ಈ ಮಾತು ಅನುಭವದಿಂದ ತಲೆ ನೆರೆದ ಹಿರಿಯರು ಅವರ ಕಾಲದ ಘಟನೆಗಳನ್ನ ಈ ಕಾಲದ ಘಟನೆಗಳಿಗೆ ತುಲನೆ ಮಾಡಿ ಆಗಾಗ ಹೇಳ್ತಾನೆ ಇರ್ತಾರೆ. ಅವರ ಕಾಲದಲ್ಲಿ ಎಲ್ಲಾ ಚನ್ನಾಗೆ ಇತ್ತೇನೋ, ಈಗಲೇ ಹೀಗೆ ಹಾಳಾಗಿರೋದು ಅಂತ ಈ ಮಾತು ಕೇಳಿದಾಗ ನಮಗೂ ಅನ್ನಿಸೋದು ಸಹಜವೇ. ಹಾಗೆ ನೋಡಿದರೆ, ಅವರ ಕಾಲದಲ್ಲೂ ಈ ಮಾತು ಅವರು ಅವರ ಹಿರಿಯರಿಂದ ಕೇಳಿನೇ ಇರ್ತಾರೆ. ಅನುಮಾನವಿದ್ದರೆ ಮನೆಯಲ್ಲಿ ಅಜ್ಜ/ಅಜ್ಜಿರನ್ನ ಒಮ್ಮೆ ಕೇಳಿ ನೋಡಿ... ಅಪ್ಪ-ಅಮ್ಮ ಅವರ ಕಾಲದ ಚಂದವಿತ್ತೆಂದು ವಾದಿಸುತ್ತಿದ್ದರೆ, ಅಜ್ಜ-ಅಜ್ಜಿ ಅವರ ಕಾಲ ಅದಕ್ಕಿನ್ನ ಸೊಗಸಿತ್ತೆಂದು ವಾದಿಸುತ್ತಿರುತ್ತಾರೆ.
ಆದರೂ ನಮ್ಮ ಹಿಂದಿನ ತಲೆಮಾರಿನವರು ಅವರ ಕಾಲದಲ್ಲೇ ಚನ್ನಾಗಿತ್ತು, ಈಗಿನ ಯುವ ಜನಾಂಗ ವಿದೇಶಿ ಸಂಸ್ಕೃತಿಗೆ ಮಾರುಹೋಗಿ ಹಾಳಾಗಿದೆ, ಎಲ್ಲಾ ವಸ್ತುಗಳ ಬೆಲೆ ಜಾಸ್ತಿ ಆಗಿದೆ, ಎಂಬ ಆಪಾದನೆ ಮಾಡ್ತಾರೆ. ಇನ್ನೂ ಸಂಜೆ ಸಮಯದಲ್ಲಿ ಸುತ್ತ ಮುತ್ತ ಇರೋ ಯಾವ್ದಾದ್ರು ಉದ್ಯಾನದಲ್ಲಿ ಒಂದು ಸುತ್ತು ಬನ್ನಿ... ಅಲ್ಲಿ ಹಳೆ ಮರದ ಬುಡದಲ್ಲಿ ದೊಡ್ಡವರೆಲ್ಲಾ ಕುಂತು ಒಂದು ಜೋರಾದ ಸಭೆ ನೆಡೆಸಿರ್ತಾರೆ. ಅವರೆಲ್ಲಾ ಅಲ್ಲಿ ಮಾತಾಡುವುದೇ ಇದೆ ವಿಷಯ. "ನಮ್ಮ ಕಾಲದಲ್ಲಿ ಒಂದಾಣಿ ಕೊಟ್ರೆ, ಒಂದು ತುಂಬು ಕುಟುಂಬ ನಡೆಸುವಷ್ಟು ದಿನಸಿ ಬರೋದು, ಅದೇ ಈಗ ಇಬ್ಬರೆ ಇದ್ರೂ, ಸಾವಿರ-ಸಾವಿರ ಖರ್ಚು ಮಾಡಬೇಕಾಗತ್ತೆ. ಆಗ ಜೇಬಲ್ಲಿ ಕಾಸು ಕೊಂಡು ಚೀಲದಲ್ಲಿ ತರಕಾರಿ ತರ್ತಿದ್ವಿ, ಈಗ ಚೀಲದಲ್ಲಿ ಕಾಸು ಕೊಂಡುಹೋಗಿ ಜೇಬಿನಲ್ಲಿ ತರಕಾರಿ ತರಬೇಕು....", ಹೀಗೆ ಅವರ ಕಾಲದ ಸೊಬಗನ್ನು ನೆನೆಯುತ್ತ ಹರಟುತ್ತಿರುತ್ತಾರೆ.
ಈ ಮಾತುಗಳಲ್ಲಿ ನಿಜವಾಗಿಯೂ ಸತ್ಯ ಇದೆಯಾ? ಈಗಲೂ ನಾವು ಜೇಬಿನಲ್ಲಿ ದುಡ್ಡು ಕೊಂಡು, ಚೀಲದಲ್ಲೇ ಪದಾರ್ಥ ತರುವುದು ಅಲ್ವಾ?! ಇಲ್ಲಿ ವೆತ್ಯಾಸ ಇರೋದು ಬರಿ ಆ ಪದಾರ್ಥಗಳ ಬೆಲೆಗಳು ಮಾತ್ರ. ಅವರು ಹೇಳುವ ಮಾತು ಅದಕ್ಕೊಂದು ಉಪಮಾನವಷ್ಟೇ. ಆಗಿನ ಕಾಲದಿಂದಲೂ ಮನುಷ್ಯರ ಲೋಭಕ್ಕೆ ಬಿದ್ದು ಹಣದ ವ್ಯಾಮೋಹ ಹೆಚ್ಚಾಗ ತೊಡಗಿತು, ಇದು ಒಂದು ಕೊಂಡಿಯಂತೆ ಒಂದಕ್ಕೊಂದು ಅಂಟಿಕೊಂಡಿರುವುದರಿಂದ ಇತರೆ ಪದಾರ್ಥಗಳು ಬೆಲೆ ಹೆಚ್ಚಿಸಿಕೊಂಡವು. ಸಮಯ ಉರುಳಿದಂತೆ ಅನುಕೂಲತೆಗಳನ್ನ ಕಂಡುಕೊಂಡ ನಾವು, ಅವನ್ನು ಜೀವನಕ್ಕೆ ಅಳವಡಿಸಿಕೊಳ್ಳಲು ಕೊಂಚ ಹೆಚ್ಚು ಬೆಲೆ ತೆರಲು ಸಿದ್ಧರಾದರು. ಅನುಕೂಲಗಳು ಕಂಡುಕೊಂಡಂತೆ, ಅದಕ್ಕೆ ತೆರಬೇಕಾದ ದಂಡ ಹೆಚ್ಚುತ್ತಾ ಹೋದವು ಅಷ್ಟೇ. ಆದರೆ ಈಗ ತಮ್ಮಗಳ ತಪ್ಪೊಂದು ಇಲ್ಲ ಅನ್ನೋ ಹಾಗೆ, ಬೆಳೆದ ಮರದ ಅಡಿಯಲ್ಲಿ ಅದೇ ಕಾಲದ ಜನಗಳು ಸೇರಿ ಆಪಾದನೆಗಳ ಪಟ್ಟಿ ಮಾಡುತ್ತಾರೆ. ಈ ಎಲ್ಲಾ ತಪ್ಪುಗಳನ್ನು ಮಾತ್ರ ಕಾಲದ ಬೆನ್ನಿಗೆ ಕಟ್ಟಿ ಕೈ ತೊಳ್ಕೊಳೋ ಪ್ರಯತ್ನ ಮಾಡ್ತಾರೆ. ಪಾಪ, ಈ ಸಮಯ ಮಾತ್ರ ಅದಕ್ಕೆ ಲಕ್ಷ್ಯ ಕೊಡದೆ ತನ್ನ ಕರ್ತವ್ಯ ತನ್ನ ಪಾಡಿಗೆ ಅದೇ ರೀತಿಯಲ್ಲೇ ನಡೆಸಿಕೊಂಡು ಬರ್ತಿದೆ. ಈಗಲು ಸಹ ದಿನಕ್ಕೆ ಇಪ್ಪತ್ನಾಲ್ಕು ಗಂಟೆಗಳೇ ಇವೆ. ಕಾಲ ಇಲ್ಲಿ ಯಾವುದೇ ತಾರತಮ್ಯ ಮಾಡಿಲ್ಲ, ಬದಲಾಗಿಯೂ ಇಲ್ಲ. ಇಲ್ಲಿ ಬದಲಾಗಿರೋದು ಕಾಲವಲ್ಲ, ಕಾಲದಲ್ಲಿ ಬೆಳೆಯುತ್ತಿರುವ ಜನರ ಮನೋಭಾವ ಮಾತ್ರ.
ತಮ್ಮ ಬಯಕೆಗಳಿಗೋ, ತನ್ನ ನೆರೆಯವನಿಗಿಂತಲೂ ಹೆಚ್ಚಿನ ದೌಲತ್ತಿನಲ್ಲಿ ಬದುಕಬೇಕೆಂಬ ಕಿಚ್ಚಿನಿಂದಲೋ ತಾನೇ ಈ ರೀತಿಯ ಸಮಾಜಕ್ಕೆ ಕಾರಣನಾಗುತ್ತಾ ಹೋದ. ತಾನು ಒಂದು ಕನಸಿನ ಗೋಪುರವನ್ನು ಕಟ್ಟಿದ್ದ, ತನ್ನ ಮಕ್ಕಳಿಗೂ ಅದನ್ನೇ ಕಲಿಸಿದ, ವರ್ಗಾಯಿಸಿದ. ಅವರು ಅದನ್ನು ಅವರ ಮಕ್ಕಳಿಗೆ ವರ್ಗಾಯಿಸಿದರು. ಈ ಕನಸಿನ, ಕಿಚ್ಚಿನ ಸಾಮ್ರಾಜ್ಯ ಹೀಗೆ ಹಾರುವಾಗ ಅವುಗಳ ತೀವ್ರತೆ ಹೆಚ್ಚುತ್ತಾ ಹೋಯಿತೇ ಹೊರತು, ಕಮ್ಮಿಯಾಗಲೇ ಇಲ್ಲ. ಮುಂದಿನ ಪೀಳಿಗೆಯ ಜನಾಂಗಕ್ಕೆ ಸ್ವಂತ ಅಸ್ತಿತ್ವ ಸ್ಥಾಪಿಸುವುದನ್ನು ಕಲಿಸದೆ, ತಮ್ಮ ಭೂಗ ಜೀವನದ ಕನಸುಗಳನ್ನು ತುಂಬಿ ಅದರ ಬೆನ್ನಟ್ಟಿ ಹೋಗುವ ಬೇಟೆಗಾರನಂತೆ ಸಿದ್ಧ ಮಾಡಿದರು. ತಾವು ಅನುಭವಿಸಿದ ಜೀವನದ ರಸದಿಂದ ಮಕ್ಕಳನ್ನು ದೂರವಿಟ್ಟರು. ತಾವು ಏನು, ತಮ್ಮ ಮನಸ್ಸಿನ ಮಾರ್ಗವೇನು ಎಂದು ಅವರು ಅರಿಯುವ ಹೊತ್ತಿಗೆ ಅವರಾಗಲೇ ಈ ಸರಪಳಿಯಲ್ಲಿ ಒಂದು ಕೊಂಡಿಯಾಗಿ ಸಿಲಿಕಿಕೊಂಡಿರುತ್ತಿದ್ದರು. ಹೊರ ಬರಲಾಗದೆ, ಅಥವಾ ಬರಲು ಇಷ್ಟವಿಲ್ಲದೆ ಆ ಸರಪಳಿಯೊಳಗೆ ಬಾಳತೊಡಗಿದರು. ಅದು ಒಂದು ರೀತಿಯಲ್ಲಿ ಅವರು ಮಕ್ಕಳ ಮೇಲಿನ ಪ್ರೀತಿಯಿಂದಲೇ ಬೆಳೆಸಿದ್ದು ಎನ್ನುವುದಾದರೆ, ಮಕ್ಕಳು ದೊಡ್ಡವರಾದಾಗ 'ನಿಮ್ಮನ್ನ ಕಷ್ಟ ಪಡೋಕೆ ಬಿಡದೆ ಬೆಳಸಿದ್ದೀವಿ. ನಿಮಗೆ ಕಷ್ಟ ಅಂದ್ರೆ ಏನು ಅಂತಾನೆ ಗೊತ್ತಿಲ್ಲ. ನಮ್ಮ ಕಾಲದಲ್ಲಿ ಹೇಗಿದ್ವಿ ಗೊತ್ತಾ...' ಎಂದು ಮೂದಲಿಸುವುದ್ಯಾಕೆ?! ಮಕ್ಕಳು ಆ ಭೋಗ ಜೀವನಕ್ಕೆ ತುತ್ತಾಗುವುದಕ್ಕೆ, ಈ ಹಿರಿಯರನ್ನು ಮರೆತು ಅವರಿಂದಲೇ ಓಡುವಂತೆ ಮಾಡಿದ್ದಕ್ಕೆ, ಅವರನ್ನು ಬೆಳೆಸಿದ ಈ ಮಾರ್ಗವೇ ಕಾರಣರಲ್ಲವೇ?!
ತಮ್ಮ ಮನೆಯ ಮಕ್ಕಳು ಪಕ್ಕದ ಮನೆಯವರಿಗಿಂತಲೂ ಹೆಚ್ಚು ಅಂಕ ಗಳಿಸಬೇಕೆನ್ನುತ್ತಾರೆ. ಪ್ರತಿಯೊಬ್ಬರಿಗೂ ಅವರದೇ ಆದ ಮನೋಭಾವನೆ, ಸಾಮರ್ಥ್ಯ ಇರುತ್ತದೆ ಅನ್ನುವದನ್ನೇ ಮರೆತು. ಒಬರನ್ನು ಮತ್ತೊಬ್ಬರಿಗೆ ಹೋಲಿಸುತ್ತ ಬದುಕುತ್ತಾರೆ. ಸ್ನೇಹಿತನ ಮಗ ಇಂಜಿನೀಯರ್ ಸೇರಿದರೆ, ತಮ್ಮ ಮಗ ಡಾಕ್ಟರ್ ಓದಲಿಕ್ಕಾದರು ಸೇರಬೇಕು, ಕಡೆಪಕ್ಷ ಇಂಜಿನೀಯರ್ ಸೇರಿದರು ಅವನಿಗಿಂತ ಉತ್ತಮವಾದ ಕಾಲೆಜಿನಲ್ಲೇ ಓದಬೇಕೆಂದು ಬಯಸುತ್ತಾರೆ. ಈ ಮಕ್ಕಳ ಗೆಳೆಯರಲ್ಲಿ ಒಬ್ಬನಿಗೆ ಕೆಲಸ ಸಿಕ್ಕರೆ ಇವರ ಮಗ ಅದಕ್ಕಿಂತಲೂ ಉತ್ತಮ ಕೆಲಸಕ್ಕೆ ಸೇರಬೇಕೆಂದು ಬಯಸುತ್ತಾರೆ. ತಮ್ಮ ಮಕ್ಕಳಿಗೆ ಒಳ್ಳೆ ಸಂಗಾತಿ ತರುವದಕ್ಕಿಂತಲೂ ತಮ್ಮ ಬಳಗದವರು ತಂದಕೊಂಡಿರುವ ಸಂಬಂಧಗಳಿಗಿಂತಲೂ ದೊಡ್ಡ ಮನೆತನದ ಸಂಬಂಧ ತರಲು ಹವಣಿಸುತ್ತಾರೆ. ವಿದೇಶಿ ಸಂಸ್ಕ್ರುತಿಯನ್ನು ತೆಗಳುವ ಜನರೇ, ತಮ್ಮ ಮಕ್ಕಳು ವಿದೇಶದಲ್ಲೇ ತಳಸೇರಬೇಕೆಂಬ ಆಸೆಯನ್ನೂ ಹೊತ್ತಿರುತ್ತಾರೆ. ಹೀಗೆ ಮಕ್ಕಳನ್ನು ವಿದೇಶಕ್ಕೆ ಅಟ್ಟಿದ ಮೇಲೆ, ಮಕ್ಕಳು ನಮ್ಮನ್ನು ಬಿಟ್ಟು ಹೋದರೆಂದು ಕೊರಗುತ್ತಾರೆ. ಅವರಿಗಾಗಿ ಹವಣಿಸುತ್ತಾರೆ. ತಾವೇ ಸೃಷ್ಟಿಸಿದ ಜೀವನಶೈಲಿಗಾಗಿ ಮರುಗುತ್ತಾರೆ.
ಇದನ್ನು ಬಿಟ್ಟು ತಮ್ಮ ಮಕ್ಕಳಿಗೆ ಒಂದು ಸ್ವಂತ ಅಸ್ತಿತ್ವ ರೂಪಿಸಿಕೊಳ್ಳುವ ಬಗ್ಗೆ, ಜೀವನದ ರಸ ಅನುಭವಿಸುವ ಬಗೆ ತಿಳಿಸಿಕೊಟ್ಟಿದ್ದರೆ, ನಮಗೆ ಜನ್ಮ ಕೊಟ್ಟ ಪ್ರಕೃತಿಯನ್ನು ತುಳಿದು ಅದರಿಂದ ದೂರ ಬಾಳುವುದರ ಬದಲು, ಅದರೊಡನೆ ಒಂದಾಗಿ, ಪ್ರಕೃತಿಯನ್ನು ಬೆಳೆಸಿ ಜೊತೆಯಲ್ಲೇ ತಾವು ಬೆಳೆವುದನ್ನು ಕಲಿಸಿದ್ದರೆ..... ಪ್ರಾಯಶಃ ಈಗ ಆ ಹಿರಿಯರೆಲ್ಲ ಮರದ ಬುಡದಲ್ಲಿ ಕೂತು ಹರಟುವಾಗ 'ನಮ್ಮ ಕಾಲದಲ್ಲಿ ಹಿಂಗಿರ್ಲಿಲ್ಲ....' ಅನ್ನುವ ಮಾತು ಕೇಳ್ತಿರಲಿಲ್ಲ ಅನ್ಸತ್ತೆ! ಏನಂತೀರ?!