ಗುರುವಾರ, ಸೆಪ್ಟೆಂಬರ್ 11, 2014

ಪ್ರಕೃತಿ ಮತ್ತು ಸಂಸ್ಕೃತಿ

ಪ್ರಪಂಚ ಶುರುವಾದಾಗ ಹುಟ್ಟಿದ್ದು ಪ್ರಕೃತಿ ಮತ್ತು ಅದರ ಜೊತೆಯಲ್ಲಿ ಸಂಸ್ಕೃತಿ. ಆ ಸುಂದರ ಪರಿಸರದಲ್ಲಿ ಪ್ರಕೃತಿ ಯೊಂದಿಗೆ ಸಂಸ್ಕೃತಿ ಬೆರೆತು ಮಕ್ಕಳಾದವು. ಆ ಮಕ್ಕಳು ಒಂದು ಪ್ರಬ್ಭುದತೆಗೆ ಬೆಳೆದು ತಮ್ಮದೇ ಒಂದು ಸ್ಥಾನ ಮಾಡಿಕೊಂಡ ಮೇಲೆ ಅವರಿಗೂ ಮಕ್ಕಳಾಯ್ತು. ಮಕ್ಕಳು ಮೊಮ್ಮಕ್ಕಳ ಜೊತೆಯಲ್ಲಿ ಪ್ರಕೃತಿ ಮತ್ತು ಸಂಸ್ಕೃತಿ ಇನ್ನಷ್ಟು ಬೆರೆತು ಬಾಳತೊಡಗಿದವು.  ಮೊಮ್ಮಕ್ಕಳು ಬೆಳೆದು ದೊಡ್ಡವರಾದರು. ಅವರದು ಒಂದು ಅಸ್ತಿತ್ವವ ಬೆಳೆಯಿತು.

ಇದನ್ನೆಲ್ಲಾ ನೊಡುತ್ತಿದ್ದ ಪ್ರೇಕ್ಷಕ ಕುಟುಂಬದವರು, ಆ ಮಕ್ಕಳ ಬೆಳವಣಿಗೆಗೆ ಸ್ವಲ್ಪ  ಮಟ್ಟಿಗೆ ಕಾರಣವಾದವರು, ಆ ಮಕ್ಕಳು ಮೊಮ್ಮಕ್ಕಳ ಬಗೆಗೆ ಒಂದು ಚರ್ಚೆ ಆರಂಭಿಸಿಕೊಂಡರು. ಅವರ ಚರ್ಚೆಗಳಲ್ಲಿ ಕಾಣುತ್ತಿದ್ದುದು ಆ ಮಕ್ಕಳಲ್ಲಿ ಇರುವ ಕಣ್ಣು ಮೂಗು ಆಕಾರಗಳನ್ನ ಹೋಲಿಸಿ ಅವರ ಮೂಲ ಕಂಡು ಹಿಡಿವ ಪ್ರಯತ್ನದಲ್ಲಿ ಇದ್ದುದು. ಎಷ್ಟೋ ಕಾಲದಿಂದ ಬೆಳೆದು ಬಂದ ಆ ಮಕ್ಕಳು ಮೊಮ್ಮಕ್ಕಳಿಗೆ ಪ್ರಕೃತಿ - ಸಂಸ್ಕೃತಿಯೇ 'ಭಾಷೆ' ಅನ್ನೋ ಹೆಸರು ಕೊಟ್ಟು ಅವರಿಗೆ ಒಂದು ಅಸ್ತಿತ್ವ ರೂಪಿಸಿಕೊಳ್ಳುವ ಮಟ್ಟಿಗೆ ಬೆಳೆಸಿವೆ.  ಆದರೆ ಅದನ್ನು ಮರೆತು, ಆ ಪ್ರೇಕ್ಷಕ ವರ್ಗ ಮಾತ್ರ ಈ 'ಭಾಷೆ'ನ ಒಂದಕ್ಕೊಂದು ಹೋಲಿಸಿ, ಒಂದಕ್ಕಿಂದ  ಇನ್ನೊಂದು ದೊಡ್ಡದು ಅನ್ನುವ ಕಲ್ಪನೆಯಲ್ಲಿ ವಾಗ್ವಾದ ನಡೆಸುತ್ತಲೇ ಇವೆ!!

ಭಾಷೆಯ ಹುಟ್ಟಿಗೆ ಕಾರಣವಾದ ಪ್ರಕೃತಿ - ಸಂಸ್ಕೃತಿಯೇ ಅದರಲ್ಲಿ ಮೇಲು ಕೇಳು ಮಾಡದೆ ಇರುವಾಗ. ಅದನ್ನು ಬಳಸುವ ಪ್ರೇಕ್ಷಕ ವರ್ಗ 'ಭಾಷೆ'ಯನ್ನ ಬಳಸಿ ಬೆಳೆಸುವದನ್ನು ಬಿಟ್ಟು ಅದರಲ್ಲಿಯ ಹಿರೆಮೆಯನ್ನು ಇನ್ನೊಂದು ಭಾಷೆಯ ಕೀಳರಿಮೆಯಾಗಿ ತೋರಿಸಲು ಹವಣಿಸುತ್ತಿದ್ದಾರೆ. ಆದರೆ ಎಲ್ಲಾ ಮಕ್ಕಳು - ಮೊಮ್ಮಕ್ಕಳು (ಭಾಷೆಗಳು) ತಮ್ಮದೇ ಆದ ಹಿರಿಮೆಯಲ್ಲಿ ಎಲ್ಲವು ದೊಡ್ಡವೇ ಅನ್ನುವಂತೆ ಬೆಳೆದು ನಿಂತಿವೆ. ಅದರಲ್ಲಿನ ಕೀಳರಿಮೆ ಹುಡುಕುವದರಲ್ಲಿ ನಮ್ಮ ಕೀಳರಿಮೆ ಕಾಣುತ್ತದೆ ಹೊರತು ಅದೆಲ್ಲವನ್ನು ಮೀರಿ ಬೆಳೆದು ನಿಂತಿರುವ  'ಭಾಷೆ'ಯನ್ನು ಒಂದಕ್ಕೊಂದು ತುಲನೆ ಮಾಡುತ್ತ ನೋಡುವುದು ಸರಿಯೇ?!.  ಇಂಥ ಜನಗಳ ಮಕ್ಕಳನ್ನೇ ಮತ್ತೊಬ್ಬರು 'ನಿಮ್ಮ ಮಕ್ಕಳ ಕಣ್ಣು ಮೂಗು ನಿಮಗಿಂತ ಪಕ್ಕದ ಮನೆಯವರನ್ನೇ ಹೆಚ್ಚು ಹೊಲುತ್ತಲ್ವೇ?!' ಅಂತ ಕೇಳಿದರೆ ಏನು ಮಾಡ್ತಾರೋ!