ ಒಂಟಿತನದ ವಿರಹದಲ್ಲಿರುವ ಪ್ರೇಮಿಯು ಕಾಯುವಂತೆ ಕಾಯುತ್ತಿತ್ತು. ಇತ್ತ ರಾಜೇಶನಿಗೆ 'ಈಗ ಆ ಬೊಂಬೆ ನನ್ನ ಬಗ್ಗೇನೆ ಯೋಚಿಸ್ತಿರಬೇಕು' ಎಂಬ ಹಗಲುಗನಸುಗಳು ಪದೇ ಪದೇ ಮನಸ್ಸು ಪಾಠದಿಂದ ಮನೆಯಲ್ಲಿರೋ ಬೊಂಬೆಯ ಕಡೆ ಹೊರಳುತಿತ್ತು. ಬೂತಯ್ಯ ಮಾಸ್ತರು ಎಬ್ಬಿಸಿ ಪ್ರಶ್ನೆ ಕೇಳಿದಾಗ ಕಕ್ಕಬಕ್ಕಿಯಾಗಿ 'ಛೆ!, ಕನಸೆಲ್ಲ ಹಾಳು ಮಾಡಿದ್ರಲ್ಲ ಈ ಹಾಳಾದ ಮೇಷ್ಟ್ರು' ಎಂಬ ಮಾತುಗಳು ಅಲುಗಾಡದ ತುಟಿಗಳೊಳಗೆ ಕೇಳಿಸದಂತೆ ನುಡಿದು ಹೋದವು. ಆ ಕ್ಷಣ ಮಾಸ್ತರು ನಿಜವಾಗಿಯೂ ಭೂತದಂತೆಯೇ ಕಂಡರು. ಶಾಲೆ ಬಿಟ್ಟೊಡನೆ ಮನೆಗೆ ಓಡಿ ಬಂದು ತನ್ನ ಬೊಂಬೆ ಗೆಳಯನಿಗೆ 'ಮುಖ ತೊಳ್ಕೊಂಡು ಬರ್ತೀನಿ ತುಂಬಾ ಮಾತೊಡೋದಿದೆ...' ಅಂತ ಹೇಳಿಕೊಳ್ಳುತ್ತಲೇ ಬಟ್ಟೆ ಬದಲಿಸಿ ಹಿತ್ತಲ ಕಡೆ ಆತುರದಿಂದಲೇ ಹೋರಾಟ. ತೊಟ್ಟಿಯಲ್ಲಿ ಬುಳುಂ ಬುಳುಂ ಸದ್ದು ಮಾಡುತ್ತಾ ಚೊಂಬಿನಲ್ಲಿ ನೀರು ತುಂಬಿಕೊಂಡು ಆತುರಾತುರವಾಗಿ ಮುಖ ತೊಳೆದು, ಚೌಕದಲ್ಲಿ ಕೈ-ಕಾಲು ಒರೆಸಿಕೊಂಡು ಮುಖವನ್ನು ತನ್ನ ಅಂಗಿಯ ತೋಳಿನಲ್ಲಿ ತಿಕ್ಕಿಕೊಳ್ಳುತ್ತಾ ಬೊಂಬೆಯೆದುರು ಪ್ರತ್ಯಕ್ಷನಾದ. ತಣ್ಣಗಿನ ಒದ್ದೆ ತೋಳಿನಲ್ಲೇ ಬೊಂಬೆಯನ್ನು ಸವಾರಿ ಹೊತ್ತು ಜಗುಲಿಯ ಮೇಲೆ ಕೂರಿಸಿಕೊಂಡು ಶಾಲೆಯಲ್ಲಿನ ಅನುಭವವನ್ನೆಲ್ಲಾ ಹಂಚಿಕೊಂಡು ಹೊಸ ಗೆಳೆಯರ ಬಾಯಿ ಪರಿಚೆಯ ಮಾಡಿಸಿದ. ಬೊಂಬೆಯು ಕೂಡ ಅವನ ಮಾತುಗಳನ್ನು ಆಸ್ವಾದಿಸಿ ನಕ್ಕು ಪ್ರತಿಕ್ರಿಯೆ ನೀಡಿತು. ಶಾಲೆಯಲ್ಲಿನ ತನ್ನ ಹೊಸ ಗೆಳೆಯರನ್ನೆಲ್ಲ ಒಮ್ಮೆ ಪರಿಚಯಿಸುವುದಾಗಿ ಪ್ರತಿಜ್ಞೆ ಮಾಡಿ 'ಊಟಕ್ಕೆ ಬಾರೋ' ಎಂಬ ಅಮ್ಮನ ಕರೆಗೆ 'ಬಂದೆ....' ಎನ್ನುತ್ತಾ ಬೊಂಬೆಯನ್ನು ಮನೆ ಸೇರಿಕೊಂಡ. ಇಲ್ಲಿಯವರೆಗೂ ಊಟ ಮಾಡುವಾಗ ಪಕ್ಕದಲ್ಲಿ ಮಲಗಿಸಿಕೊಳ್ಳುತ್ತಿದ್ದವನು ಇವತ್ತು ಬೊಂಬೆಯನ್ನು ತೊಡೆಯ ಮೇಲೆ ಕೂರಿಸಿಕೊಂಡು ಊಟ ಮುಗಿಸಿದ. ಮಲಗುವಾಗ ಮಾಮೂಲಿನಂತೆ ತಟ್ಟಿ ಮಲಗಿಸಿ ತಾನು ಮಲಗಿದ. ಮಾಡಿದ ಪ್ರತಿಜ್ಞೆಯನ್ನು ಪಾಲಿಸದಿದ್ದರೆ ದೇವರು ಪರೀಕ್ಷೆಯಲ್ಲೂ ಪಾಸು ಮಾಡುವುದಿಲ್ಲವೆಂದು ನಂಬಿದ್ದ ರಾಜೇಶ ಅದೊಂದು ದಿನ ಬೊಂಬೆಯನ್ನು ಶಾಲೆಗೆ ಕರೆದುಕೊಂಡು ಹೋದ. ಬೂತಯ್ಯ ಮಾಸ್ತರರ ಕೆಂಗಣ್ಣಿಗೆ ಬೊಂಬೆಯೆನಾದರು ಬಿದ್ದರೆ ಸಿಗುವ ಶಿಕ್ಷೆಯ ಅರಿವಿದ್ದರೂ ಧೈರ್ಯವಾಗಿ ತನ್ನ ಪುಸ್ತಕದ ಚೀಲದೊಳಗೆ ಬಚ್ಚಿಟ್ಟುಕೊಂಡು ಕರೆ ತಂದ. ಊಟದ ಬಿಡುವಿನಲ್ಲಿ  ಗೆಳೆಯರಿಗೆಲ್ಲ ತನ್ನ ಚೆಡ್ಡಿ ದೊಸ್ತಿಯನ್ನು ಪರಿಚಯಿಸಿದ. 'ಹೇ, ನಿನ್ನ ಬೊಂಬೆ ಸಕ್ಕತ್ತಾಗಿದೆ ಕಣೋ' ಎಂದವರು ಹೇಳಿದಾಗ ಖುಷಿಯಿಂದ ಅವನ ಗರ್ವ ದ್ವಿಗುಣ ಆಗುತಿತ್ತು. ಮಧ್ಯಾಹ್ನದ ಬಿಸಿಯಲ್ಲಿ ಸಣ್ಣಗೆ ಉಸಿರಾಡಲು ತನ್ನ ಮೊಗವನ್ನು ಕೊಂಚ ಆಚೆಗೆ ಇರಿಸಿದ್ದ ಬೊಂಬೆಯನ್ನು ಬೂತಯ್ಯ ಮಾಸ್ತರು ನೋಡಿಬಿಟ್ಟರು. ಅವರ ಸ್ನೇಹಿತನಾದ ಬೆತ್ತದಿಂದ ಎರಡು ಸಿಹಿಯೇಟು ತಿಂದು ಆ ಮಧ್ಯಾಹ್ನವೆಲ್ಲಾ ಬೆಂಚಿನ ಮೇಲೆ ನಿಂತುಕೊಂಡೆ ಕಳೆದ.

ಎಪ್ರಿಲ್ ನಲ್ಲಿ ಪರೀಕ್ಷೆಗಳೆಲ್ಲಾ ಮುಗಿದು ಬೇಸಿಗೆ ರಜೆ ಶುರುವಾಗಿತ್ತು. ಹತ್ತು ತಿಂಗಳುಗಳ ಕಾಲ ಶಾಲೆಯಲ್ಲಿ ಮಾಡಿದ ಯುಧ್ಧಕ್ಕೆ ಈಗ ತೆರೆ ಬಿದ್ದಿತ್ತು. ಮನೆಯಲ್ಲಿ ' ಸ್ವರೂಪನನ್ನ ನೋಡು ಪ್ರತಿ ಸಾರಿ ನಿನಗಿಂತ ಜಾಸ್ತಿ ಅಂಕ ತರ್ತಾನೆ. ಈ ಸಾರಿ ಅವನಿಗಿಂತ ಜಾಸ್ತಿ ಅಂಕ ತರಬೇಕು ನೀನು. ಆಟ ಆಡೋದು ಬಿಟ್ಟು ಪುಸ್ತಕ ತಗೆದು ಓದೋ...!' ಎಂದು ಹತ್ತನೇ ತರಗತಿಯನ್ನು ಏಳನೇ ದಂಡಯಾತ್ರೆಯಲ್ಲಿ ಮುಗಿಸಿದ ಅಪ್ಪನ ಬೈಗುಳ, ಶಾಲೆಯಲ್ಲಿ ಮಾಸ್ತರು ಅಂಗೈ ಗಿಣ್ಣ ಮೇಲೆ ಕೊಡುತಿದ್ದ ಏಟುಗಳು, ಎಲ್ಲದಕ್ಕೂ ಬಿಡುವು ಸಿಕ್ಕಿತ್ತು. ಕಡೆಯ ದಿನದ ಬೂತಯ್ಯ ಮಾಸ್ತರು ರಚಿಸಿದ ಚಕ್ರವ್ಯೂಹವನ್ನು ಭೇದಿಸಿ ಗೆದ್ದ ಸಂತಸವನ್ನು ಮೊಗದಲ್ಲಿ ತುಂಬಿಕೊಂಡು ಮಕ್ಕಳು ಚಿಗರೆಗಳಂತೆ ಕುಣಿಕುಣಿದು ತಂತಮ್ಮ ಮನೆಯ ಕಡೆ ಹೆಜ್ಜೆಯಿಟ್ಟರು. ಶಾಲೆಯ ಬಾಗಿಲು ದಾಟುವ ಹೊತ್ತಿಗಾಗಲೇ ಎಲ್ಲರ ರಜೆಯ ಯೋಜನೆಗಳು ವಿನಿಮೆಯವಾಗಿದ್ದವು. ರಾಜೇಶನಿಗೆ ಬೇಸಿಗೆ ರಜೆಯೆಂದರೆ ಎಲ್ಲರಿಗಿಂತ ಒಂದು ಪಟ್ಟು ಹೆಚ್ಚು ಖುಷಿಯಾಗುತ್ತಿತ್ತು. ಪ್ರತಿ ರಜೆಯಲ್ಲೂ ಅಮ್ಮ ರಾಜೇಶನನ್ನು ತನ್ನ ತವರಿಗೆ ಕರೆದು ಕೊಂಡು ಹೋಗ್ತಾರೆ. ಅಜ್ಜಿಯ ಅಡುಗೆ, ತಾತನು ಎದೆಯ ಮೇಲೆ ಮಲಗಿಸಿಕೊಂಡು ಕುಂಟನೊಬ್ಬ ರಾಕ್ಷಸಿಯನ್ನು ಸೋಲಿಸಿ ತನ್ನ ತಂಗಿಯನ್ನು ಉಳಿಸುವ ಕಥೆಗಳನ್ನು ನೆನೆಸಿಕೊಂಡು ರಾತ್ರಿ ಬಹಳ ಹೊತ್ತಿನವರೆಗು ಬೊಂಬೆಯ ಕಣ್ಣುಗಳನ್ನೆ ನೋಡುತ್ತಾ ಹಾಗೆ ಉರುಳಿಕೊಂಡ. ಆ ಸಂಜೆಯೇ ಅಲ್ಲಿ ಅವನು ಆಡಬೇಕಾದ ಆಟಗಳ ಬಗ್ಗೆ ಬೊಂಬೆಯೊಂದಿಗೆ ಚರ್ಚಿಸಿ ಸಿದ್ಧಪಡಿಸಿದ ನೀಲಿ ನಕಾಶೆಯನ್ನು ಮನಸಿನಲ್ಲೇ ಇಟ್ಟುಕೊಂಡಿದ್ದ. ಇಬ್ಬರ ಕಣ್ಣುಗಳಲ್ಲಿ ಆ ನಕಾಶೆಯಲ್ಲಿನ ಕಲ್ಪನೆಗಳು ಮುಗಿಯುವವರೆಗೂ ನಿದಿರಾದೇವಿಯನ್ನು ಕಾಯುವಂತೆ ಮಾಡಿದ್ದರು.

ಮಾರನೆ ದಿನ ರಾಜೇಶ ಏಳುವ ಹೊತ್ತಿಗೆ ಅಮ್ಮ ಎದ್ದು ಊರಿಗೆ ಹೋಗಲು ಬಟ್ಟೆಗಳನ್ನು ಬುಟ್ಟಿಯಲ್ಲಿ ತುಂಬಿಕೊಂಡು ತಯಾರಿದ್ದರು. ರಾಜೇಶನು ಎದ್ದು ಆ ಕಲ್ಪನೆಗಳ ಗುಂಗಿನಲ್ಲೇ ತನ್ನ ಮುಂಜಾವಿನ ಕೆಲಸಗಳನ್ನು ಮುಗಿಸಿ ತಯಾರಾದ. ಬೊಂಬೆಯು ಕೂಡ ಹಿಂದಿನ ದಿನವೇ ಸೊಪಿನಿಂದ ಮಜ್ಜನ ಮಾಡಿಸಿಕೊಂಡು ಮಹಡಿಯ ತಂತಿಯ ಮೇಲೆ ಜೋಕಾಲಿಯಾಡುತ್ತಾ ತನ್ನ ಮೈ ಒಣಗಿಸಿಕೊಂಡಿತ್ತು. ಆ ಹಸಿರು ಪಟ್ಟಿಯ ಅಂಗಿಯಲ್ಲಿ ಹೊಸ ರಂಗು ತುಂಬಿಕೊಂಡಿತ್ತು. ಬಸ್ಸು ತನ್ನ ಕಪ್ಪು ಹೊಗೆಯುಗುಳುತ್ತ ಕಂಡಕ್ಟರ್ ಕೂಗುವ 'ರೈಟ್ ರೈಟ್'ಗೆ ಚಾಲಕನ ಮಾತು ಕೇಳುತ್ತಾ ತುಮಕೂರಿನೆಡೆಗೆ ಚಕ್ರ ತಿರುಗಿಸಿತು. 'ಇನ್ನೂ ಎಷ್ಟೊತ್ತಾಗುತ್ತಮ್ಮ ತುಮಕೂರು ಬರೋಕೆ?!' ಐದನೇ ಬಾರಿ ಅಮ್ಮನಿಗೆ ಪ್ರಶ್ನೆ ಕೇಳಿದ. ಹಿಂದೆ ಕುಳಿತವರಿಗೆ ಪದೇ ಪದೇ ಬರುವ ಈ ಪ್ರಶ್ನೆ ಕಿರಿಕಿರಿಯೆನಿಸಿದರೂ ಅಮ್ಮ ಮಾತ್ರ ತಾಳ್ಮೆಯಿಂದಲೇ 'ಆ ಮೈಲಿಗಲ್ಲಲಿರೋ ಸಂಖ್ಯೆ ಒಂದಾಗುವವರೆಗೂ ಉಲ್ಟಾ ಎಣಿಸ್ತಿರು ಬೇಗನೆ ಬರತ್ತೆ' ಅಂತ ಉತ್ತರಿಸಿದಳು. ಮುಂದೂಡುವ ಬಸ್ಸಿನಲ್ಲಿ ಹಿಂದೋಡುವ ಸಂಖ್ಯೆಗಳನ್ನು ನೋಡುತ್ತಾ ಕಿಟಕಿಯೆಡೆಗೆ ಮುಖ ಮಾಡಿದ. ಇವನೇನು ನೋಡುತ್ತಿದ್ದಾನೆ ಅನ್ನೋ ಕುತೂಹಲದಿಂದ ಬೊಂಬೆ ಕೂಡ ಕಿಟಕಿಯ ಕಂಬಿಯ ಮೇಲೆ ತಲೆ ಇಟ್ಟು ಇಣುಕುತ್ತಿತ್ತು. ರಾಚುತ್ತಿದ್ದ ತಂಗಾಳಿಯನ್ನು ಅನುಭವಿಸುತ್ತ ನಾಗುಮಾಮ ಸಂಜೆ ಮಹಾತ್ಮಗಾಂಧಿ ರಸ್ತೆಯಲ್ಲಿ ಕೊಡಿಸುವ ಪಾನಿಪೂರಿ ನೆನಿಸಿಕೊಂಡು ಬಂದ ನೀರನ್ನು ಹಾಗೆ ನುಂಗಿಕೊಂಡ. ಒಂದುಕಾಲು ಗಂಟೆಯ ಪ್ರಯಾಣದ ನಂತರ ತುಮಕೂರು ಬಂತು. ಬಸ್ ಸ್ಟಾಂಡ್ ಇಂದ ಅಜ್ಜಿ ಮನೆಗೆ ಮಾರುಕಟ್ಟೆಯ ಮುಖಾಂತರ ಇರುವ ಅಡ್ಡರಸ್ತೆ ರಾಜೇಶನಿಗೆ ಚನ್ನಾಗೇ ಗೊತ್ತು. ಅಮ್ಮನಿಂಗಿಂತ ಮುಂಚೆಯೇ ಮನೆ ತಲುಪಬೇಕೆಂದು ತನಗಾಗುವಷ್ಟು ದೊಡ್ಡ ಹೆಜ್ಜೆಗಳನ್ನಿಡುತ್ತ ಸಂತೆಯ ಸಂದಿಗಳಲ್ಲಿ ತೂರಿದ. ಗೆಜ್ಜೆಯಂತೆ ಘಲ್ಲೆಂದು ಶಬ್ದ ಮಾಡುವ ಗೇಟನ್ನು ನೂಕಿಕೊಂಡು ಬಂದವನೇ ಜಗುಲಿಯ ಮೇಲೆ ಬಿಳಿಯ ಪಂಚೆಯನ್ನುಟ್ಟು ಕುಳಿತಿದ್ದ ತಾತನನ್ನು ತಬ್ಬಿಕೊಂಡ. ತಾತ ಎತ್ತಿಕೊಂಡು ಪ್ರೀತಿಯ ಮುತ್ತಿಟ್ಟರು. ಅವನು ಪ್ರತಿಯಾಗಿ ಒಂದು ಮುತ್ತು ಕೊಟ್ಟ. ಅಂಗಳದಲ್ಲಿನ ಒಳಕಲ್ಲಿನಲ್ಲಿ ತುಂಬಿದ್ದ ನೀರು ಕುಡಿಯುತ್ತ, ಕಾಳು ಮೇಯುತ್ತಿರುವ ಪಾರಿವಾಳಗಳ ಆಟವನ್ನು ಅನುಭವಿಸಲು ಅಲ್ಲಿಯೇ ತಾತನ ತೊಡೆಯ ಮೇಲೆ ಆಸೀನನಾದ. ಇದೆಲ್ಲಾ ಸಂಭ್ರಮವನ್ನು ಆ ಬೊಂಬೆ ಅವನ ಮುಷ್ಟಿಯಲ್ಲಿ ಭದ್ರವಾಗಿದ್ದುಕೊಂಡೆ ಅನುಭವಿಸಿತು. ತಾತನಿಗೆ ಮೊಮ್ಮಗನ ಮೇಲೆ ಹೆಚ್ಚು ಪ್ರೀತಿ. ತಾತ ಕೊಟ್ಟ ಒಂದು ರೂಪಾಯಿಯನ್ನು ಜೋಪಾನವಾಗಿ ಬೊಂಬೆಯ ಜೇಬಿನಲ್ಲಿಟ್ಟುಕೊಂಡ. ಆ ನಾಣ್ಯ ಇಡೀ ಜೇಬನ್ನೇ ತುಂಬಿಕೊಂಡಿತು. ಹಿಂದಿನ ಬೀದಿಯ ಶೆಟ್ಟಿ ಅಂಗಡಿಯಲ್ಲಿ ಕೋವ ತಗೆದುಕೊಂಡು ಮಿಕ್ಕ ಎಂಟಾಣೆಯನ್ನು ಅದೇ ಜೇಬಿನಲ್ಲಿ ಜೋಪಾನವಾಗಿಟ್ಟನು. ಕೋವಾನ ಬೊಂಬೆಯ ಬಾಯಿಗೆ ಸವರಿ 'ನನ್ನ ಬೊಂಬೆ ಊಟನೂ ಮಾಡಲ್ಲ ತಿಂಡಿನೂ ತಿನಲ್ಲ. ಹೋಗ್ಲಿ ಬಿಡು ನಿನ್ನ ಪಾಲಿನದು ನಾನೇ ತಿಂತೀನಿ' ಏನೂ ತಿನ್ನದೇ ಹೋದರು ತನ್ನೊಂದಿಗೆ ಸದಾ ಅದೇ ಉತ್ಸಾಹದಲ್ಲಿ ಆಡುವ ಬೊಂಬೆಯ ಬಗ್ಗೆ ಆಶ್ಚರ್ಯ ಪಟ್ಟು ಕೋವ ಮುಕ್ಕಿ ಮುಗಿಸಿದ.

ಸ್ಕೂಲಿನ ಮೋಜು ಜೀವನ ಮುಗಿಸಿ ಆಗ ತಾನೇ ಹೊಸ ಹುರುಪು ತುಂಬುವ ಮೀಸೆ ರಾಜೇಶನ ಮೊಗದಲ್ಲಿ ಚಿಗುರಿತು. ಆದರೂ ಆ ಬೊಂಬೆಯೇ ರಾಜೇಶನ ಚಡ್ಡಿ ದೊಸ್ತಿಯ ಸ್ಥಾನವನ್ನು ಆಕ್ರಮಿಸಿಕೊಂಡಿತ್ತು. ಕಾಲೇಜಿನ ಚೆಲುವೆ ಕಮಲಾಳನ್ನು ರಾಜೇಶ ಇಷ್ಟ ಪಡುತ್ತಿರುವುದು ಆ ಬೊಂಬೆಗೆ ಮಾತ್ರ ತಿಳಿದಿತ್ತು. ಒಂದು ಸಲ ಎದುರು ಮನೆಯಲ್ಲಿ ಸತ್ಯನಾರಾಯಣ ಪೂಜೆ ನಡೆದಾಗ ಕೆಂಪನೆ ರೇಷ್ಮೆ ಲಂಗದ ಜೊತೆ ಚಿನ್ನದ ಬಣ್ಣದ ದಾವಣಿ ತೊಟ್ಟು ಬಂದಿದ್ದ ಕಮಲಾಳನ್ನು ಬೊಂಬೆಗೆ ತೋರಿಸಿ ಒಪ್ಪಿಗೆ ಪಡೆದಿದ್ದ. ಕಾಲೇಜು ಮುಗಿಯುವುದರಲ್ಲಿ ಅವಳಿಗೆ ಒಮ್ಮೆಯಾದರು ತನ್ನ ಪ್ರೇಮದ ಬಗ್ಗೆ ತಿಳಿಸಬೇಕೆಂದು ನಿಶ್ಚಯಿಸಿದ್ದ. ಹುಡುಗಿಯರನ್ನು ನೇರ ನೋಟದಿಂದ ನೋಡಲು ಅಂಜುತಿದ್ದವನಿಗೆ ಆ ದಿನ ಒಂದು ಮೊಂಡ ಧೈರ್ಯ ಮಾಡಿಯೇಬಿಟ್ಟ. 'ಇದು ಕಾಲೇಜಿನಲ್ಲಿ ಕಡೆಯ ವರ್ಷ ಹೇಗಾದರೂ ಮಾಡಿ ಕಮಲಾಳಿಗೆ ಹೇಳಲೇಬೇಕು'. ಮನಸುಗಳ ಈ ಮಾತಿಗೆ ಒಂದು ಪತ್ರ ಬರೆದು ಕೊಡುವುದು ಎಂದು ನಿರ್ಧರಿಸಿದ. ಆ ದಿನ ರಾತ್ರಿ ಎಲ್ಲರೂ ಮಲಗಿದ್ದರು. ಮನೆಯಲ್ಲೇ ಒಂದೇ ಮಲಗುವ ಕೋಣೆ ಇದ್ದಿದರಿಂದ ಅಪ್ಪ-ಅಮ್ಮ ಅಲ್ಲೇ ಮಲಗುತಿದ್ದರು. ರಾಜೇಶ ಮತ್ತು ಬೊಂಬೆ ಪಡಸಾಲೆಯ ದೀವಾನದ ಮೇಲೆ ಮಲಗುತಿದ್ದರು. ಈ ವ್ಯವಸ್ಥೆ ಆ ದಿನ ಅವನಿಗೆ ಅನುಕೂಲ ಮಾಡಿತ್ತು. ಆದರೂ ಪಡಸಾಲೆಯಲ್ಲಿ ದೀಪ ಹಾಕಿದರೆ ಅದರ ಬೆಳಕು ಮಲಗುವ ಕೋಣೆಯವರೆಗೂ ಸಾಗುವುದರಿಂದ ಅಡುಗೆ ಮನೆಯೇ ಪ್ರೇಮ ಪತ್ರಕ್ಕೆ ಸೂರಾಯಿತು. ಮೆಲ್ಲನೆ ಅಡುಗೆ ಮನೆಯ ಚಿಲಕ ಹಾಕಿಕೊಂಡು ದೀಪ ಹೊತ್ತಿಸಿ, ತಾನು ಬರೆಯುವುದು ಬೊಂಬೆಗೆ ಕಾಣುವಂತೆ ಪಕ್ಕದಲ್ಲಿದ್ದ ಕೊಳಗದ ಮೇಲೆ ಗೋಡೆಗೆ ಒರಗಿಸಿ ಕೂರಿಸಿಕೊಂಡ. 'ಲವ್ಲಿ ಕಮಲ....ಡಿಯರ್ ಕಮಲ....ಛೆ ಇದು ಬೇಡ,  ಪ್ರೀತಿಯ ಕಮಲ, ಹ್ಞೂ ಇದೆ ಸರಿ' ಮನಸಿನಲ್ಲೇ ಅಂದ್ಕೊಂಡು ಒಂದು ಪತ್ರ ಬರೆಯಲು ಶುರು ಮಾಡಿದ. ಇಪ್ಪತ್ತು ಪ್ರೇಮ ಕಾಗದಗಳು ನೆಲದಲ್ಲಿ ತಮ್ಮ ಅಸ್ತಿತ್ವ ಕಂಡುಕೊಂಡ ಮೇಲೆ ಅವನ ವಯ್ಯಸ್ಸಿನಷ್ಟೇ ಅದೃಷ್ಟ ಸಂಖ್ಯೆ, ಇಪ್ಪತ್ತೊಂದನೆ ಪತ್ರ ಕಡೆಯ ಪಾತ್ರವಾಗಿ ಅರಳಿತು. 'ಈ ಪತ್ರ ಚನ್ನಾಗಿದೆ ಇದನ್ನೇ ಕೊಡೋಣ ಏನಂತೀಯ?!' ನಿಟ್ಟುಸಿರು ಬಿಟ್ಟು ಇತ್ತ ಪ್ರಶ್ನೆಗೆ ಬೊಂಬೆ ಹ್ಞೂ ಎಂದಿತು. ಆ ಪತ್ರವನ್ನು ಕೆಂಪನೆ ಲಕೊಟೆಯೊಳಗೆ ಹಾಕಿ ಎರಡು ಗಂಟೆಯ ಅರ್ಧ ರಾತ್ರಿಯಲ್ಲಿ ದೇವರ ಮುಂದಿಟ್ಟು 'ನನ್ನ ಪ್ರೀತಿನ ಅವಳು ಒಪ್ಪೋ ಹಾಗೆ ಮಾಡಪ್ಪ' ಎಂಬ ಬೇಡಿಕೆಯಿಟ್ಟು ಬೊಂಬೆ ಮತ್ತೆ ರಾಜೇಶ ದೇವರಿಗೆ ಅಡ್ಡ ಬಿದ್ದರು.

ಸಂಜೆ ಮನೆಗೆ ಬಂದವನೇ ನೇರ ತನ್ನ ಕೋಣೆಯೊಳಗೆ ಹೊಕ್ಕು ಬೊಂಬೆಯನ್ನು ಅಪ್ಪಿಕೊಂಡು ಮಂಚದ ಮೇಲೆ ಉರುಳಿದ. ಮಗನನ್ನು ಒಮ್ಮೆಯೂ ಈ ರೀತಿ ನೋಡದ ತಾಯಿಗೆ ಆತಂಕದಿಂದ ಕೋಣೆಯ ಬಾಗಿಲ ಹತ್ತಿರ ಬಂದು ನಿಂತಳು. ತನ್ನ ಅಳು ಕೇಳಿಸಿದರೆ ಅಮ್ಮ ಆತಂಕ ಪಡುತ್ತಾಳೆಂದು ತಲೆದಿಂಬನ್ನು ಮುಖಕ್ಕೆ ಒತ್ತಿಕೊಂಡಿದ್ದರೂ ಆ ಶಬ್ದ ಕೋಣೆಯ ಬಾಗಿಲು ತಟ್ಟಿ ಆಚೆ ಬಂದು ಅಮ್ಮನ ಕರುಳಿಗೆ ತಾಕಿತು. ಅವನ ಪಕ್ಕದಲ್ಲಿ ಕುಳಿತು ಅವನ ತಲೆಯನ್ನು ತನ್ನ ಮಡಿಲಿಗೆ ಎಳೆದುಕೊಂಡಳು. ಅವನ ಕಣ್ಣೀರಿನಲ್ಲಿ ತೋಯ್ದುಹೋಗಿದ್ದ ಬೊಂಬೆಯನ್ನು ಬಿಡಿಸಿ ಪಕ್ಕಕ್ಕಿಟ್ಟರು. ಅದನ್ನು ಮತ್ತೆ ಎಳೆದು ಅಪ್ಪಿಕೊಂಡ. ಕಮಲಾಳನ್ನು ಇಷ್ಟ ಪಟ್ಟದ್ದು ಅವಳು ಇವನ ಪ್ರೇಮವನ್ನು ನಿರಾಕರಿಸಿದ್ದು ಎಲ್ಲವನ್ನು ಹೇಳಿಕೊಳ್ಳದೆ ಇರಲಾಗಲಿಲ್ಲ. ಬೆಚ್ಚನೆಯ ಮಡಿಲು ತಲೆಯ ಮೇಲೆ ನೇವರಿಸುತ್ತಿದ್ದ ಕೈ ಮಾತಿಲ್ಲದೆ ಸಮಾಧಾನವನ್ನು ತುಂಬುವ ಕೆಲಸ ಮಾಡುತಿತ್ತು. ಆ ದಿನ ಮಲಗುವಾಗ ರಾಜೇಶ ಬೊಂಬೆಯನ್ನು ತಟ್ಟಿ ಮಲಗಿಸಲಾಗಲಿಲ್ಲ. ಬೊಂಬೆಗೂ ಅವನ ಸಂಕಟದ ಅರಿವಿತ್ತು. ಹೆಚ್ಚಾಗಿ ಗೆಳಯರಿಲ್ಲದ ರಾಜೇಶ ಮೌನವಾಗಿಯೇ ತನ್ನ ಸಂಕಟವನ್ನು ಹಲವು ಸಂಜೆಗಳವರೆಗೂ ಬೊಂಬೆಯೊಂದಿಗೆ ಹಂಚಿಕೊಳ್ಳುತ್ತಿದ್ದ. ಪ್ರತಿ ಬಾರಿಯೂ ಅವನ ನೋವಿಗೆ ಸ್ಪಂದಿಸಿ ಆ ಬೊಂಬೆ ಸಮಾಧಾನ ಹೇಳುತಿತ್ತು. ಒಂದು ಬಾರಿ ಓದಿದರೆ ಎಲ್ಲವನ್ನು ಕಡೆಯವರೆಗೂ ಹಾಗೆಯೇ ಇರಿಸುವ ಅವನ ಜ್ಞಾಪಕ ಶಕ್ತಿ ಪದವಿಯ ಕಡೆಯ ಪರೀಕ್ಷೆಯಲ್ಲಿ ಓದಿನ ಕಡೆ ಅಷ್ಟಾಗಿ ಗಮನ ಹರಿಯದಿದ್ದರೂ ಸಾಮಾನ್ಯ ದರ್ಜೆಯಲ್ಲಿ ಉತ್ತೀರ್ಣನಾಗುವಂತೆ ಮಾಡಿತ್ತು.

*    *    *    *

ರಾಜೇಶನಿಗೆ ಇಪ್ಪತ್ತೈದಾದರೂ ಅವನ ರಹಸ್ಯವೆಲ್ಲ ತಿಳಿದಿದ್ದ ಬೊಂಬೆಯೆ ಅವನ ಉತ್ತಮ ಸ್ನೇಹಿತನಾಗಿತ್ತು. ಬ್ಯಾಂಕಿನ ಪರೀಕ್ಷೆಯನ್ನು ನಿರಾಯಾಸವಾಗಿ ಗೆದ್ದು ತುಮಕೂರಿನ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನಲ್ಲಿ ಕೆಲಸ ಗಿಟ್ಟಿಸಿದ್ದರೂ ಕಾಮಲಾಳ ನೆನಪು ಮಾತ್ರ ಅವನಲ್ಲಿ ಇನ್ನೂ ಮಾಸಿರಲಿಲ್ಲ. ಎರಡು ವರ್ಷದ ಹಿಂದೆ ಅಮ್ಮನ ತವರೂರಿನಲ್ಲಿ ಕಟ್ಟಿಸಿ ಬಾಡಿಗೆಗೆ ಕೊಟ್ಟಿದ್ದ ತಮ್ಮ ಮನೆಗೆ ವೆಂಕಟೇಶಯ್ಯನವರ ಕುಟುಂಬ ಗೃಹ ಪ್ರವೇಶ ಮಾಡಿತು. ರಾಜೇಶನಿಗೆಂದೆ ಇದ್ದ ಕೋಣೆಯಲ್ಲಿ ದೊಡ್ಡ ಮೇಜಿನಲ್ಲಿ ಜೋಡಿಸಿದ್ದ ಬೆಳ್ಳನೆ ಹೊಸ ಕಂಪ್ಯೂಟರಿನ ಮೊನಿಟರ್ ಮೇಲೆ ಕೂತು ಮೆರೆಯುವ ಅವಕಾಶ ಬೊಂಬೆಗೆ ಈ ಹೊಸ ಮನೆಯಲ್ಲಿ ಸಿಕ್ಕಿತ್ತು. 'ಹುಡುಗನಿಗೆ ಕೆಲಸ ಸಿಕ್ಕಿ ಆಯ್ತು. ಇನ್ನೇನು ಒಂದು ಮದುವೆ ಮಾಡೋದು ತಾನೆ' ಎನ್ನುವ ಪ್ರಶ್ನೆಗಳಿಂದ ಶ್ರೀಮತಿ/ಶ್ರೀ ವೆಂಕಟೇಶಯ್ಯ ಹೆಚ್ಚು ದಿನಗಳವರೆಗೆ ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಮಗನಿಗೆ ಮದುವೆ ಮಾಡಿ ತಮ್ಮ ಜವಾಬ್ದಾರಿ ತೊಳೆದುಕೊಳ್ಳುವುದಕ್ಕೆ ಯೋಜನೆ ಹಾಕತೊಡಗಿದರು. ತಂದೆ ತಾಯಿಯ ಅನ್ವೇಷಣೆಯ ಫಲವಾಗಿ ಬಂದ ಭಾವ ಚಿತ್ರಗಳನ್ನೂ ನೋಡಲು ಅವನಲ್ಲಿದ್ದ ವಿರಹ ಆಸ್ಪದ ಕೊಡುತ್ತಿರಲಿಲ್ಲ. ಏನೇ ಬಲವಂತವಾಗಿ ಹುಡುಗಿ ನೋಡಲು ಕರೆದುಕೊಂಡು ಹೋದರೂ ಸುಂದರಿಯರ ಮೊಗದಲ್ಲಿ ಕಾಮಲಾಳ ಪ್ರತಿಬಿಂಬ ಕಂಡು ಎನೂಂದು ಮಾತಾಡದೆ  ಕಾಪಿ ಹೀರಿ ಬಂದುಬಿಡುತಿದ್ದ. ಹಿಂತಿರುಗಿ ಬಂದವನು ತನ್ನ ಕೋಣೆಯೊಳಗೆ ಹೋಗಿ ಚಿಲಕ ಜಡಿದು ಬೊಂಬೆಯ ಕಣ್ಣುಗಳನ್ನೇ ನೋಡುತ್ತಾ ಮೌನವಾಗಿ ಕೂತುಬಿಡುತಿದ್ದ. ಅದರಲ್ಲಿ ಅವನ ಕಾಲೇಜು ದಿನಗಳ ಘಟನೆಗಳು ಕಪ್ಪು ಬಿಳುಪು ಚಲನಚಿತ್ರದಂತೆ ಕಾಣುತಿತ್ತು. ಸ್ನೇಹಿತರ ಬಳಿ ಅಪ್ಪ ಅಮ್ಮ ಹೇಳಿದ ದೂರು, ನಾಗುಮಾಮನ ಅನುಭವದ ಮಾತುಗಳು ಯಾವುದು ಕೂಡ ಪರಿಣಾಮ ಬೀರಿದಂತೆ ಕಾಣಲಿಲ್ಲ. ಹಲವು ಜ್ಯೋತಿಷಿಗಳ ಮಂತ್ರಗಳು ವ್ರತಗಳು ಆ ನೆನಪನ್ನು ಅಳಿಸುವಲ್ಲಿ ಸೂತುಹೋದವು.

ಬೆಂಗಳೂರನ್ನು ಅಷ್ಟಾಗಿ ಸುತ್ತಿರದ ಅಮ್ಮನನ್ನು ಕರೆದುಕೊಂಡು ಒಮ್ಮೆ ಕಾರ್ಡ್ ರಸ್ತೆಯಲ್ಲಿನ ಛತ್ರದಲ್ಲಿ ನಡೆಯುತಿದ್ದ ತಮ್ಮ ನೆಂಟರ ಮದುವೆಗೆ ಬಂದಿದ್ದ. ಆರತಕ್ಷತೆಯಲ್ಲಿ ತಮ್ಮ ಮಗನನ್ನು ಕಲ್ಪಿಸಿಕೊಂಡು ತುಸು ಸಂತಸ ಪಟ್ಟರೂ, 'ಇವನು ಯಾವಾಗ ಹೀಗೆ ನಿಲ್ಲೋದು' ಅನ್ನೋ ಯೋಚನೆ ತುಸು ಬೇಸರವನ್ನೂ ಅಮ್ಮನಲ್ಲಿ ತಂದಿತ್ತು. ವಲ್ಲದ ಮನಸ್ಸಿನಿಂದಲೇ ಗಂಡು ಹೆಣ್ಣಿನ ಪಕ್ಕ ನಿಂತು ಸಂಪ್ರದಾಯವೆಂಬಂತೆ ಒಂದು ಫೋಟೋ ಕ್ಲಿಕ್ಕ್ಕಿಸಿಕೊಂಡಾಯಿತು. ಮುಂದಿನ ಸಾಲುಗಳಲ್ಲೇ ನಡೆಯುತ್ತಿದ್ದ ಮಹಿಳ ಸಭೆಯೊಳಗೆ ಅಮ್ಮ ತೂರಿಕೊಂಡರು. ಹೆಂಗಸರ ಮಾತು ಮುಗಿಯುವುದು ಅಷ್ಟು ಸುಲಭವಲ್ಲವೆಂದು ಗೊತ್ತಿದ್ದ ರಾಜೇಶ ಹಿಂದಿನ ಸಾಲುಗಳಲ್ಲಿ ಹೋಗಿ ಒಬ್ಬನೇ ಕೂತ. ಅಲ್ಲಿಯ ತನಕ ಪಕ್ಕದವರ ಮಾತು ಕೇಳಿಸದಷ್ಟು ಸದ್ದು ಮಾಡುತಿದ್ದ ವಾದ್ಯಗಳು ಉಂಡು ಮಲಗಿರುವ ತಮ್ಮ ಯಜಮಾನರ ಪಕ್ಕದಲ್ಲಿ ಮೌನವಾಗಿ ಉರುಳಿಕೊಂಡಿದ್ದವು. ತಾಂಬೂಲ ಚೀಲವನ್ನು ಪಕ್ಕದ ಕುರ್ಚಿಯಲ್ಲಿಟ್ಟು ಆರಾಮವಾಗಿ ಕಾಲುಗಳನ್ನು ಚಾಚಿಕೊಂಡು ಕುರ್ಚಿಗೆ ಒರಗಿಕೊಂಡ. 'ಆಡಿದ್ದು ಸಾಕು ಊರಿಗೆ ಹೋಗಬೇಕು ಬಾರೋ' ಎನ್ನುವ ಅಮ್ಮಂದಿರ ಮಾತುಗಳು ಕೇಳಿಸಿಯೂ ಕೇಳಿಸದಂತೆಎದುರುಗಡೆಯ ಕುರ್ಚಿಗಳನ್ನು ಜೋಡಿಸಿಕೊಂಡು 'ರೈಲು ಬಂತು ರೈಲು' ಎಂದು ಆಡುತಿದ್ದ ಕಂದಮ್ಮಗಳನ್ನು ನೋಡಿತಿದ್ದ. ಬೊಂಬೆಯನ್ನು ಕುರ್ಚಿಯಲ್ಲಿ ಕೂರಿಸಿ 'ರೈಲು ಬಂತು ಜಾಗ ಬಿಡಿ' ಅಂತ ಕೂಗಿಕೊಂಡು ಮದುವೆಮನೆಗಳಲ್ಲಿ ಆಡುತಿದ್ದುದು ನೆನಪುಗಳು ಒಳಗೊಳಗೇ ನಗು ತಂದಿತು. ಆ ನಗು ಮನಸಿನ ಎಲ್ಲೆಯನ್ನು ದಾಟಿ ತುಟಿಗಳಲ್ಲಿ ಅರಳಿ ಅವನ ಮೊಗವನ್ನು ಆವರಿಸಿತ್ತು. 'ಏನೋ ರಾಜೇಶ ಹೇಗಿದ್ದೀಯ...!', ಕೂಗಿದ್ದು ಯಾರೆಂದು ಹಿಂದೆ ನೋಡುವ ಹೊತ್ತಿಗೆ ಕೈಯ್ಯೊಂದು ಅವನ ಭುಜ ಸವರಿ ಪರಿಚಯದ ದೇಹವೊಂದು ರೈಲಿನ ಬೋಗಿಯನ್ತಿದ್ದ ಕುರ್ಚಿಯೊಂದನ್ನು ಎಳೆದುಕೊಂಡು ಕೂತುಬಿಟ್ಟಿತು. ಕೈಕುಲುಕುತ್ತಲೇ ಹಳೆಯ ನೆನಪಿನ ಪುಸ್ತಕದಲ್ಲಿ ಆ ಮುಖದ ಹೋಲಿಕೆ ಹುಡುಕಿದ. ಅದು ಸ್ವರೂಪ. ಇವನ ಮಾದರಿ ಕೊಟ್ಟು ಬರುತ್ತಿದ್ದ ಅಪ್ಪನ ಬೈಗುಳಗಳು ಹಾಗೆ ಕಿವಿಯಲ್ಲಿ ಪಿಸುಗುಟ್ಟಿದವು. ಒಬ್ಬನೇ ಇದ್ದರಿಂದ ಬೇರೆ ನೆಪವಿಲ್ಲದೆ ಅವನೊಂದಿಗೆ ಮಾತಿಗಿಳಿದ. ಶಾಲೆಯ ನೆನಪುಗಳು, ನಂತರದ ಬದುಕಿನ ಪಯಣದ ಪುಟಗಳನ್ನು ಇಬ್ಬರೂ ತಿರುವು ಹಾಕಿದರು. 'ನನಗೆ ಮದುವೆ ಆಯ್ತು ಕಣೋ, ಸಾರಿ ತಿಳಿಸೋಕೆ ಆಗ್ಲಿಲ್ಲ' ಕ್ಷಮೆಯಾಚಿಸಿದಂತೆ ಸ್ವರೂಪ ಹೇಳಿಕೊಂಡ. ರಾಜೇಶನಿಗೆ ಆ ಮಾತುಗಳು ಆಶ್ಚರ್ಯವೇನು ಕೊಡಲಿಲ್ಲ. ಇವನು ಸಾಫ್ಟ್ವೇರ್ ಇಂಜಿನಿಯರ್ ಆಗಿ ಒಂದು ಬಹುರಾಷ್ಟ್ರೀಯ ಕಂಪನಿಯಲ್ಲಿ ಕೆಲಸ ಹೊಡೆದು ಯಾರನ್ನೋ ಪ್ರೀತಿಸಿ ಮದುವೆಯಾದ ಅನ್ನುವ ಸುದ್ದಿ ಅದಾಗಲೇ ರಾಜೇಶನಿಗೆ ತನ್ನ ಗೆಳೆಯ ಬಳಗದ ವಾರ್ತೆಗಳ ಮೂಲಕ ಗೊತ್ತಿತ್ತು. ಆ ಹುಡುಗಿಯು ಇವನು ತರುವ ಸಂಬಳಕ್ಕೆ ಮಾರು ಬಿದ್ದಿದಳು ಎನ್ನುವ ಅಂಶವು ಅವನಿಗೆ ಗೊತ್ತಿತ್ತು. ಆದರೂ ಗೊತ್ತಿರದವಂತೆ ಸಣ್ಣಗೆ ನಕ್ಕು 'ಹ್ಯಾಪಿ ಮ್ಯಾರಿಡ್ ಲೈಫ್' ಎಂದು ಶುಭಾಶಯ ಚಲ್ಲಿದ. ಮಡದಿಯನ್ನು ಪರಿಚಯ ಮಾಡಿಸುವುದಾಗಿ 'ಡಿಯರ್, ಸ್ವಲ್ಪ ಬಾಯಿಲ್ಲಿ ನನ್ನ ಗೆಳೆಯನನ್ನ ಪರಿಚೆಯಿಸ್ತೀನಿ' ಅಂತ ಸ್ವರೂಪ ಕರೆದಾಗ ರಾಜೇಶನಿಗೆ ಬಡಿತವೆ ನಿಂತಂತಾಯ್ತು. ಹೌದು!, ತೊದಲು ನುಡಿಯಲ್ಲಿ ಅಮ್ಮ ಎಂದು ಅಳುತಿದ್ದ ಮಗುವನ್ನು ಎತ್ತಿಕೊಂಡು ಬಂದವಳು ಕಮಲ!. ಏನೂ ಮಾತಾಡಲು ತೋಚದೆ 'ಊರಿಗೆ ಹೋಗ್ಬೇಕು ತಡ ಆಗುತ್ತೆ' ಅಂದು ನೆಪವೊಡ್ಡಿ ಮಹಿಳ ಮಣಿಗಳ ಮಧ್ಯ ಇನ್ನೂ ಮಾತು ಮುಗಿಸಿರದ ಅಮ್ಮನನ್ನು ಕರೆದುಕೊಂಡು ಆತುರಾತುರವಾಗಿ ಹೊರಟುಬಿಟ್ಟ. ರಾತ್ರಿ ಮನೆ ಸೇರುವ ಹೊತ್ತಿಗೆ ಗಂಟೆ ಹನ್ನೊಂದು ಬಾರಿಸಿತ್ತು. ದೀಪ ಆರಿಸಿ ಮಂಚದ ಮೇಲೆ ಉರುಳಿಕೊಂಡ. ಕತ್ತಲಿದ್ದರೂ ಬೀದಿ ದೀಪದ ತೆಳ್ಳನೆ ಬೆಳಕು ಕಿಟಕಿಯ ಗಾಜನ್ನು ಸೀಳಿಕೊಂಡು ವದ್ದೆಯಿರುವ ರಾಜೇಶನ ಕಣ್ಣುಗಳಲ್ಲಿ ಮಿಂಚುತಿತ್ತು. ಆ ಮಿಂಚು ಬೊಂಬೆಯ ಕಣ್ಣುಗಳನ್ನೇ ನೋಡುತ್ತಿತ್ತು. ಬೊಂಬೆ ಅಲುಗಾಡಿದಂತೆ ಅನಿಸಿತು, ನೋಡು ನೋಡುತ್ತಿದ್ದಂತೆ ಬೊಂಬೆ ಆ ಮಾನಿಟರಿನಿಂದ ಇಳಿದು ಅವನ ಬಳಿಗೆ ಬಂತು. ಅವನ ತಲೆಯನ್ನು ಸವರುತ ಕೂದಲಲ್ಲಿ ಕೈಗಳನ್ನಾಡಿಸಿತು. ಸ್ವಲ್ಪ ಹಿತವೆನಿಸಿ ಕಣ್ಮುಚ್ಚಿದ. ವಿರಹದ ಬೆಂಕಿ ಬೊಂಬೆಯ ಆ ಪ್ರೀತಿಯಲ್ಲಿ ಆ ಕ್ಷಣ ಕರಗಿಹೋಯಿತು. ಬೊಂಬೆಯ ಕೈಗಳನ್ನು ಹಿಡಿಯಲು ಪ್ರಯತ್ನಿಸಿದಾಗ ಬಳೆಗಳು ಸಿಕ್ಕಂತಾಗಿ ಕಣ್ಣು ತೆರದ. ಬೆಳಕು ಹರಿದಿದ್ದರಿಂದ ಕಣ್ಣುಜ್ಜಿ ನೋಡಿದಾಗ ಅಮ್ಮ ಪಕ್ಕದಲ್ಲಿದ್ದರು, ಬೊಂಬೆ ತನ್ನ ಸ್ಥಾನದಲಿ ಅದೇ ಅರಾಮಿನಿಂದ ಕೂತಿತ್ತು. ಅದರ ಮುಂದಿನ ವಾರವೇ ಶೀಲಾಳನ್ನು ನೋಡಲು ಅಣಿಯಾಗಿ ಹೋರಾಟ. ಭಾವನೆಗೆ ತಕ್ಕ ಪದಗಳು ಸಿಗುವಂತೆ ರಾಜೇಶನಿಗೆ ಶೀಲಾ ಸರಿಯಾದ ಜೋಡಿಯಾಗಿದ್ದಳು.

*    *    *    *    *

ಫೆಬ್ರವರಿಯಲ್ಲಿ ರಾಜೇಶ ನಿವೃತ್ತಿಯಾದ ಮೇಲೆ ತಮ್ಮ ಜೊತೆಯೇ ಬಂದಿರಬೇಕೆಂಬುದು ಹೇಮಾಳ ಹಠವಾಗಿತ್ತು. ಮಗಳು ಹೇಮಾ ಈಗ ನ್ಯೂಯಾರ್ಕ್ ನಲ್ಲಿ ಗಂಡನ ಜೊತೆಗಿದ್ದಾಳೆ ಆಗಾಗ ಮಾಡುವ ವಿದೇಶಿ ದೂರವಾಣಿ ಕರೆಗಳು, ಹರಟೆ ಕಟ್ಟೆಯಲ್ಲಿ ಹರಟುವ ಮಾತುಗಳು, ಇಲ್ಲವೇ 'ವೀಡಿಯೊ ಚಾಟ್'ಗಳೇ  ರಾಜೇಶ ಮತ್ತು ಶೀಲಾಳಿಗೆ ಮಗಳ ಮಾತು ಕೇಳುವ ಇಲ್ಲವೇ ನೋಡುವ ಸೌಭಾಗ್ಯ. ತಮ್ಮ ಮೊಮ್ಮಕ್ಕಳನ್ನು ಸಹ ಅವರು ಕಳಿಸಿದ ಅಡಕತಟ್ಟೆಯಲ್ಲಿ (compact disc - CD) ನೋಡಿ ಎದುರಿಗೆ ಕಂಡಂತೆ ಆನಂದಿಸಿದ್ದರು. ಆ ಬೊಂಬೆಯನ್ನು ಬಿಟ್ಟು ಕಂಪ್ಯೂಟರ್ ಆಟಗಳಲ್ಲೇ ಹೆಚ್ಚು ಸಂತೋಷ ಕಾಣುತಿದ್ದ ಹೇಮಾ, ತಾನು ವಿದೇಶದಲ್ಲಿರುವ ಸಾಫ್ಟ್ವೇರ್ ಇಂಜಿನಿಯರ್ ನನ್ನು ವರಿಸಿ ಅಲ್ಲಿಯೇ ಬೇರೂರುವ ಸೂಚನೆಗಳನ್ನು ಆಗಲೇ ಕೊಟ್ಟಿದ್ದಳು. ಕರ್ನಾಟಕವನ್ನೇ ಸರಿಯಾಗಿ ಸುತ್ತಿರದ, ಮನೆಯಲ್ಲೇ ಇರುವ ಶೀಲಾಗೆ ತಮ್ಮ ಮಗಳು ಒಮ್ಮೆಯಾದರೂ ವಿದೇಶ ಸುತ್ತಿಸುವಳೆಂಬ ಹಂಬಲ ಒಂದು ಆಸೆಯನ್ನು ಅವಳ ಮನದಲ್ಲಿ ಹುಟ್ಟುವಂತೆ ಮಾಡಿತ್ತು. ಹೇಮಾ ತನ್ನ ತಾಂತ್ರಿಕ ವಿದ್ಯಾಭ್ಯಾಸ ಮುಗಿಸಿ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯ ಅರ್ಥವಾಗದ ಹೆಸರಿರುವ ಕಂಪನಿಯಲ್ಲಿ ಕೆಲಸಕ್ಕೆ ಸೇರಿದಳು. ವೆಬ್ ಪುಟಗಳ ಸ್ನೇಹ ಜಾಲದಲ್ಲಿ ವಿಹರಿಸುವ ಹೇಮಾಳ ಭಕ್ತಿಗೆ ಮೆಚ್ಚಿ ಆ ಅಂತರ್ಜಾಲ ದೇವರು ಕರುಣಿಸಿದ ವರ(ನೆ)ವೆ ಸಂದೀಪ್. ಮೊದಲೇ ಪ್ರೀತಿಯ ಅನುಭವವಿದ್ದ ರಾಜೇಶನಿಗೆ ಮಗಳನ್ನು ಕಂಪ್ಯೂಟರ್ ಜಾತಿಯ, ಸಾಫ್ಟ್ವೇರ್ ಕುಲದ ಸಂದೀಪನೊಂದಿಗೆ ಮದುವೆ ಮಾಡಲು ಯಾವುದೇ ಅಭ್ಯಂತರವಿರಲಿಲ್ಲ. ಮನೆಯನ್ನು ಚಂದ್ರುವಿಗೆ ಮಾರಿ ಮಗಳ ಬಳಿಗೆ ಹೋಗಿ ತಮ್ಮ ಜೀವನ ಕಳೆವುದಾಗಿ ದಂಪತಿಗಳು ನಿಶ್ಚಯಿಸಿದರು. ಸುಮುದ್ರವನ್ನು ದಾಟಿ ತಮ್ಮ ದೇಶವನ್ನು ಬಿಟ್ಟು ಮಗಳ ಬಳಿಗೆ ಹಾರಿದರು. ಅತ್ಯಾಧುನಿಕ ಆಟಿಕೆಗಳು, ಮಾತಾಡುವ ಬೊಂಬೆಗಳೊಂದಿಗೆ ಬೆಳೆಯಿತ್ತಿದ್ದ ಇಬ್ಬರೂ ಮೊಮ್ಮಕ್ಕಳು 'ಹಾಯ್ ಗ್ರಾಂಡ್ಪಾ' ಎಂದು ಕರೆದಾಗ ಸ್ವಲ್ಪ ಕಸಿವಿಸಿ ಎನಿಸಿದರೂ ಇವರಿಗೆ ಕನ್ನಡ ಕಲಿಸಲೇ ಬೇಕು ಎಂಬ ಹಠ ರಾಜೇಶನಲ್ಲಿ ಬಂತು.

'ಮನೆನ ತುಂಬಾ ಚನ್ನಾಗೇ ಇಟ್ಕೊಂಡಿದ್ದೀರ. ನೀವು ಏನಾದ್ರೂ ಮಗಳ ಹತ್ರ ಹೋಗೋದಾದ್ರೆ ಈ ಮನೆನ ನನಗೆ ಕೊಡಬೇಕು' ಅದೇ ಬ್ಯಾಂಕಿನಲ್ಲಿ ಕೆಲಸ ಮಾಡುತಿದ್ದ ಚಂದ್ರು ತನ್ನ ಸೀನಿಯರ್ ಮ್ಯಾನೇಜರ್ ರಾಜೇಶನಲ್ಲಿ ಕೇಳಿಕೊಂಡಿದ್ದ. ಅದರಂತೆ ಆ ಮನೆ ಅವನಿಗೆ ಸಿಕ್ಕಿತ್ತು. ಒಂದನೇ ತರಗತಿಯಲ್ಲಿ ಓದುವ ಚಂದ್ರುವಿನ ಮಗ ಸುಮಂತನ ಶಾಲೆಗೇ ಈ ಮನೆ ಸಮೀಪವಾಗಿತ್ತು. ಬಸವ ಜಯಂತಿಯಂದು ಹಾಲು ಹುಕ್ಕಿಸಿ ಅವನ ಕುಟುಂಬ ಮನೆಯೊಳಗೆ ಅಧಿಕೃತ ಪ್ರವೇಶ ಮಾಡಿತು. ಸುಮಂತನಿಗೆ ಸ್ವಂತ ಮನೆಯ ವೈಭವ ಹೆಚ್ಚು ಖುಷಿ ತಂದಿತ್ತು. 'ಅಟ್ಟದ ಮೇಲೆ ಕೆಲವು ಸಾಮಾನುಗಳ ಪೆಟ್ಟಿಗೆ ಇದೆ. ನಿನಗೆ ಅದರಲ್ಲಿ ಯಾವುದಾದರು ಬೇಕಿದ್ದರೆ ಇಟ್ಕೋ ಇಲ್ಲ ಅಂದ್ರೆ ನಿನಗೆ ತೋಚಿದ ಹಾಗೆ ಮಾಡ್ಕೋ' ಎಂದು ತನ್ನ ಸಿನಿಯರ್ ಮ್ಯಾನೇಜರ್ ಹೇಳಿದ್ದು ಚಂದ್ರುವಿಗೆ ನೆನಪಾಗಿ ತಕ್ಷಣ ರಾಜೇಶನ ಅಳಿದುಳಿದ ಆಸ್ತಿಯನ್ನು ಪರೀಕ್ಷಿಸಲು ಆ ಪೆಟ್ಟಿಗೆಯನ್ನು ಕೆಳಗಿಳಿಸಿದ. ಅದರ ತುಂಬಾ ಹೇಮಾ ಆಡದೆ ಬಿಟ್ಟ ಆಟಿಕೆಗಳಿದ್ದವು. ಸುಮಂತನಿಗೆ ಆಟಿಕೆಗಳೊಂದಿಗೆ ಆಡುವುದೆಂದರೆ ತುಂಬಾ ಇಷ್ಟ ಎನ್ನುವ ಸಂಗತಿ ಚಂದ್ರುವಿನಿಂದ ಹಲವು ಬಾರಿ ರಾಜೇಶ ಕೇಳಿದ್ದ. ಪೆಟ್ಟಿಗೆ ತೆರೆಯುತ್ತಿದ್ದಂತೆ ಸುಮಂತ ಖುಷಿಯಿಂದ ಹೌಹಾರಿದ. ಒಂದು ಬೊಂಬೆಯನ್ನು ತಗೆದುಕೊಂಡು ಧೂಳು ಕೊಡವಿ ಅಲ್ಲೇ ಆಡಲು ಶುರು ಮಾಡಿದ. ವರ್ಷಗಳವರೆಗೂ ಅಗ್ನಾತವಾಗಿದ್ದ ಬೊಂಬೆಯ ಮುಖದಲ್ಲಿನ ನಗುವಿಗೆ ಜೀವ ತುಂಬುವಲ್ಲಿ ಆ ಸ್ಪರ್ಶ ಯಶಸ್ವಿಯಾಯಿತು. ಬಾಹ್ಯ ಪ್ರಪಂಚದ ಅರಿವಿಲ್ಲದೆ ಆ ಪೆಟ್ಟಿಗೆಯಲ್ಲೇ ಇದ್ದ ಬೊಂಬೆಗೆ ಸುಮಂತನ ಮಾತುಗಳು ರಾಜೇಶನ ನೆನಪನ್ನು ತರಿಸಿದವು. ತನ್ನ ಈ ಹೊಸ ಗೆಳೆಯನನ್ನು ಮುಂದೊಮ್ಮೆ ರಾಜೇಶನಿಗೆ ಪರಿಚಯಿಸಬೇಕೆಂದು ಅಂದುಕೊಂಡಿತು. 

ಚಾವಣಿಯಲ್ಲಿ ಆರಾಮು ಕುರ್ಚಿಯ ಮೇಲೆ ಕುಳಿತು ಮೊಮ್ಮಕ್ಕಳ ಆಟವನ್ನು ನೋಡುತಿದ್ದ ರಾಜೇಶನಿಗೆ ಸಣ್ಣ ಆಕಳಿಕೆಯೊಂದು ಬಂದು ಮಾಯವಾಯಿತು.....!