ನಿನ್ನೆ ಸಂಜೆ ಅಮ್ಮನ ಸ್ನೇಹಿತೆಯೊಬ್ಬರು ಮನೆಗೆ ಬಂದಿದ್ದರು. ಅವರ ಮಗ ಶಂಕರ ಈ ವರ್ಷ ತನ್ನ ತಾಂತ್ರಿಕ ವಿದ್ಯೆ ಮುಗಿಸಿದ್ದನಂತೆ. ಅಯ್ಯೋ, ತಾಂತ್ರಿಕ ಅಂದ್ರೆ ತಂತ್ರ-ಮಂತ್ರ ಮಾಡೋ ವಿದ್ಯೆ ಅಲ್ಲ! ಇಂಜಿನಿಯರಿಂಗ್ ಅಂತಾರಲ್ಲ ಅದು. ಇದು ಒಂಥರಾ ತಂತ್ರ ಮಂತ್ರ ಮಾಡೋ ವಿದ್ಯೆನೆ ಬಿಡಿ. ಅವನಿಗೆ ಇನ್ನು ಕೆಲಸದ ಬೇಟೆ ಶುರು ಅಲ್ವ, ಅದಕ್ಕೆ ನನಗೆ ಪರಿಚೆಯ ಮಾಡಿಸಿ ನನಗೆ ಗೊತ್ತಿದ್ದಲ್ಲಿ ಕೆಲಸವಿದ್ದರೆ ತಿಳಿಸೋಕೆ ಕೇಳಿದ್ರು. ಹುಡುಗನು ಚೂಟಿಯೇ, ಅವನಿಗೂ ನಮಗೆ ಹಿಡಿದಿರುವ ಹಾಗೆ ಖಾಸಿಗಿ ಕಂಪನಿಯ, ಹೆಚ್ಚಿನ ಸಂಬಳದ ವ್ಯಾಮೋಹವೋ ಏನೋ, 'ನನಗೆ ಟೀಚಿಂಗ್ ಮಾಡೋಕೆ ಇಷ್ಟ ಇಲ್ಲ. ಕಂಪಿನಿ ಕಡೆನೇ ಕೆಲಸ ಮಾಡಬೇಕು' ಅಂತ ತನ್ನ ಆಸೆಯನ್ನ ನನ್ನ ಮುಂದಿಟ್ಟ. ನಾವು ಆಗ ಒಂದು ವರ್ಷ ಕೆಲಸಕ್ಕಾಗಿ ಅಲೆದು ಪಟ್ಟ ಪಾಡು ಹಾಗೆ ಕಣ್ಣಿನ ಪರದೆಯ ಮೇಲೆ ಒಂದು ಚಿತ್ರವಾಗಿ ಬಂದು ಹೋಯಿತು. ಆ ಅನುಭವವನ್ನು ಶಂಕರನೊಂದಿಗೆ ಹಂಚಿಕೊಂಡೆ. ಅವನು ಕೂಡ ಆಗಲೇ ಕೆಲವೊಂದು ಕಡೆ ಅಲೆದು ಬಂದಿದ್ದ. ಅವನಿಗೆ ಬೆಂಗಳೂರಿನಲ್ಲೇ ಇದ್ದು ಕೆಲಸ ಹುಡುಕಲು ಪ್ರಯತ್ನಿಸು ಆಗ ಸುಲಭ ಆಗುತ್ತೆ ಅಂತ ಇನ್ನೊಂದು ಬುದ್ಧಿ ಮಾತು ಸೇರಿಸಿ ಹೇಳಿದೆ. ಚಹಾ ಮುಗಿಸಿ ಅವರು ಹೊರಡಲು ನಿಂತರು. ಆಗ ಕಡೆಯ ಮಾತುಗಳೆಂಬಂತೆ 'ಏನೋ ಇವನ್ನ ಇಂಜಿನಿಯರ್ ಓದಿಸಬೇಕು ಅಂತ ನಂಗೆ ಆಸೆಯಿತ್ತು, ಓದಿಸ್ದೆ. ಇನ್ನು ಮುಂದಕ್ಕೆ ಏನೋ ಅವನ ಹಣೆಬರಹ ಇದ್ದ ಹಾಗೆ ಆಗುತ್ತೆ' ಅನ್ನುವ ಮಾತುಗಳ ಶಂಕರನ ಅಮ್ಮನಿಂದ ಹೊರಬಂತು. ಆ ಮಾತು ಕ್ಷಣಕಾಲ ನನ್ನ ದಂಗು ಬಡಿಸ್ತು. ಅಲ್ಲ, ಮಗ ಏನು ಓದಬೇಕು ಅಂತ ನಿರ್ಧಾರ ಮಾಡಿದವರು ಇವರು, ಓದಿಸಿದವರು ಅವರು, ಓದಿದ್ದು ಇವನು, ಇಷ್ಟೆಲ್ಲಾ ಇವರೇ ಮಾಡ್ಕೊಂಡು ಮುಂದಿದ್ದು ಮಾತ್ರ ಹಣೆಬರಹದ ಮೇಲೆ ಹಾಕ್ತರಲ್ಲ ಇದು ನ್ಯಾಯನ?! ಆ ಹಣೆಬರಹ ಅನ್ನೋದೇನಾದ್ರೂ ಇದನ್ನೆಲ್ಲಾ ಕೇಳಿಸ್ಕೊಂಡ್ರೆ ಇವರ ಮೇಲೆ ಮಾನ ನಷ್ಟ ಮೊಕ್ಕದ್ದಮೆ ಹಾಕೋದ್ರಲ್ಲಿ ಅನುಮಾನಾನೆ ಇಲ್ಲ.
ನಮ್ಮ ಜನಗಳೇ ಹೀಗೆ ನೋಡಿ, ಮಗ ಯಾರನ್ನೋ ಪ್ರೀತಿ ಮಾಡಿದ್ರೆ, ಅಥವಾ ರಸ್ತೆಯಲ್ಲಿ ಯಾರೋ ವಾಹನದ ಅಪಘಾತ ಆಗಿ ರಕ್ತ ಹರಿದ್ರೆ, ಅವರ ಮೇಲೆ ಹಿಗ್ಗ ಮುಗ್ಗ ಮಾತುಗಳು, ಏಟುಗಳು ಧಾರಾಳವಾಗಿಯೇ ಸುರಿಸ್ತಾರೆ. ಅದೇ, ತಾವೇ ತಮ್ಮ ಮಗನಿಗೆ ಒಂದು ಗಯ್ಯಾಳಿಯಾದ ಹುಡುಗಿಯನ್ನು ತಂದು ಮದುವೆ ಮಾಡಿದ್ರೆ 'ಅವನ ಹಣೆಬರಹದಲ್ಲಿ ಅಂತ ಹುಡುಗಿ ಸಿಗಬೇಕು ಅಂತ ಇತ್ತು ಹಾಗೆ ಆಗಿದೆ ಅಷ್ಟೇ' ಅಂತಾರೆ!, ಆ ಅಪಘಾತದಲ್ಲಿ ತರಚಿದ ಗಾಯ ಸಹ ಆಗದೆ ಪಾರಾದರೆ 'ಹಣೆಬರಹ ಚನ್ನಾಗಿತ್ತು ಅದಕ್ಕೆ ಏನೋ ಆಗದೆ ಪಾರಾದ' ಅಂತ ಸುಮ್ಮನಾಗುತ್ತಾರೆ!. ಈ ಎರಡು ನಿದರ್ಶನದಲ್ಲಿ ಘಟನೆಗಳು ಒಂದೇ ಆದರೆ ಪ್ರತಿಕ್ರಿಯೆಗಳು ಮಾತ್ರ ಬೇರೆ!!. ಇದನ್ನ ಗಮನಿಸಿದರೆ, ಈ 'ಹಣೆಬರಹ'ನ ತಾವು ಮಾಡಿದ ತಪ್ಪುಗಳನ್ನು ಹೊರಿಸಿ ಕೈ ತೊಳೆದುಕೊಳ್ಳುವುದಕ್ಕೆ, ಇಲ್ಲವೇ ತಮ್ಮ ಅಸಹಾಯಕತೆಗೆ ಒಂದು ಕಾರಣದಂತೆ ಉಪಯೋಗಿಸ್ಕೊತಾಯಿರೋದು ಸ್ಪಷ್ಟವಾಗಿ ಕಾಣುತ್ತೆ. ಪಾಪ, ಈ ಹಣೆಬರಹದ ಹಣೆಬರಹ ಹೀಗೆ ಯಾಕಿದ್ಯೋ!
ಆ ದೇವರು ಹಣೆಬರಹ ಅಂತ ಎಲ್ಲರ ಹಣೆನಲ್ಲಿ ಬರೆದಿದ್ದಾನೆ ಅಂತಾನೆ ಇಟ್ಟುಕೊಳ್ಳೋಣ. ಹಾಗಿದ್ದ ಮೇಲೆ ನಾವು ಆ ನಿಯಮಗಳ ಅನುಸಾರವಾಗಿ ನಡೆಯುವ ಗೊಂಬೆಗಳು ಅಲ್ಲವಾ? ಹಾಗಿದ್ದ ಮೇಲೆ ನಮ್ಮಲ್ಲಿ ಆಲೋಚನಾ ಸಾಮರ್ಥ್ಯ, ಪ್ರತಿಕ್ರೆಯಿಸುವ ಮನೋಭಾವ, ಸುಖ-ದುಖ, ಪ್ರೀತಿಸುವ ಭಾವನೆಗಳು ಇಲ್ಲವೆಂದಾಗುವುದಿಲ್ಲವ? ಆ ನಿಯಮಗಳ ಪ್ರಕಾರ ನೆಡೆದು ಗುರಿ ಮುಟ್ಟುವುದೊಂದೇ ನಮ್ಮ ಕೆಲಸವಾಗಬೇಕಿತ್ತು. ಆದರೆ ನಾವು ಹಾಗೆ ಬದುಕುತಿದ್ದೀವ?. ಇಲ್ಲವಲ್ಲ, ನಾವು ನಮ್ಮ ಕೆಲಸಗಳ ಬಗ್ಗೆ ಯೋಚಿಸುತ್ತೇವೆ, ಸುಖ-ದುಖ, ಪ್ರೇಮದ ಭಾವಗಳು ನಮ್ಮಲ್ಲಿ ಅರಳುತ್ತವೆ, ತಪ್ಪುಗಳಿದ್ದರೆ ತಿದ್ದಿಕೊಳ್ಳಲು ಬುದ್ಧಿ ಉಪಯೋಗಿಸುತ್ತೇವೆ. ಅಂದ ಮೇಲೆ, ನಮ್ಮ ಮೇಲೆ ಯಾವುದೇ ನಿಯಮಗಳನ್ನ ಹೇರದೆ ನಮ್ಮ ನಿರ್ಧಾರಗಳನ್ನು ಆಲೋಚಿಸುವ, ಅನುಭವಿಸುವ, ಅರಿತುಕೊಳ್ಳುವ ಶಕ್ತಿಯನ್ನು ನಮಗೆ ದೇವರು ಕೊಟ್ಟಿದ್ದಾನೆಂದು ಆಯಿತಲ್ಲ. ಹಾಗಿದ್ದ ಮೇಲೂ ನಮ್ಮ ಜನ 'ಎಲ್ಲಾ ತಮ್ಮ ಹಣೆಬರಹ' ಅಂತ ಗೊಳುವುದು ಮಾತ್ರ ಬಿಡುವುದಿಲ್ಲ. ನಿಜವಾಗಿ ಎಲ್ಲಾ ಹಣೆಬರಹದ ಕರಾಮತ್ತೆ ಆಗಿದ್ದರೆ ಕೊಲೆ ಮಾಡುವುದು ಕೊಲೆಗಾರನ ಹಣೆಬರಹವೆಂದು ಕ್ಷಮಿಸಬೇಕಾಗಿ ಬರುತ್ತೆ!! ಹಾಗೆ ವಿಜ್ಞಾನಿಗಳು ಮಾಡುವ ಸಂಶೋದನೆ ಅವರ ಸಂಶೋಧನೆಗಳಾಗದೆ ಅವರ ಹಣೆಬರಹದ ಸಂಶೋಧನೆಗಳಾಗಿ ಹೋಗುತ್ತವೆ. ಇದು ಓದಿದರೇನೇ ಹುಚ್ಚು ಎನಿಸಿವುದಿಲ್ಲವೇ?! ದೇವರು ನಮಗೆ ಎಲ್ಲವನ್ನು ಕೊಟ್ಟು ಜೀವಿಸುವ ಅವಕಾಶ ಕೊಟ್ಟಿರುವಾಗ ನಾವು ನಮ್ಮ ಆಗುಹೋಗುಗಳನ್ನು ಹಣೆಬರದ ತಲೆಗೆ ಏಕೆ ಕಟ್ಟಬೇಕು?! ಹೋಗಲಿ ಬಿಡಿ, ಆ ಹಣೆಬರಹದ ಹಣೆಲಿ ಹಾಗೆ ಬರೆದಿದ್ರೆ ನಾವು ತಾನೆ ಏನು ಮಾಡೋಕೆ ಆಗತ್ತೆ!.