ಗುರುವಾರ, ಸೆಪ್ಟೆಂಬರ್ 11, 2014

ಪ್ರಕೃತಿ ಮತ್ತು ಸಂಸ್ಕೃತಿ

ಪ್ರಪಂಚ ಶುರುವಾದಾಗ ಹುಟ್ಟಿದ್ದು ಪ್ರಕೃತಿ ಮತ್ತು ಅದರ ಜೊತೆಯಲ್ಲಿ ಸಂಸ್ಕೃತಿ. ಆ ಸುಂದರ ಪರಿಸರದಲ್ಲಿ ಪ್ರಕೃತಿ ಯೊಂದಿಗೆ ಸಂಸ್ಕೃತಿ ಬೆರೆತು ಮಕ್ಕಳಾದವು. ಆ ಮಕ್ಕಳು ಒಂದು ಪ್ರಬ್ಭುದತೆಗೆ ಬೆಳೆದು ತಮ್ಮದೇ ಒಂದು ಸ್ಥಾನ ಮಾಡಿಕೊಂಡ ಮೇಲೆ ಅವರಿಗೂ ಮಕ್ಕಳಾಯ್ತು. ಮಕ್ಕಳು ಮೊಮ್ಮಕ್ಕಳ ಜೊತೆಯಲ್ಲಿ ಪ್ರಕೃತಿ ಮತ್ತು ಸಂಸ್ಕೃತಿ ಇನ್ನಷ್ಟು ಬೆರೆತು ಬಾಳತೊಡಗಿದವು.  ಮೊಮ್ಮಕ್ಕಳು ಬೆಳೆದು ದೊಡ್ಡವರಾದರು. ಅವರದು ಒಂದು ಅಸ್ತಿತ್ವವ ಬೆಳೆಯಿತು.

ಇದನ್ನೆಲ್ಲಾ ನೊಡುತ್ತಿದ್ದ ಪ್ರೇಕ್ಷಕ ಕುಟುಂಬದವರು, ಆ ಮಕ್ಕಳ ಬೆಳವಣಿಗೆಗೆ ಸ್ವಲ್ಪ  ಮಟ್ಟಿಗೆ ಕಾರಣವಾದವರು, ಆ ಮಕ್ಕಳು ಮೊಮ್ಮಕ್ಕಳ ಬಗೆಗೆ ಒಂದು ಚರ್ಚೆ ಆರಂಭಿಸಿಕೊಂಡರು. ಅವರ ಚರ್ಚೆಗಳಲ್ಲಿ ಕಾಣುತ್ತಿದ್ದುದು ಆ ಮಕ್ಕಳಲ್ಲಿ ಇರುವ ಕಣ್ಣು ಮೂಗು ಆಕಾರಗಳನ್ನ ಹೋಲಿಸಿ ಅವರ ಮೂಲ ಕಂಡು ಹಿಡಿವ ಪ್ರಯತ್ನದಲ್ಲಿ ಇದ್ದುದು. ಎಷ್ಟೋ ಕಾಲದಿಂದ ಬೆಳೆದು ಬಂದ ಆ ಮಕ್ಕಳು ಮೊಮ್ಮಕ್ಕಳಿಗೆ ಪ್ರಕೃತಿ - ಸಂಸ್ಕೃತಿಯೇ 'ಭಾಷೆ' ಅನ್ನೋ ಹೆಸರು ಕೊಟ್ಟು ಅವರಿಗೆ ಒಂದು ಅಸ್ತಿತ್ವ ರೂಪಿಸಿಕೊಳ್ಳುವ ಮಟ್ಟಿಗೆ ಬೆಳೆಸಿವೆ.  ಆದರೆ ಅದನ್ನು ಮರೆತು, ಆ ಪ್ರೇಕ್ಷಕ ವರ್ಗ ಮಾತ್ರ ಈ 'ಭಾಷೆ'ನ ಒಂದಕ್ಕೊಂದು ಹೋಲಿಸಿ, ಒಂದಕ್ಕಿಂದ  ಇನ್ನೊಂದು ದೊಡ್ಡದು ಅನ್ನುವ ಕಲ್ಪನೆಯಲ್ಲಿ ವಾಗ್ವಾದ ನಡೆಸುತ್ತಲೇ ಇವೆ!!

ಭಾಷೆಯ ಹುಟ್ಟಿಗೆ ಕಾರಣವಾದ ಪ್ರಕೃತಿ - ಸಂಸ್ಕೃತಿಯೇ ಅದರಲ್ಲಿ ಮೇಲು ಕೇಳು ಮಾಡದೆ ಇರುವಾಗ. ಅದನ್ನು ಬಳಸುವ ಪ್ರೇಕ್ಷಕ ವರ್ಗ 'ಭಾಷೆ'ಯನ್ನ ಬಳಸಿ ಬೆಳೆಸುವದನ್ನು ಬಿಟ್ಟು ಅದರಲ್ಲಿಯ ಹಿರೆಮೆಯನ್ನು ಇನ್ನೊಂದು ಭಾಷೆಯ ಕೀಳರಿಮೆಯಾಗಿ ತೋರಿಸಲು ಹವಣಿಸುತ್ತಿದ್ದಾರೆ. ಆದರೆ ಎಲ್ಲಾ ಮಕ್ಕಳು - ಮೊಮ್ಮಕ್ಕಳು (ಭಾಷೆಗಳು) ತಮ್ಮದೇ ಆದ ಹಿರಿಮೆಯಲ್ಲಿ ಎಲ್ಲವು ದೊಡ್ಡವೇ ಅನ್ನುವಂತೆ ಬೆಳೆದು ನಿಂತಿವೆ. ಅದರಲ್ಲಿನ ಕೀಳರಿಮೆ ಹುಡುಕುವದರಲ್ಲಿ ನಮ್ಮ ಕೀಳರಿಮೆ ಕಾಣುತ್ತದೆ ಹೊರತು ಅದೆಲ್ಲವನ್ನು ಮೀರಿ ಬೆಳೆದು ನಿಂತಿರುವ  'ಭಾಷೆ'ಯನ್ನು ಒಂದಕ್ಕೊಂದು ತುಲನೆ ಮಾಡುತ್ತ ನೋಡುವುದು ಸರಿಯೇ?!.  ಇಂಥ ಜನಗಳ ಮಕ್ಕಳನ್ನೇ ಮತ್ತೊಬ್ಬರು 'ನಿಮ್ಮ ಮಕ್ಕಳ ಕಣ್ಣು ಮೂಗು ನಿಮಗಿಂತ ಪಕ್ಕದ ಮನೆಯವರನ್ನೇ ಹೆಚ್ಚು ಹೊಲುತ್ತಲ್ವೇ?!' ಅಂತ ಕೇಳಿದರೆ ಏನು ಮಾಡ್ತಾರೋ!

ಭಾನುವಾರ, ಜೂನ್ 26, 2011

ನಮ್ಮ ಕಾಲದಲ್ಲಿ ಹಿಂಗಿರ್ಲಿಲ್ಲ


ಈ ಮಾತು ಅನುಭವದಿಂದ ತಲೆ ನೆರೆದ ಹಿರಿಯರು ಅವರ ಕಾಲದ ಘಟನೆಗಳನ್ನ ಈ ಕಾಲದ ಘಟನೆಗಳಿಗೆ ತುಲನೆ ಮಾಡಿ ಆಗಾಗ ಹೇಳ್ತಾನೆ ಇರ್ತಾರೆ. ಅವರ ಕಾಲದಲ್ಲಿ ಎಲ್ಲಾ ಚನ್ನಾಗೆ ಇತ್ತೇನೋ, ಈಗಲೇ ಹೀಗೆ ಹಾಳಾಗಿರೋದು ಅಂತ ಈ ಮಾತು ಕೇಳಿದಾಗ ನಮಗೂ ಅನ್ನಿಸೋದು ಸಹಜವೇ. ಹಾಗೆ ನೋಡಿದರೆ, ಅವರ ಕಾಲದಲ್ಲೂ ಈ ಮಾತು ಅವರು ಅವರ ಹಿರಿಯರಿಂದ ಕೇಳಿನೇ ಇರ್ತಾರೆ. ಅನುಮಾನವಿದ್ದರೆ ಮನೆಯಲ್ಲಿ ಅಜ್ಜ/ಅಜ್ಜಿರನ್ನ ಒಮ್ಮೆ ಕೇಳಿ ನೋಡಿ... ಅಪ್ಪ-ಅಮ್ಮ ಅವರ ಕಾಲದ ಚಂದವಿತ್ತೆಂದು ವಾದಿಸುತ್ತಿದ್ದರೆ, ಅಜ್ಜ-ಅಜ್ಜಿ ಅವರ ಕಾಲ ಅದಕ್ಕಿನ್ನ ಸೊಗಸಿತ್ತೆಂದು ವಾದಿಸುತ್ತಿರುತ್ತಾರೆ.

ಆದರೂ ನಮ್ಮ ಹಿಂದಿನ ತಲೆಮಾರಿನವರು ಅವರ ಕಾಲದಲ್ಲೇ ಚನ್ನಾಗಿತ್ತು, ಈಗಿನ ಯುವ ಜನಾಂಗ ವಿದೇಶಿ ಸಂಸ್ಕೃತಿಗೆ ಮಾರುಹೋಗಿ ಹಾಳಾಗಿದೆ, ಎಲ್ಲಾ ವಸ್ತುಗಳ ಬೆಲೆ ಜಾಸ್ತಿ ಆಗಿದೆ, ಎಂಬ ಆಪಾದನೆ ಮಾಡ್ತಾರೆ. ಇನ್ನೂ ಸಂಜೆ ಸಮಯದಲ್ಲಿ ಸುತ್ತ ಮುತ್ತ ಇರೋ ಯಾವ್ದಾದ್ರು ಉದ್ಯಾನದಲ್ಲಿ ಒಂದು ಸುತ್ತು ಬನ್ನಿ... ಅಲ್ಲಿ ಹಳೆ ಮರದ ಬುಡದಲ್ಲಿ ದೊಡ್ಡವರೆಲ್ಲಾ ಕುಂತು ಒಂದು ಜೋರಾದ ಸಭೆ ನೆಡೆಸಿರ್ತಾರೆ. ಅವರೆಲ್ಲಾ ಅಲ್ಲಿ ಮಾತಾಡುವುದೇ ಇದೆ ವಿಷಯ. "ನಮ್ಮ ಕಾಲದಲ್ಲಿ ಒಂದಾಣಿ ಕೊಟ್ರೆ, ಒಂದು ತುಂಬು ಕುಟುಂಬ ನಡೆಸುವಷ್ಟು ದಿನಸಿ ಬರೋದು, ಅದೇ ಈಗ ಇಬ್ಬರೆ ಇದ್ರೂ, ಸಾವಿರ-ಸಾವಿರ ಖರ್ಚು ಮಾಡಬೇಕಾಗತ್ತೆ. ಆಗ ಜೇಬಲ್ಲಿ ಕಾಸು ಕೊಂಡು ಚೀಲದಲ್ಲಿ ತರಕಾರಿ ತರ್ತಿದ್ವಿ, ಈಗ ಚೀಲದಲ್ಲಿ ಕಾಸು ಕೊಂಡುಹೋಗಿ ಜೇಬಿನಲ್ಲಿ ತರಕಾರಿ ತರಬೇಕು....", ಹೀಗೆ ಅವರ ಕಾಲದ ಸೊಬಗನ್ನು ನೆನೆಯುತ್ತ ಹರಟುತ್ತಿರುತ್ತಾರೆ.

ಈ ಮಾತುಗಳಲ್ಲಿ ನಿಜವಾಗಿಯೂ ಸತ್ಯ ಇದೆಯಾ? ಈಗಲೂ ನಾವು ಜೇಬಿನಲ್ಲಿ ದುಡ್ಡು ಕೊಂಡು, ಚೀಲದಲ್ಲೇ ಪದಾರ್ಥ ತರುವುದು ಅಲ್ವಾ?! ಇಲ್ಲಿ ವೆತ್ಯಾಸ ಇರೋದು ಬರಿ ಆ ಪದಾರ್ಥಗಳ ಬೆಲೆಗಳು ಮಾತ್ರ. ಅವರು ಹೇಳುವ ಮಾತು ಅದಕ್ಕೊಂದು ಉಪಮಾನವಷ್ಟೇ. ಆಗಿನ ಕಾಲದಿಂದಲೂ ಮನುಷ್ಯರ ಲೋಭಕ್ಕೆ ಬಿದ್ದು ಹಣದ ವ್ಯಾಮೋಹ ಹೆಚ್ಚಾಗ ತೊಡಗಿತು, ಇದು ಒಂದು ಕೊಂಡಿಯಂತೆ ಒಂದಕ್ಕೊಂದು ಅಂಟಿಕೊಂಡಿರುವುದರಿಂದ ಇತರೆ ಪದಾರ್ಥಗಳು ಬೆಲೆ ಹೆಚ್ಚಿಸಿಕೊಂಡವು. ಸಮಯ ಉರುಳಿದಂತೆ ಅನುಕೂಲತೆಗಳನ್ನ ಕಂಡುಕೊಂಡ ನಾವು, ಅವನ್ನು ಜೀವನಕ್ಕೆ ಅಳವಡಿಸಿಕೊಳ್ಳಲು ಕೊಂಚ ಹೆಚ್ಚು ಬೆಲೆ ತೆರಲು ಸಿದ್ಧರಾದರು. ಅನುಕೂಲಗಳು ಕಂಡುಕೊಂಡಂತೆ, ಅದಕ್ಕೆ ತೆರಬೇಕಾದ ದಂಡ ಹೆಚ್ಚುತ್ತಾ ಹೋದವು ಅಷ್ಟೇ. ಆದರೆ ಈಗ ತಮ್ಮಗಳ ತಪ್ಪೊಂದು ಇಲ್ಲ ಅನ್ನೋ ಹಾಗೆ, ಬೆಳೆದ ಮರದ ಅಡಿಯಲ್ಲಿ ಅದೇ ಕಾಲದ ಜನಗಳು ಸೇರಿ ಆಪಾದನೆಗಳ ಪಟ್ಟಿ ಮಾಡುತ್ತಾರೆ. ಈ ಎಲ್ಲಾ ತಪ್ಪುಗಳನ್ನು ಮಾತ್ರ ಕಾಲದ ಬೆನ್ನಿಗೆ ಕಟ್ಟಿ ಕೈ ತೊಳ್ಕೊಳೋ ಪ್ರಯತ್ನ ಮಾಡ್ತಾರೆ. ಪಾಪ, ಈ ಸಮಯ ಮಾತ್ರ ಅದಕ್ಕೆ ಲಕ್ಷ್ಯ ಕೊಡದೆ ತನ್ನ ಕರ್ತವ್ಯ ತನ್ನ ಪಾಡಿಗೆ ಅದೇ ರೀತಿಯಲ್ಲೇ ನಡೆಸಿಕೊಂಡು ಬರ್ತಿದೆ. ಈಗಲು ಸಹ ದಿನಕ್ಕೆ ಇಪ್ಪತ್ನಾಲ್ಕು ಗಂಟೆಗಳೇ ಇವೆ. ಕಾಲ ಇಲ್ಲಿ ಯಾವುದೇ ತಾರತಮ್ಯ ಮಾಡಿಲ್ಲ, ಬದಲಾಗಿಯೂ ಇಲ್ಲ. ಇಲ್ಲಿ ಬದಲಾಗಿರೋದು ಕಾಲವಲ್ಲ, ಕಾಲದಲ್ಲಿ ಬೆಳೆಯುತ್ತಿರುವ ಜನರ ಮನೋಭಾವ ಮಾತ್ರ.

ತಮ್ಮ ಬಯಕೆಗಳಿಗೋ, ತನ್ನ ನೆರೆಯವನಿಗಿಂತಲೂ ಹೆಚ್ಚಿನ ದೌಲತ್ತಿನಲ್ಲಿ ಬದುಕಬೇಕೆಂಬ ಕಿಚ್ಚಿನಿಂದಲೋ ತಾನೇ ಈ ರೀತಿಯ ಸಮಾಜಕ್ಕೆ ಕಾರಣನಾಗುತ್ತಾ ಹೋದ. ತಾನು ಒಂದು ಕನಸಿನ ಗೋಪುರವನ್ನು ಕಟ್ಟಿದ್ದ, ತನ್ನ ಮಕ್ಕಳಿಗೂ ಅದನ್ನೇ ಕಲಿಸಿದ, ವರ್ಗಾಯಿಸಿದ. ಅವರು ಅದನ್ನು ಅವರ ಮಕ್ಕಳಿಗೆ ವರ್ಗಾಯಿಸಿದರು. ಈ ಕನಸಿನ, ಕಿಚ್ಚಿನ ಸಾಮ್ರಾಜ್ಯ ಹೀಗೆ ಹಾರುವಾಗ ಅವುಗಳ ತೀವ್ರತೆ ಹೆಚ್ಚುತ್ತಾ ಹೋಯಿತೇ ಹೊರತು, ಕಮ್ಮಿಯಾಗಲೇ ಇಲ್ಲ. ಮುಂದಿನ ಪೀಳಿಗೆಯ ಜನಾಂಗಕ್ಕೆ ಸ್ವಂತ ಅಸ್ತಿತ್ವ ಸ್ಥಾಪಿಸುವುದನ್ನು ಕಲಿಸದೆ, ತಮ್ಮ ಭೂಗ ಜೀವನದ ಕನಸುಗಳನ್ನು ತುಂಬಿ ಅದರ ಬೆನ್ನಟ್ಟಿ ಹೋಗುವ ಬೇಟೆಗಾರನಂತೆ ಸಿದ್ಧ ಮಾಡಿದರು. ತಾವು ಅನುಭವಿಸಿದ ಜೀವನದ ರಸದಿಂದ ಮಕ್ಕಳನ್ನು ದೂರವಿಟ್ಟರು. ತಾವು ಏನು, ತಮ್ಮ ಮನಸ್ಸಿನ ಮಾರ್ಗವೇನು ಎಂದು ಅವರು ಅರಿಯುವ ಹೊತ್ತಿಗೆ ಅವರಾಗಲೇ ಈ ಸರಪಳಿಯಲ್ಲಿ ಒಂದು ಕೊಂಡಿಯಾಗಿ ಸಿಲಿಕಿಕೊಂಡಿರುತ್ತಿದ್ದರು. ಹೊರ ಬರಲಾಗದೆ, ಅಥವಾ ಬರಲು ಇಷ್ಟವಿಲ್ಲದೆ ಆ ಸರಪಳಿಯೊಳಗೆ ಬಾಳತೊಡಗಿದರು. ಅದು ಒಂದು ರೀತಿಯಲ್ಲಿ ಅವರು ಮಕ್ಕಳ ಮೇಲಿನ ಪ್ರೀತಿಯಿಂದಲೇ ಬೆಳೆಸಿದ್ದು ಎನ್ನುವುದಾದರೆ, ಮಕ್ಕಳು ದೊಡ್ಡವರಾದಾಗ 'ನಿಮ್ಮನ್ನ ಕಷ್ಟ ಪಡೋಕೆ ಬಿಡದೆ ಬೆಳಸಿದ್ದೀವಿ. ನಿಮಗೆ ಕಷ್ಟ ಅಂದ್ರೆ ಏನು ಅಂತಾನೆ ಗೊತ್ತಿಲ್ಲ. ನಮ್ಮ ಕಾಲದಲ್ಲಿ ಹೇಗಿದ್ವಿ ಗೊತ್ತಾ...' ಎಂದು ಮೂದಲಿಸುವುದ್ಯಾಕೆ?! ಮಕ್ಕಳು ಆ ಭೋಗ ಜೀವನಕ್ಕೆ ತುತ್ತಾಗುವುದಕ್ಕೆ, ಈ ಹಿರಿಯರನ್ನು ಮರೆತು ಅವರಿಂದಲೇ ಓಡುವಂತೆ ಮಾಡಿದ್ದಕ್ಕೆ, ಅವರನ್ನು ಬೆಳೆಸಿದ ಈ ಮಾರ್ಗವೇ ಕಾರಣರಲ್ಲವೇ?!

ತಮ್ಮ ಮನೆಯ ಮಕ್ಕಳು ಪಕ್ಕದ ಮನೆಯವರಿಗಿಂತಲೂ ಹೆಚ್ಚು ಅಂಕ ಗಳಿಸಬೇಕೆನ್ನುತ್ತಾರೆ. ಪ್ರತಿಯೊಬ್ಬರಿಗೂ ಅವರದೇ ಆದ ಮನೋಭಾವನೆ, ಸಾಮರ್ಥ್ಯ ಇರುತ್ತದೆ ಅನ್ನುವದನ್ನೇ ಮರೆತು. ಒಬರನ್ನು ಮತ್ತೊಬ್ಬರಿಗೆ ಹೋಲಿಸುತ್ತ ಬದುಕುತ್ತಾರೆ. ಸ್ನೇಹಿತನ ಮಗ ಇಂಜಿನೀಯರ್ ಸೇರಿದರೆ, ತಮ್ಮ ಮಗ ಡಾಕ್ಟರ್ ಓದಲಿಕ್ಕಾದರು ಸೇರಬೇಕು, ಕಡೆಪಕ್ಷ ಇಂಜಿನೀಯರ್ ಸೇರಿದರು ಅವನಿಗಿಂತ ಉತ್ತಮವಾದ ಕಾಲೆಜಿನಲ್ಲೇ ಓದಬೇಕೆಂದು ಬಯಸುತ್ತಾರೆ. ಈ  ಮಕ್ಕಳ ಗೆಳೆಯರಲ್ಲಿ ಒಬ್ಬನಿಗೆ ಕೆಲಸ ಸಿಕ್ಕರೆ ಇವರ ಮಗ ಅದಕ್ಕಿಂತಲೂ ಉತ್ತಮ ಕೆಲಸಕ್ಕೆ ಸೇರಬೇಕೆಂದು ಬಯಸುತ್ತಾರೆ. ತಮ್ಮ ಮಕ್ಕಳಿಗೆ ಒಳ್ಳೆ ಸಂಗಾತಿ ತರುವದಕ್ಕಿಂತಲೂ ತಮ್ಮ ಬಳಗದವರು ತಂದಕೊಂಡಿರುವ ಸಂಬಂಧಗಳಿಗಿಂತಲೂ ದೊಡ್ಡ ಮನೆತನದ ಸಂಬಂಧ ತರಲು ಹವಣಿಸುತ್ತಾರೆ. ವಿದೇಶಿ ಸಂಸ್ಕ್ರುತಿಯನ್ನು ತೆಗಳುವ ಜನರೇ, ತಮ್ಮ ಮಕ್ಕಳು ವಿದೇಶದಲ್ಲೇ ತಳಸೇರಬೇಕೆಂಬ ಆಸೆಯನ್ನೂ ಹೊತ್ತಿರುತ್ತಾರೆ. ಹೀಗೆ ಮಕ್ಕಳನ್ನು ವಿದೇಶಕ್ಕೆ ಅಟ್ಟಿದ ಮೇಲೆ, ಮಕ್ಕಳು ನಮ್ಮನ್ನು ಬಿಟ್ಟು ಹೋದರೆಂದು ಕೊರಗುತ್ತಾರೆ. ಅವರಿಗಾಗಿ ಹವಣಿಸುತ್ತಾರೆ. ತಾವೇ ಸೃಷ್ಟಿಸಿದ ಜೀವನಶೈಲಿಗಾಗಿ ಮರುಗುತ್ತಾರೆ.

ಇದನ್ನು ಬಿಟ್ಟು ತಮ್ಮ ಮಕ್ಕಳಿಗೆ ಒಂದು ಸ್ವಂತ ಅಸ್ತಿತ್ವ ರೂಪಿಸಿಕೊಳ್ಳುವ ಬಗ್ಗೆ, ಜೀವನದ ರಸ ಅನುಭವಿಸುವ ಬಗೆ ತಿಳಿಸಿಕೊಟ್ಟಿದ್ದರೆ, ನಮಗೆ ಜನ್ಮ ಕೊಟ್ಟ ಪ್ರಕೃತಿಯನ್ನು ತುಳಿದು ಅದರಿಂದ ದೂರ ಬಾಳುವುದರ ಬದಲು, ಅದರೊಡನೆ ಒಂದಾಗಿಪ್ರಕೃತಿಯನ್ನು ಬೆಳೆಸಿ ಜೊತೆಯಲ್ಲೇ ತಾವು ಬೆಳೆವುದನ್ನು ಕಲಿಸಿದ್ದರೆ..... ಪ್ರಾಯಶಃ ಈಗ ಆ ಹಿರಿಯರೆಲ್ಲ ಮರದ ಬುಡದಲ್ಲಿ ಕೂತು ಹರಟುವಾಗ 'ನಮ್ಮ ಕಾಲದಲ್ಲಿ ಹಿಂಗಿರ್ಲಿಲ್ಲ....' ಅನ್ನುವ ಮಾತು ಕೇಳ್ತಿರಲಿಲ್ಲ ಅನ್ಸತ್ತೆ! ಏನಂತೀರ?!

ಮಂಗಳವಾರ, ಜೂನ್ 21, 2011

ಆ..... ಅಂದ್ರೆ 'ಆಸ್ಪತ್ರೆ'

ಹೋಟೆಲ್ನಲ್ಲಿ ಅಲ್ಲಿ ಇಲ್ಲಿ ಕುರುಕಲು, ಮಸಾಲೆ ತಿಂಡಿಗಳು ತಿನ್ನೋ ಚಟ ಇದೆ ನೋಡಿ, ಭಾರಿ ಕೆಟ್ಟದ್ದು ಕಣ್ರಿ. ಅದು ಗೊತ್ತಿದ್ದೂ ನಾನು ಆ ಚಟ ಬಿಡೋಕೆ ಆಗಿರಲಿಲ್ಲ. ಹಿಂಗೆ ಇದರಿಂದಾಗಿನೆ ಹೋದ ವಾರ ಹೊಟ್ಟೆ ಕೆಡಿಸ್ಕೊಂಡು ಆಸ್ಪತ್ರೆ ಸೇರ್ಕೊಬೇಕಾಯ್ತು. ಆಸ್ಪತ್ರೇಲಿ ಇರೋದು ಬೇಜಾರಿದ್ರು, ಅಲ್ಲಿ ನಡ್ಯೋದು ನೋಡೋಕೆ ಒಂಥರಾ ಮಜಾ ಇತ್ತು. ಅಲ್ಲಿ ನಾನು ನನ್ನ ಜೀವನದ ಎರಡೂವರೆ ದಿನ ಕಳೆಯಲೇ ಬೇಕಾಗಿ ಬಂತು. ಈ ಆಧುನಿಕ ಆಸ್ಪತ್ರೆಗಳು, ಹೊರಗೆ ಹೋಗಲು ಬಿಡದ ಜೈಲುಗಳು ಹಾಗೂ ಹಣ ಹೀರುವ ತಿಗಣೆಗಳ ಸ್ಪೂರ್ತಿ ಪಡೆದಿವೆ ಅಂದ್ರೆ ತಪ್ಪಗೋದಿಲ್ಲ ಅನ್ಕೋತೀನಿ.

ಅದೊಂದು ಗುರುವಾರ ಬೆಳಗ್ಗಿನಜಾವಕ್ಕೆ ತಿಂದ್ದದ್ದೆಲ್ಲ vomit (ಈ ಪದ ಕನ್ನಡದ ಪದಕ್ಕಿನ್ನ ಕಿವಿಗೆ ಸ್ವೀಟ್ ಆಗಿ ಕೆಳ್ಸತ್ತೆ) ಆಗೋಕೆ ಶುರು ಆಯ್ತು. ಇದು ವಿಪರೀತ ಅನ್ನಿಸ್ದಾಗ ನನ್ನ ಪಕ್ಕ ಇದೆಲ್ಲದರ ಪರಿವೆ ಇಲ್ದೆ ಚನ್ನಾಗಿ ಗೊರಕೆ ಹೊಡ್ಕೊಂಡು ಮಲಗಿದ್ದ ಗೆಳೆಯರನ್ನ ಎಬ್ಬಿಸಿ, ಎಲ್ಲರೂ ಜೊತೆಯಲ್ಲಿ ಆಸ್ಪತ್ರೆಗೆ ಬಂದ್ವಿ. ಆಸ್ಪತ್ರೆಯವರು ಸಹ ಬೆಳಗ್ಗೆಯೇ ಒಳ್ಳೆ ಕುರಿ ಬಂತು ಅಂತ ಅತಿವಿನಯದಿಂದ (ಅತಿವಿನಯಂ ಧೂರ್ತ ಲಕ್ಷಣಂ) ಒಳಗೆ ಹಾಕ್ಕೊಂಡ್ರು. ಒಬ್ಬ ಡಾಕ್ಟ್ರು ಬಂದು ಒಂದು ಸೂಜಿ ಚುಚ್ಚಿದ್ರು, ಅದಕ್ಕೆ ಮತ್ತು ಬಂದ ಹಾಗೆ ಆಗಿ ಮಲಗಿದೆ.

ಎದ್ದಾಗ, ಅಲ್ಲೇ ನನಗಾಗಿ ತಯಾರಾಗಿದ್ದ (ಬಂದಿ)ಖಾನೆಯೊಳಗಿದ್ದೆ, ನನ್ನ ಎಡಗೈನಲ್ಲಿ ಗ್ಲೂಕೋಸ್ ತುಂಬ್ಸೋಕೆ ಒಂದು ಸೂಜಿ ಹಾಕಿ, ಆಗ್ಲೇ ಗ್ಲೂಕೋಸ್ ಏರಿಸ್ತಿದ್ರು. ನಾನು ಎಚ್ಚರ ಆಗೋದನ್ನೇ ಕಾಯುತ್ತ ಕೂತಿದ್ದ ಆಸ್ಪತ್ರೆಯವ್ನು ಒಬ್ಬ 'ನಿಮ್ಮದು ಇನಶುರನ್ಸ್ ಇದೆಯಾ?, ಇಲ್ಲಾಂದ್ರೆ ಕಾಸು ಕಟ್ಟುತ್ತೀರ.....?' ಅಂತ ಕೇಳಿದ. ಇನಶುರನ್ಸ್ ಇದೆ ಅಂತ ಹೇಳಿ ಅದರ ಮಾಹಿತಿ ಕೊಟ್ಟೆ. ಮತ್ತೆ ಸ್ವಲ್ಪ ಸಮಯ ಬಿಟ್ಟು ಬಂದ 'ಇನ್ನೂ ನಿಮ್ಮ ಇನ್ಶುರನ್ಸ್ ಅನುಮೋದನೆ ಆಗಿಲ್ಲ, ಅದು ಆಗಿಲ್ಲ ಅಂದ್ರೆ ಕಾಸು ಕಟ್ಟಬೇಕಾಗತ್ತೆ.' ಅಂತ ಮತ್ತೆ ಕೇಳಿದ!!. ನಾನೇ ಆ ಇನಶುರನ್ಸ್ ಮಾಹಿತಿ ಕೇಂದ್ರಕ್ಕೆ ಒಂದು ಕರೆ ಮಾಡಿ ಅವರಿಗೆ ಕಳಿಸಬೇಕಾದ ಮಾಹಿತಿ ಮತ್ತು ಬಗೆ ಹೇಗೆ ಅಂತ ತಿಳ್ಕೊಂಡು ಅವನಿಗೆ ತಿಳಿಸಿದೆ. ಅದನ್ನು ತಗೊಂಡು ಹೋದವನು ಮತ್ತೆ ಬಂದ 'ಇಲ್ಲ ಇನ್ನೂ ಅನುಮೋದನೆ ಆಗ್ತಿಲ್ಲ' ಅಂತ ಮತ್ತೆ ಓಡಿ ಬಂದ!! ಕಡೆಗೆ ರೋಸಿ ಹೋಗಿ ನಾನೇ ಎದ್ದು ಅವರ ಸ್ಥಳಕ್ಕೆ ಹೋಗಿ ಕುಂತು ಮಾಡಿಸಿ ಬಂದೆ. (ಆ ವೇಳೆಗೆ ಆಗ್ಲೇ ಹಾಕಿದ್ದ ಗ್ಲುಕೋಸ್ ಖಾಲಿ ಆಗಿತ್ತು). ಆ ಕಡೆಯಿಂದ ಸಮ್ಮತಿ ಬಂದ ಮೇಲೆ ತಿಳಿಸಿ ಅಂತ ಹೇಳಿ ಮತ್ತೆ ಬಂದು ಮಲಗಿದೆ. ಆ ವೇಳೆಗೆ ಅಲ್ಲಿನ ಕನ್ನಡವನ್ನು ಅವರ ರಾಗವಾದ ಶೈಲಿಯಲ್ಲೇ ಮಾತಾಡುವ ಮಲಯಾಳಿ ನರ್ಸ್ ಒಬ್ಬಳು ಇನ್ನೊಂದು ಬಾಟಲ್ (ಗ್ಲುಕೋಸ್ ಬಾಟಲ್) ಏರಿಸೋಕೆ ಕಾಯ್ತಿದ್ಲು. ತಿಂಡಿ ತಿನ್ನಲು ಅನುಮತಿ ಪಡೆದು, ಮುಗಿಸಿ ಮತ್ತೆ ಬಾಟಲ್ ಏರಿಸ್ಕೊಂಡು ಮಲಗಿದೆ. ಈ ಬಾಟಲ್ ಪ್ರಕ್ರಿಯೆ ಎರಡು ದಿನ ನಡೆದವು ಬಿಡಿ. ಆ ನಂತರ ನಾನೇ ಬಲವಂತವಾಗಿ ಬೇಡ ಅಂತ ಹೇಳಿ ನಿಲ್ಲಿಸದೆ. ಆದರು ಅಲ್ಲಿನ ನರ್ಸ್ ಬಾಟಲ್ ಹಾಕಲೇಬೇಕೆಂಬ ಹಠ ತೊಟ್ಟಿದ್ದಂತೆ ಕಂಡಿತು. ಇನ್ನೊಬ್ಬ ಡಾಕ್ಟರ ನ ಕರೆದು, 'ಸರ್, ನನಗೀಗ ಊಟ ಸರಿಯಾಗಿ ಸೇರ್ತಿದೆ ಅಂದಮೇಲೆ ಈ ಗ್ಲುಕೋಸ್ ಏನಕ್ಕೆ?! ದಯವಿಟ್ಟು ಇದನ್ನ ಹಾಕಬೇಡಿ' ಅಂತ ಕೇಳ್ಕೊಂಡೆ. ಅವ್ರು ನಕ್ಕೊಂಡು 'ಸರಿ ಬಿಡಿ ಹಾಕೋದಿಲ್ಲ...' ಅಂತ ನರ್ಸ್ ನೋಡಿದ್ರು, ಆಕೆಗೂ ಅದು ಅರ್ಥ ಆಯ್ತು. ಅವರ ಧರ್ಮಕ್ಕೆ ತ್ಯುಚಿ ತಂದೆ ಅನ್ನೋ ಕಾರಣಕ್ಕೆ, ಆ ನರ್ಸ್, ಕೋಪಿಸಿಕೊಂಡವಳ ನೋಡಿ ಹೋದಳು! 

ಹಾಂ, ಆ ಮೊದಲನೇ ದಿನನೇ ಸಂಜೆ ಡಾಕ್ಟ್ರು ಬಂದು ನನ್ನ ನೋಡಿದರು, ಅಷ್ಟೊತ್ತಿಗೆ ಆಗ್ಲೇ ನನ್ನದೊಂದು ದೊಡ್ಡ ಫೈಲೇ ರೆಡಿ ಮಾಡಿದ್ರು. ಅದರ ಗಾತ್ರ ನೋಡಿನೇ ನಂಗೆ ಯಾವ್ದೋ ದೊಡ್ಡ ರೋಗ ಬಂದಿದೆ ಅನ್ನೋ ಭಾವನೆ ಬಂತು. ಅದರಲ್ಲಿ ಆಗಲೇ ನನ್ನ ರಕ್ತ ಪರೀಕ್ಷೆಯ ವರದಿಗಳು ಸೇರ್ಕೊಂಡಿದ್ವು. ಸುಮಾರು ೧೦ ಸೊಳ್ಳೆ ಹೀರೋಕಿನ್ನ ಜಾಸ್ತಿನೇ ರಕ್ತ ಹೀರ್ಕೊಂಡಿದ್ರು ಅಂತ ಕಾಣ್ಸತ್ತೆ. ಅದು ತಗೊಂಡಿದ್ದು ಅರೆ ಪ್ರಜ್ಞಾವಸ್ಥೆಯಲ್ಲಿ ನಾನು ಮಲಗಿದ್ದಾಗ ಅನ್ನೋದು ತಿಳೀತು. ಆ ಡಾಕ್ಟರ ಸ್ಕ್ಯಾನ್ನಿಂಗ್, ECG, ಅಂತ ಇನ್ನು ಅಷ್ಟು ಪರೀಕ್ಷೆ ಹೇಳಿ ಹೋದರು. 'ಏನಿಲ್ಲಪ್ಪ ಊಟದಲ್ಲಿ ಏನೋ ತೊಂದ್ರೆ ಆಗಿ ಹೀಗೆ ಆಗಿದೆ' ಅಂತ ನನ್ನ ಸಮಾಧಾನ ಮಾಡಿದ್ರು. ಆದರು ನನಗೆ ಆ ಪರೀಕ್ಷೆಗಳೆಲ್ಲ ಯಾಕೆ ಹೇಳಿದ್ರು ಅಂತ ಆಗ ಅರ್ಥ ಆಗ್ಲಿಲ್ಲ. ನಾನು ಬಿಡೋ ವೇಳೆಗೇನೆ ತಿಳಿದಿದ್ದು ಅಲ್ಲಿ ಇನಶುರನ್ಸ್ ಇಂದ ೧೦ಸಾವಿರದ ವರೆಗೆ ಅನುಮೋದನೆ ಸಿಕ್ಕಿತ್ತು. ಇವರು ಹೇಗಾದರೂ ಅದನ್ನು ತಲುಪಲೇ ಬೇಕೆಂದು ನಿಶ್ಚಯಿಸಿಕೊಂಡು ಅದಕ್ಕೆ ತಕ್ಕ ಕಾರ್ಯತಂತ್ರ ರೂಪಿಸಿಕೊಂಡಿದ್ರು ಅಂತ.


ಇಲ್ಲಿ ಇನ್ನೊಂದು ಸಣ್ಣ ನೆನಪು ಅಂದ್ರೆ, ಆಸ್ಪತ್ರೆ ನಲ್ಲಿ ಇದ್ದ ಮೇಲೆ ನೋಡೋಕೆ ಬರೋರು ಬ್ರೆಡ್ಡು-ಬಿಸ್ಕೆಟ್ಟು ತರೋದೆ ತಾನೇ. ಹಾಗೆ ಗೆಳೆಯ ರಾಕೇಶ್ ಕೂಡ ತಂದಿದ್ದ. ಆದ್ರೆ ನಮ್ಮ ಹುಡುಗ್ರು 'ನಿಂಗೆ ಹೊಟ್ಟೆ ಸರಿ ಇಲ್ಲ ನಿಂಗೆ ಬೇಡ' ಅಂತ ಹೇಳಿ ತಾವೇ ಸಮಾಪ್ತಿ ಗೊಳಿಸಿದರು. ಮೊದಲೇ ತಿಂಡಿ ಪೂತನಾದ ನಾನು, ಇದು ಕಣ್ಣ ಮುಂದೆಯೇ ನಡೆಯುತ್ತಿದ್ದರೂ, ಏನು ಮಾಡಲಾಗದೆ ಅಸಹಾಯಕನಾಗಿ ನೋಡುತ್ತಿದ್ದೆ.

ಅಲ್ಲಿ ಹೊಸದಾಗಿ ಸೇರಿರೋ ಮೂರು ನರ್ಸ್ ಗಳು ಇದ್ದರು. ಅವರಿಗಂತೂ ಅವರು ಕಷ್ಟ ಪಟ್ಟು ಕಲಿತ ವಿದ್ಯೆ ಪ್ರಯೋಗ ಮಾಡೋಕೆ ನಾನೇ ಪ್ರಯೋಗದ ಮಂಗವಾಗಿ ಸಿಕ್ಕಿಬಿಟ್ಟಿದ್ದೆ. ಒಬ್ಬ ನರ್ಸ್ ಆ ಗ್ಲುಕೋಸ್ ಸೂಜಿ ಸರಿಯಾಗಿ ಚುಚ್ಚದೆ 5ml ಅಷ್ಟು ರಕ್ತ ಹಾಗೆ ಹರಿಸಿದಳು. ಅದನ್ನು ಪಾಪ ಸೊಳ್ಳೆಗಾದರೂ ದಾನ ಮಾಡಿದ್ದರೆ ಅದರ ಕುಟುಂಬವೆಲ್ಲ ಔತಣ ಮಾಡುತ್ತಿದ್ದವೇನೋ! ಎಡಗೈನಲ್ಲಿ ಆ ಸೂಜಿ ಚುಚ್ಚಿದ್ದ ಜಾಗ ಊದಿಕೊಂಡ ಕಾರಣ, ಹೊಸ ಸೂಜಿಯೊಂದನ್ನು ತಂದು ಬಲಗೈನಲ್ಲಿ ಹಾಕಿದರು. ಇನ್ನೊಂದು ಸನ್ನಿವೇಶದಲ್ಲಿ ಅವರು ರಕ್ತ ವತ್ತಡ ಪರೀಕ್ಷೆ ಮಾಡಿದ ರೀತಿ ಇದಕ್ಕಿಂತ ಚಂದವಾಗಿತ್ತು. ಒಬ್ಬಳು ನನ್ನ ತೋಳಿಗೆ ರಕ್ತ ವತ್ತಡ ಮಾಪನದ ಪಟ್ಟಿ ಕಟ್ಟಿ ಪರಿಕ್ಷೀಸಿದಳು ಅವಳಿಗೆ ಸರಿಯಾಗಿ ಗೊತ್ತಾಗಲಿಲ್ಲ ಅನ್ಸತ್ತೆ. ಅದಕ್ಕೆ ಸಾಹಯವಾಗಿ ಇದ್ದ ಇನ್ನೊಬ್ಬಳ ಮುಖ ನೋಡುತ್ತಾ ನಿಂತಳು. ಅಲ್ಲಿಯ ತನಕ ಹಿಂದಿದ್ದ, ಸ್ವಲ್ಪ ಮುಂದಾಳಿನಂತಿದ್ದವಳು ಈ ಇಬ್ಬರನ್ನು ಸರಿಸಿ ಬಂದು ಮತ್ತೆ ಪರಿಕ್ಷೀಸಿದಳು. ಅವಳಿಗೂ ಗೊತ್ತಾಗಲಿಲ್ಲ. ಇದು ನಿಮಿಷ ಬಿಟ್ಟು ಬರ್ತೀವಿ ಅಂತ ಹೊರಟುಹೋದರು. ಮತ್ತೆ ಬಂದರು, ಹುಡುಗನಿಗೆ ಹೆಣ್ಣು ಕೊಡುವಾಗ ವಿಚಾರಿಸುವ ಹಾಗೆ ನಮ್ಮ ಕುಟುಂಬದ ಮಾಹಿತಿ ತಗೆದುಕೊಂಡರು. (ನಾನು ಅದೇ ನಿರೀಕ್ಷೆನಲ್ಲೆ ಇದ್ದೆ, ಆದರೆ ಆಮೇಲೆ ಗೊತ್ತಾಗಿದ್ದು ಅದು ಅವರ ಬೆಲೆ ಪಟ್ಟಿ ತುಂಬಿಸೋಕೆ ಸಮರ್ಥರೋ ಅಲ್ಲವೋ ಅನ್ನೋ ಅನುಮಾನಕ್ಕೆ ಕೊಂಡ ಮಾಹಿತಿ ಅಂತ). ಮತ್ತೆ ಇದು ನಿಮಿಷ ಬಿಟ್ಟು ಆ ಮೂರು ಜನ ಬಂದು (ಹೇಳಿಸ್ಕೊಂಡು ಬಂದಿದ್ದರೋ, ಇಲ್ಲ ಅವರವರೆ ಒಂದು ಪ್ರಯೋಗ ಮಾಡ್ಕೊಂಡು ಆಮೇಲೆ ಬಂದರೋ ಗೊತ್ತಿಲ್ಲ), ಮತ್ತೆ ರಕ್ತ ವತ್ತಡ ಪರೀಕ್ಷೆ ಮಾಡಿದ್ರು, 'ಈ ಸರಿಯಿದೆ' ಅನ್ನುವ ರೀತಿಯಲ್ಲಿ ಏನೋ ಬರೆದುಕೊಂಡು ಹೋದರು.

ಆದರು ಏನೇ ಹೇಳಿ, ಅಲ್ಲಿ ಆ ಮಲಯಾಳಿ ನರ್ಸ್ ಗಳ ಕೆಲಸ ಮೆಚ್ಚಬೇಕಾದ್ದೆ. ಕಣ್ಣು ತಂಪಾಗೋ ವಿಚಾರ ಬೇರೆ ಬಿಡಿ, ನಾನು ಹೇಳ್ತಿರೋದು ಅವರ ಸೇವೆ ಮನೋಭಾವನೆ ಬಗ್ಗೆ. ಅದು ಮಾತ್ರ ಮೆಚ್ಚಬೇಕಾದ್ದೆ.

ಆ ದಿನ ಸಂಜೆ ಕೂಡ ಡಾಕ್ಟ್ರು ಬಂದ್ರು ಆ ಹೊತ್ತಿಗೆ ನಾನು ಮಾಮೂಲಿನಂತೆ ಇದ್ದೆ, ಅವರು ಪರೀಕ್ಷೆ ಮಾಡಿ ಏನು ಹೇಳದೆ ಹೋಗ್ತಿದ್ರು. ಅಲ್ಲಿವರೆಗೆ ಆ ದಿನ ಬಿಡುಗಡೆ ಸಿಗತ್ತೆ ಅನ್ನೋ ಆಸೆಯಲ್ಲಿದ್ದ ನನಗೆ ಭಯವಾಯಿತು. ನಾನೇ ಕೇಳಿಬಿಟ್ಟೆ, 'ನಾನು ಮನೆಗೆ ಹೋಗಬಹುದಲ್ಲ?!...'. ಅದಕ್ಕೆ ಅವ್ರು ನಕ್ಕುಬಿಟ್ರು, ನನಗೆ ಆಗ ನನ್ನ ಕಿವಿಯಲ್ಲಿನ ಚೆಂಡು ಹೂವುಗಳು ಕಾಣಿಸಿದವು. ಕೂಡಲೇ ನನ್ನ ಗೆಳಯನ್ನ ಅವರ ಹಿಂದೆ ಕಳಿಸಿದೆ. 'ನಾಳೆ ಬಿಡಲೇ ಬೇಕು, ಅವನಿಗೆ ಮುಖ್ಯವಾದ ಕೆಲಸ ಇದೆ' ಅಂತ ಹೇಳಿದ್ದಕ್ಕೆ ಬೆಳಗ್ಗೆ ಕರೆ ಮಾಡಿ ಹೇಳ್ತೀನಿ ಅಂತ ಹೇಳಿ ಅವ್ರ ಮನೆಗೆ ಹೊರಟುಹೋದರು. ಆ ರಾತ್ರಿಯೂ ಅಲ್ಲೇ ಕಳೆದುಹೋಯಿತು. ಕಣ್ಮುಂದೆಯೇ ನರ್ಸ್ ಗಳು ಲಲನಾಮಣಿಯರಂತೆ ಓಡಾಡುತ್ತಿದ್ದರೂ, ಆ ಆಸ್ಪತ್ರೆ ಜೈಲು ಅನ್ಸೋಕೆ ಶುರು ಆಯ್ತು. ಮಾರನೇ ದಿನ ಎದ್ದು, ಬೆಳಗ್ಗೆ ೯ ರಿಂದಲೇ ಡಾಕ್ಟರ ಗೆ ಕರೆ ಮಾಡಿ ಅಲ್ಲಿಂದ ನಿರ್ಗಮಿಸುವ ಪ್ರಕ್ರಿಯಿಗೆ ಚಾಲನೆ ಶುರು ಮಾಡಿಸದೆ. ಇನ್ನು ಅರ್ಧ ಗಂಟೆ, ಐದು ನಿಮಿಷ, ಇನ್ನೇನು ಬರ್ತಿದೆ, ಬೆಲೆಪಟ್ಟಿ ಬಂದ ಕೂಡಲೇ ಕಳಿಸ್ತೀವಿ ಅಂತ ಗಂಟೆ ಮಧ್ಯಾಹ್ನ ೧ ಹೊಡೆದರು ಹೇಳ್ತಾನೆ ಇದ್ರೂ. ಅಷ್ಟರಲ್ಲಿ ನನ್ನ ಗಂಟು ತಯಾರು ಮಾಡ್ಕೊಂಡು, ಕೈಗಳಿಗೆ ಹಾಕಿದ್ದ ಬೇಡಿ (ಸೂಜಿ!) ತಗೆಸ್ಕೊಂದು ಅಲ್ಲೇ ಹೋಗಿ ಕುಂತೆ, 'ಈಗಲೇ ಕಳಿಸಿ' ಅಂತ, ಅಲ್ಲಿನ ಜವಾನ ಆ ಸಮಯದಲ್ಲೇ ತುಂಬಾ ಕೆಲಸವಿದ್ದ ಕಾರಣ, ನಮಗೂ ಹೋಗುವ ಆತುರವಿದ್ದ ಕಾರಣ ನನ್ನ ಗೆಳಯನೆ ಹೋಗಿ ಅದನ್ನೆಲ್ಲ ತಯಾರು ಮಾಡಿಸ್ಕೊಂಡು ಬಂದ. ಕಡೆಗೂ ಅಲ್ಲಿನ ಎರಡೂವರೆ ದಿನಗಳ ಅಜ್ಞಾತವಾಸ ಕಳೀತು, ಆಚೆ ಬಂದಾಗ ಖುಷಿಯಿಂದ ಹಾಯ್ ಎನಿಸಿತು. 'ಆ...' ಎಂದು ನರಳುತ್ತ ಬಂದ ಆಸ್ಪತ್ರೆಯ ಹೆಬ್ಬಾಗಿಲಲ್ಲಿ ನಿಂತು 'ಮತ್ತೆ ಬರೋಲ್ಲ....!!' ಅಂತ ಹೇಳಿ ಬಂದೆ.


ಶುಕ್ರವಾರ, ಜನವರಿ 21, 2011

ಉಪ್ಪಿಟ್ಟು - ಕೇಸರಿಭಾತ್...!!

ಅಬ್ಬಬ್ಬಾ! ಈ ಹುಡುಗ ಹುಡುಗಿ ಓದು ಮುಗಿಸಿ, ಕೆಲಸ ಹಿಡಿದು, ಮುಖದಲ್ಲಿ ಮೊಡವೆ ಬರೋ ವಯ್ಯಸಾಯ್ತು ಅಂದ್ರೆ ಮನೆಯವ್ರ್ಗೆಲ್ಲ ಬಂತು ನೋಡ್ರಿ "ಯಾವಾಗ ನಿಮ್ಮ ಮಗನ/ಮಗಳ ಮದುವೆ?!" ಅನ್ನೋ ಪ್ರಶ್ನೆಯ ತಲೆ ನೋವು. ಈ ವಿಚಾರದಲ್ಲಿ ಮಕ್ಕಳನ್ನು ಬೆಳೆಸಿದ ಅಪ್ಪ ಅಮ್ಮನಿಗಿಂತ ಸುತ್ತಲಿನ ನೆಂಟರಿಗೆ ಹೆಚ್ಚು ಆಸಕ್ತಿ ಇರತ್ತೆ ಕಣ್ರೀ. ಮದುವೆ, ಮುಂಜಿ ಇಲ್ಲ ಮಸಣದಲ್ಲೇ ಆಗಲಿ ತಂದೆ ತಾಯಿರಿಗೆ ಈ ಪ್ರಶ್ನೆ ಬೇತಾಳದಂತೆ ಬೆನ್ನು ಹತ್ತಿರುತ್ತೆ. ಈ ಪ್ರಶ್ನೆಗಳಿಂದ ಬೇಸತ್ತೋ ಇಲ್ಲ ತಮ್ಮ ಮಕ್ಕಳು ಮದುವೆ ಮಾಡ್ಕೊಂಡು ಜವಾಬ್ದಾರಿ ಹೊತ್ಕೊತಾರೆ ಅನ್ನೋ ಅರಿವಿನಿಂದಲೋ ದೊಡ್ಡವರು ವಧು/ವರ ಬೇಟೆಗೆ ಎಲ್ಲಾ ಶಸ್ತ್ರಗಳೊಂದಿಗೆ ತಯರಾಗ್ತಾರೆ. ಅಲ್ಲಿಗೆ ಶುರು ನೋಡಿ ಭಾವಿಚಿತ್ರಗಳು ಮತ್ತೆ ಜಾತಕಗಳ ಆಟ ಓಡಾಟ...


ಕೆಲವೊಂದು ಸಂದರ್ಭಗಳಂತೂ ತುಂಬಾನೆ ತಮಾಷೆಯಗಿರತ್ತೆ ಕೇಳೋಕೆ. ನೋಡಿ ಹೀಗೆ ನನ್ನ ಸ್ನೇಹಿತನೊಬ್ಬ ಹುಡುಗಿ ನೋಡೋಕೆ ಅವರ ಮನೆಗೆ ಹೋಗಿದ್ದ. ಇವರು ಮಾಹಿತಿ ವಿನಿಮಯಗಳನ್ನೆಲ್ಲಾ ಮುಗಿಸಿ ಹೊರಡಬೇಕಿತ್ತು. ಅಷ್ಟರಲ್ಲೇ, ಇನ್ನೊಂದು ತಂದ ಇದೇ ಹುಡುಗಿಯ ಸಂದರ್ಶನಕ್ಕೆ ಬಂದು ಇಳೀತು!!. ಬಂದವರೇ ಬಾಗಿಲ ಎದುರಿಗೆ ಕುಳಿತಿದ್ದ ಇವರಿಗೆ ನಮಸ್ಕರಿಸಿ, 'ನೋಡಿ ಸ್ವಾಮೀ, ಇವನೇ ಹುಡುಗ..' ಅಂತ ಪರಿಚಯನು ಮಾಡಿಸಿಬಿಟ್ರು!!. ಪಾಪ ಇವರಿಗೆ ನಗಬೇಕೋ ಇಲ್ಲ ಹುಡುಗಿ ಮನೆಯವರ ಪರಿಸ್ತಿತಿಗೆ ಅಳಬೇಕೋ ಗೊತ್ತಾಗದೆ ಬೇಗನೆ ಅಲ್ಲಿಂದ ಕಾಲು ಕಿತ್ತಿದ್ದಾರೆ! ಇಂಥ ಇರುಸು-ಮುರುಸುಗಳು ಆಗ ಏನು ತೊಚದಂಗೆ ಮಾಡಿದ್ರು ಆಮೇಲೆ ನೆನೆಸ್ಕೊಂದಾಗ ಬಿದ್ದು ಬಿದ್ದು ನಗೊದಂತು ಖಾತ್ರಿ ನೋಡಿ...

ಹುಡುಗ ಹುಡುಗಿಗೂ ಅಷ್ಟೇ ಇದು ಒಂಥರ ಹೊಸ ಅನುಭವ ಹೊಸ ಜೋಡಿ ಸಿಗತ್ತೆ ಅನ್ನೋ ಖುಷಿ ಹುಟ್ಟತ್ತೆ ಒಳಗೊಳಗೆ. ತಮ್ಮ ಕನಸಿನ ಕಲ್ಪನೆಯ ಜೋಡಿಗೆ ಇರಬೇಕಾದ ರೂಪುವೈಶಿಶ್ಥ್ಯಲಕ್ಷಣಗಳ ಪಟ್ಟಿಯೊಂದು ಮನಸಿನಲ್ಲೇ ತಯಾರುಗುತ್ತೆ. ಬರುವ ಪ್ರಸ್ತಾಪಗಳೆಲ್ಲವನ್ನು ಈ ಪಟ್ಟಿಯೊಂದಿಗೆ ತಾಳೆ ಹಾಕಿ ನೋಡ್ತಾರೆ.  ದಿನಕ್ಕೊಂದು ಭಾವಚಿತ್ರದ ಅವಲೋಕನ, ಒಪ್ಪಿಗೆಯಾದರೆ ಜಾತಕ ಹೋಲಿಕೆಯ ಪರೀಕ್ಷೆ, ಈ ಅಡ್ಡಗಳನ್ನು ಹಾರಿದ ಮೇಲೆ ಪ್ರತ್ಯಕ್ಷ ದರ್ಶನದ ಸೌಭಾಗ್ಯ. ಕೆಲವರು ಅದೃಷ್ಟವಂತರು ಪುಣ್ಯವಂತರು ಅಂತ ಇರ್ತಾರಲ್ಲ ಅವ್ರಿಗೆ ಮಾತ್ರ ನೋಡಿ ಒಂದು ಇಲ್ಲ ಎರಡನೇ ಸಂದರ್ಶನದಲ್ಲೇ ಪಟ್ಟಿಯ ಎಲ್ಲಾ ಅಂಶಗಳನ್ನ ಹೋಲುವಂಥವ್ರು ಸಿಕ್ಕಿಬಿಡ್ತಾರೆ. ಇನ್ನು ಮಿಕ್ಕವ್ರದ್ದೆ ಪಾಡು, ಅವರನ್ನ ನೋಡಿದ್ರೆ ಅಯ್ಯೋ ಅನ್ಸತ್ತೆ!!. ಶತಕ ಸಂದರ್ಶನಗಳನ್ನ ಹೊಡೆದರು, ಜಾತಕ ಹೊಂದೋದು ನಮಗೆ ಇಷ್ಟ ಆಗಲ್ಲ, ಇಷ್ಟ ಆಗೋದು ಜಾತಕ ಹೊಂದಲ್ಲ ಅನ್ನೋ ಹಾಗಾಗತ್ತೆ. ಬಹುಶಃ ಇದನ್ನ ನೋಡಿನೇ ಗಾದೆ ಮಾಡಿದ್ರು ಅನ್ಸತ್ತೆ "ಹುಚ್ಚು ಬಿಡೋವರೆಗೂ ಮದುವೆ ಆಗಲ್ಲ ಮದುವೆ ಆಗೋವರೆಗೂ ಹುಚ್ಚು ಬಿಡಲ್ಲ" ಅಂತ.

ಇನ್ನು ಸಂದರ್ಶನದ ಪ್ರಕ್ರಿಯೆ ಬಗ್ಗೆ ಹೇಳೋದಾದ್ರೆಹುಡುಗನ ಮನೆಯವರ ಒಂದು ದಂಡು ಹುಡುಗಿಯ ಮನೆಯೆಡೆಗೆ ಬಂದು ನಿಲ್ಲತ್ತೆ. ಅಲ್ಲಿ ಸ್ವಲ್ಪ ಹೆಚ್ಚಾಗಿಯೇ ಮರ್ಯಾದೆಗಳು ನಡೆಯುತ್ತವೆ. ಭಾವಿ ವರನಿಗೆ ಹುಡುಗಿ ಎಲ್ಲೂ ಕಾಣ್ತಿಲ್ಲವಲ್ಲ ಅಂತ ಕಣ್ಣುಗಳು ಅವಳನ್ನೇ ಹುಡುಕುತ್ತಿರುತ್ತೆ. ಸ್ವಲ್ಪ ದೊಡ್ಡವರ ಹರಟೆಯಾದ ಮೇಲೆ ಹುಡುಗಿಯನ್ನು ಕರೆಸುತ್ತಾರೆ. ಅಲ್ಲಿಯವರೆಗೆ ಉಪಯೋಗಿಸಿರದೆ ಪ್ರದರ್ಶನಕ್ಕೆ ಮಾತ್ರ ಮೀಸಲಿದ್ದ ಪಿಂಗಾಣಿ ಲೋಟಗಳು ಕಾಫಿ ತುಂಬಿಕೊಂಡು ಒಂದು ತಟ್ಟೆಯಲ್ಲಿ ಕುಳಿತು ಹೊಸ ಸ್ಟೀಲಿನ ಪ್ಲೇಟಿನಲ್ಲಿ ತಿಂಡಿಯ ಜೊತೆ ಹುಡುಗಿಯ ಕೈ ಪಲ್ಲಕ್ಕಿಯಲ್ಲಿ ಬರುತ್ತವೆ. ಇಷ್ಟರಲ್ಲಿ ಹುಡುಗನ ತಲೆಯಲ್ಲಿ ಆ ಪಟ್ಟಿ ಎದ್ದು ತಾಳೆ ಹಾಕಲು ಸಿದ್ಧವಾಗಿರತ್ತೆ. ಹುಡುಗನು ಸೇರಿದಂತೆ ಎಲ್ಲರ ಕಣ್ಣುಗಳು ಅವಳನ್ನು ಒಮ್ಮೆ ವಿಶ್ಲೇಷಣೆ ನಡೆಯುತ್ತೆ. ಕಾಪಟಿನಲ್ಲಿನ ಒಡವೆಗಳು ಅಮ್ಮನ ರೇಷ್ಮೆ ಸೀರೆ ಹುಡುಗಿಯ ಮೈತುಂಬಿರತ್ತೆ. ಹುಡುಗಿಗೂ ಸ್ವಲ್ಪ ನಾಚಿಕೆ ಅದೇ ಸಣ್ಣ ನಗುವಿನ ರೂಪ ತಾಳಿ ಮೊಗದಲ್ಲಿ ತುಂಬಿರುತ್ತೆ.

ಇಬ್ಬರು ಒಬ್ಬರನ್ನೊಬ್ಬರು ನೋಡುತ್ತಾರೆ. ನಂತರ 'ಏನು ಓದಿರೋದು?', 'ಎಲ್ಲಿ ಓದಿದ್ದು?', 'ಇಗ ಏನು ಮಾಡ್ತಿರೋದು?'...ಇನ್ನು ಒಂದಷ್ಟು ಮೊದಲೇ ಉತ್ತರ ಗೊತ್ತಿರುವ ಪ್ರಶ್ನೆಗಳು ಹಾರಾಡುತ್ತವೆ. ನಂತರ ದೊಡ್ಡವರು ಅವರ ಸಂಬಂಧಿಗಳ ಪರಿಚಯದಿಂದ ಇಬ್ಬರು ಹೇಗೆ ಹತ್ತಿರವಾಗ್ತಾರೆ ಅನ್ನೋದನ್ನ ಕಂಡು ಹಿದ್ಯೋಕೆ ಶುರು ಮಾಡ್ತಾರೆ. ಅಲ್ಲಿಯವರೆಗೆ ಹುಡುಗನ ಬಾಯಿ ಕಾಫಿ ಕುಡ್ಯೋಕೆ ಬಿಟ್ರೆ ಮತ್ತೆ ತೆರೆದೇ ಇರಲ್ಲ. ಇಷ್ಟ ಆಗ್ಬಿಟ್ರೆ ಸ್ವಲ್ಪ ಧೈರ್ಯ ಮಾಡಿ, 'ಅಂಕಲ್, ಅವ್ರ ಹತ್ರ ಸ್ವಲ್ಪ ಮಾತಾಡಬಹುದ?!' ಅಂತ ಭಯ ಇದ್ರೂ ತೋರಿಸ್ಕೊಲ್ದೆ ಕೇಳಿಬಿಡ್ತಾನೆ. 'ಅದಕ್ಕೇನಂತೆ ಮಾತದ್ಕೊಲಿ. ಹೋಗಮ್ಮ, ಇಬ್ರು ಮಾತಾಡ್ಕೊಳಿ ..' ಅಂತ ಹಸಿರು ನಿಶಾನೆ ಕೊಡ್ತಾರೆ. ಮನೆಯಿಂದ ಬರುತ್ತಾ ದಾರಿಯಲ್ಲಿ ತಯಾರು ಮಾಡ್ಕೊಂಡಿದ್ದ ಪ್ರಶ್ನೆಗಳು, ಇದೇ ರೀತಿ ಸಂದರ್ಶನಕ್ಕೆ ಹೋಗಿ ಬಂದ ಸ್ನೇಹಿತರ ಸಲಹೆಗಳಿಂದ ಸಿದ್ಧ ಮಾಡಿದ ಸವಾಲುಗಳು, ಅಲ್ಲಿ ಮರೆತುಹೋಗುತ್ತೆ. ಆಗ ಮತ್ತೆ 'ಎಲ್ಲಿ ಓದಿದ್ದು?'... ಅದೇ ಉತ್ತರವಿರುವ ಪ್ರಶ್ನೆಗಳು ಶುರು ಅಗತ್ವೆ. ಪರಸ್ಪರ ಮಾಹಿತಿಗಳು ವಿನಿಮಯವಗುತ್ತೆ. ಮತ್ತೆ ಮರಳಿ ಬರುತ್ತಾರೆ. ಇವರು ಹೋದಾಗ ಶುರು ಮಾಡಿದ್ದ, (ಅವರ ಹಿರಿಯರಿಗೆ ಕಾಣದಂತೆ ಎಷ್ಟೇ ಸುತ್ತು ಹೊದೆಡಿದ್ರು) 'ನಮ್ಮ ಕಾಲದಲ್ಲಿ ಹಿಂಗಿರ್ಲಿಲ್ಲ ನೋಡಿ, ನಾವು ನಮ್ಮ ಹೆಂಡ್ತಿರನ್ನ ನೋಡಿದ್ದು ಮದುವೆ ಮಂಟಪದಲ್ಲೇ' ಅನ್ನೋ ಅವರ ಕಾಲದ ಮಾತುಗಳು ಇನ್ನು ಅದೇ ಕೊನೆಯಲ್ಲಿ ಗಸ್ತು ಹೊಡೆಯುತ್ತಿರುತ್ವೆ. ಸಂದರ್ಶನ ಮುಗಿಯತ್ತೆ, ಭಾವಿ ವರ ಮತ್ತು ಮನೆಯವರು ಮನೆಯ ಕಡೆಗೆ ಹೊರಡ್ತಾನೆ. ಖಾಲಿ ಉಪ್ಪಿಟ್ಟು ಕೆಸರಿಭಾತಿನ ಪ್ಲೇಟುಗಳು ಇದನ್ನೆಲ್ಲಾ ಒಂದು ಸಿನೆಮಾ ಥರ ನೋಡ್ಕೊಂಡು ಸುಮ್ಮನೆ ಇರತ್ವೆ.






ಬುಧವಾರ, ಅಕ್ಟೋಬರ್ 20, 2010

ಸರ್ಕಾರಿ ಕಚೇರಿಯಲ್ಲೊಂದು ಸಂದರ್ಶನ

ಕೊಳಚೆ ನಿರ್ಮೂಲನ ಮಂಡಳಿಯಲ್ಲಿನ ಸಂದರ್ಶನಕ್ಕಾಗಿ ವಿದ್ಯಾ ಕುಮಾರ್ ಬೆಳಗ್ಗೆ 9 ಕ್ಕೆ ಅಣಿಯಾಗಿ ಬಂದು ಕಚೇರಿಯ ಬಾಗಿಲ ಬಳಿ ಒಂದು ಗಂಟೆ ಕಾದರು ಯಾರು ಕಾಣುವುದಿಲ್ಲ. ತಾನು ವಿಳಾಸ ತಪ್ಪಿ ಬೇರೆಲ್ಲೋ ಬಂದಿರಬೇಕು ಎಂದು ಅನುಮಾನಿಸಿ ಹೊರಡಬೇಕೆನ್ನುವಷ್ಟರಲ್ಲಿ ಜಾವನ ಜಬ್ಬಾರ್ ಪ್ರತ್ಯಕ್ಷನಾಗುತ್ತಾನೆ. ಆದೆ ಕೊಳಚೆ ನಿರ್ಮೂಲನ ಮಂಡಳಿಯಂದು, ಆ ದಿನವೇ ಅಲ್ಲಿ ಸಂದರ್ಶನವಿರುವುದೆಂದು ಜಬ್ಬಾರನಿಂದ ಖಚಿತವಾದ ಮೇಲೆ ಒಳ ನಡೆಯುತ್ತಾನೆ. ಅದು ಅವನಿಗೆ ಕೆಲವು ಸರ್ಕಾರಿ ಕಛೇರಿಗಳ ಪಾಡು ಏನೆಂದು ಅರ್ಥವಾಗುತ್ತದೆ.

೧೦-೧೫ ಕ್ಕೆ ಮಂಡಳಿಯ ಅಧ್ಯಕ್ಷ ಉದರಪೂರ್ಣರ ಆಗಮನವಾಗುತ್ತದೆ. ತಮ್ಮ ಕೋಟನ್ನು ಕುರ್ಚಿಗೆ ಹೊದ್ದಿಸಿ, ಮಕ್ಕಳಿಗಿಂತಲೂ ಹೆಚ್ಚು ಪ್ರೀತಿಯಿಟ್ಟು ಬೆಳೆಸಿದ ತಮ್ಮ ಹೊಟ್ಟೆಯನ್ನು ಚಂದದಿಂದ ಸವರಿಕೊಂಡು ಆಸನ ಮೇಲೆ ವರಗುತ್ತಾನೆ. ಜಬ್ಬಾರನಿಂದ ಒಂದು ಕಡಕ್ ಚಹಾ ತರಿಸಿ ಕುಡಿದು ಮುಗಿಸುವಷ್ಟರಲ್ಲಿ ಮಂಡಳಿಯ ಹಿರಿಯ ಗುಮಾಸ್ತ, ಸುಡುಗಾಡು ಸೀತಾರಾಮು 'ಥೂ! ಹಾಳು ಸುಡುಗಾಡು, ಏನು ಕೆಲ್ಸನೂ ಏನು ಜನಗಳೋ. ಈ ಅಧ್ಯಕ್ಷರದ್ದು ಬೇರೆ ಸುಡುಗಾಡು ಕಿರಿಕಿರಿ' ಎಂದು ಗೊಣಗಿಕೊಂಡು ಪ್ರವೇಶಿಸುತ್ತಾನೆ. ಆ ದಿನ ನಡೆಯಬೇಕಿರುವ ಸಂದರ್ಶನಕ್ಕೆ ಮಂದಾಕಿನಿಯವರು ಏಕೆ ಇನ್ನು ಬಂದಿಲ್ಲವೆಂದು ತಮ್ಮ ತಮ್ಮ ಅಭಿಪ್ರಾಯ ಹಂಚಿಕೊಳ್ಳುತ್ತಿರುವಾಗ ಮೇಕಪ್ ಮಂದಾಕಿನಿಯವರು ಬೆಕ್ಕಿನ ನೆಡಿಗೆಯೊಂದಿಗೆ ತಮ್ಮ ಮೇಕಪ್ ಸರಿ ಪಡಿಸಿಕೊಳ್ಳುತ್ತಾ ಆಗಮಿಸುತ್ತಾರೆ. ತಮ್ಮ ಮನೆಯ ನಾಯಿಯ ಮದುವೆ ವಾರ್ಷಿಕೋತ್ಸವದ ಸಿಹಿ ಹಂಚುತ್ತಾ ತಡವಾಗಿ ಬಂದ ಕಾರಣ ತಿಳಿಸುತ್ತಾಳೆ. ಆ ಸಿಹಿಯನ್ನು ಕೊಂಚ ಅಸಹ್ಯವಾದರೂ ಸಹಿಸಿಕೊಂಡು ಇಬ್ಬರು ತಿನ್ನುತ್ತಾರೆ. ಅಷ್ಟರಲ್ಲಿ ಮಂದಾಕಿನಿ ಒಮ್ಮೆ ತಮ್ಮ ಮೇಕಪ್ ಸರಿಯಿದೆಯೇ ಎಂದು ತಮ್ಮ ಕಿರುಗನ್ನದಿಯಲ್ಲಿ ಪರೀಕ್ಷಿಸಿ ಕೊಳ್ಳುತ್ತಾಳೆ. ಈ ಎಲ್ಲಾ ತಮಾಷೆಯನ್ನು ವಿದ್ಯಾಕುಮಾರ ದೂರದಿನಲೇ ನೋಡಿ ನಿಟ್ಟುಸಿರು ಬಿಡುತ್ತಾನೆ.

ತಮ್ಮ ಮಾತುಗಳನ್ನು ಅಲ್ಲಿಗೆ ನಿಲ್ಲಿಸಿ ಸಂದರ್ಶನ ಶುರು ಮಾಡಲು ಮೂವರು ಅಣಿಯಾಗುತ್ತಾರೆ. 'ಏನು ಸಂದರ್ಶನನೋ, ಸುಡುಗಾಡು ಅಭ್ಯರ್ಥಿಗಳೋ...! ನಡೀರಿ ಅದೇನು ಸುಡುಗಾಡು ಸಂದರ್ಶನ ಮಾದೆಬಿಡೋಣ' ಎಂದು ಸೀತಾರಾಮು ಸಿಡುಕುತ್ತಾನೆ. ಉದರಪೂರ್ಣ 'ಒಬ್ಬೊಬ್ಬರನ್ನೇ ಒಳಗೆ ಕಳ್ಸೋ ಜಬ್ಬಾರ' ಎಂದು ಆಜ್ಞೆ ಕೊಡುತ್ತಾನೆ. 'ಇರೋದೇ ಒಬ್ಬ ಒಬ್ಬೊಬ್ಬರನ್ನ ಬೇರೆ ಕರಿಬೇಕಂತೆ!' ಎಂದು ಮನಸ್ಸಿನಲ್ಲೇ ಗೊಣಗಿಕೊಂಡು ಜಬ್ಬಾರ ವಿದ್ಯಾಕುಮಾರನ ಹೆಸರು ಕೂಗುತ್ತಾನೆ. ಕಡೆಗೂ ತನ್ನ ಸರತಿ ಬಂತೆಂದು ಖುಷಿಯಿಂದ ಒಳಹೊಗುತ್ತಾನೆ. ಅವನನ್ನು ಕೂರಿಸುವ ಮುಂಚೆಯೇ 'ಹ್ಞೂ ಏನು ನಿನ್ನ ಹೆಸರು? ಏನು ಓದಿದ್ಯ?' ಎಂದು ಸೀತಾರಾಮು ಪ್ರಶ್ನೆ ಮಳೆ ಸುರಿಸುತ್ತಾನೆ. ಉತ್ತರಿಸಲು ಬಾಯಿ ಬಿಡುವ ಹೊತ್ತಿಗೆ ಭರ್ರನೆ ಬಂದ ಮಂತ್ರಿ ಕುಮಾರ ಅವನನ್ನು ತಳ್ಳಿಕೊಂಡು ಒಳನುಗ್ಗುತ್ತಾನೆ. ಜಬ್ಬಾರನು ಹಿಂದೆಯೇ ಓಡಿ ಬರುತ್ತಾನೆ. 'ನಮಸ್ಕಾರ ನಮಸ್ಕಾರ ನಮಸ್ಕಾರ, ನಿಶ್ಚಿಂತೆ ಮಾಡ್ಕೋಬೇಡಿ ನನ್ನ ಪರಿಚಯ ನಾನೇ ಮಾಡ್ಕೊತೀನಿ' ಮಂತ್ರಿಕುಮಾರ ತನ್ನ ಪರಿಚಯ ಶುರು ಮಾಡುತ್ತಾನೆ. 'ನಾನು ಒಳಚರಂಡಿ ಖಾತೆ ಸಚಿವರ ಹತ್ತಿರದ ಸಂಬಂಧಿ, ದೂರದ ತಮ್ಮ ಆಗ್ಬೇಕು.' ಅಷ್ಟು ಪರಿಚಯವಾಗುತ್ತಿದ್ದಂತೆ ಉದರಪೂರ್ಣ ವಿದ್ಯಾಕುಮಾರನನ್ನು 'ಆಮೇಲೆ ಕರಿತೀನಿ ಅಲ್ಲಿವರೆಗೂ ಆಚೆ ಕೂತಿರು'ಎಂದು ವಿದ್ಯಾಕುಮಾರನನ್ನ ಹೊರಗೆ ದೂಡುತ್ತಾನೆ. 'ಮಂತ್ರಿಗಳು ಈ ಕೆಲಸ ನಂಗೆ ಕೊಡಿಸ್ತೀನಿ ಮಾತು ಕೊಟ್ಟವ್ರೆ. ಈಗ ನೋಡಿ ಇನ್ನೇನು ಅವ್ರು ಕರೆ ಮಾಡೆಬಿಡ್ತಾರೆ. ಒಂದು-ಎರಡು-ಮೂರು...' ಅನ್ನುತ್ತಿದ್ದಂತೆ ಕಚೇರಿಯ ದೂರವಾಣಿ ರಿಂಗಣಿಸುತ್ತದೆ. ಉದರಪೂರ್ಣ ಅದಕ್ಕೆ 'ನಮಸ್ಕಾರ, ಅಧ್ಯಕ್ಷ ಉದರಪೂರ್ಣ ಸ್ಪೀಕಿಂಗು' ಎಂದು ತುಸು ಇಂಗ್ಲಿಷ್ ಸೇರಿಸಿಯೇ ಉತ್ತರಿಸುತ್ತಾನೆ. ಅತ್ತ ಕಡೆಯಿಂದ 'ಈಗ ಬಂದಿರೋ ಹುಡುಗ ನಮ್ಮ ಮಂತ್ರಿಗೆ ಹತ್ತಿರದ ಸಂಬಂಧ ದೂರದ ಬ್ರದರ್ರು. ಈ ಕೆಲಸ ಅವನಿಗೆ ಕೊಡಿ. ಕೆಲಸ ಮುಗಿದ ಮೇಲೆ ಬಂದು ಮಂತ್ರಿಗಳನ್ನ ಬಂದು ನೋಡಬೇಕಂತೆ' ಎಂದು ಮಂತ್ರಿಗಳ ಖಾಸಗಿ ಸಹಾಯಕ ತಿಳಿಸುತ್ತಾನೆ. ಸಂದರ್ಶನ ಮಾಡಲು ಕುಳಿತಿದ್ದ ಮೂರು ಜನ ಮಂತ್ರಿಕುಮಾರನ ಕುಶಲ ವಿಚಾರಿಸಿ ಬೀಳ್ಕೊಡುತ್ತಾರೆ. 'ವಿದ್ಯಗಮಾರನ್ನ ಕರೆಯಪ್ಪ' ಎಂದು ಮಂದಾಕಿನಿ ತನ್ನ ಮೆಕಪನ್ನು ಮತ್ತೆ ಸರಿ ಮಾಡಿಕೊಳ್ಳುತ್ತ ಜಬ್ಬಾರನಿಗೆ ಹೇಳುತ್ತಾಳೆ. 'ಅಯ್ಯೋ ಅವ್ನು ಗಮಾರ ಅಲ್ಲ ಕುಮಾರ ಕಣ್ರೀ' ಎಂದು ಉದರಪೂರ್ಣ ಮಂದಾಕಿನಿಯನ್ನ ತಿದ್ದುತ್ತಾರೆ. 'ಗಮಾರನೋ ಕುಮಾರನೋ ಕರೀರಿ ಅವನ್ನ' ಎಂದು ಸೀತಾರಾಮು ಮತ್ತೆ ಸಿಡುಕುತ್ತಾನೆ.

ಈ ಗಲಾಟೆಯ ಮಧ್ಯದಲ್ಲಿ ಕ್ಯಾಶ್ ಕುಮಾರಿ ಕಂತೆ ನೋಟಿನಲ್ಲಿ ಗಾಳಿ ಬೀಸಿಕೊಳ್ಳುತ್ತ ವಿದ್ಯಾಕುಮಾರನ ಪಕ್ಕ ಬಂದು ಕೂರುತ್ತಾಳೆ. ವಿದ್ಯಾಕುಮಾರನನ್ನು ಕರೆಯಲು ಬಂದ ಜಬ್ಬಾರನಿಗೆ ಹಾಗೆಯೇ ಒಂದು ನೂರರ ನೋಟನ್ನು ಎಸೆಯುತ್ತಾಳೆ ಅದನ್ನು ಆಯ್ದುಕೊಂಡ ಜಬ್ಬಾರ ಒಳಗೆ ಹೋಗಿ 'ಸಾರ್, ಆ ವಿದ್ಯಾಕುಮಾರ ಎಲ್ಲೋ  ಹೋಗವನೆ ಇನ್ನೊಬ್ರು ಇದ್ದಾರೆ ಕಳಿಸ್ತೀನಿ' ಎಂದು ಕ್ಯಾಶ್ ಕುಮಾರಿಯನ್ನ ಒಳ ಕಳುಹಿಸಿ, ಅಲ್ಲೇ ಇದ್ದರು ಇಲ್ಲವಾಗಿದ್ದ ವಿದ್ಯಕುಮಾರನನ್ನ ಸಮಾಧಾನ ಪಡಿಸುತ್ತಾನೆ. ಇತ್ತ ಒಳ ಬಂದು ಕುಳಿತ ಕ್ಯಾಶ್ ಕುಮಾರಿಯನ್ನ ಮೂರು ಜನ ಸಂದರ್ಶನಕಾರರು ಪ್ರಶ್ನಿಸಲು ಮುಂದಾಗುತ್ತಾರೆ. 'ನಾನು ಕ್ಯಾಶ್ ಕುಮಾರಿ, ನಮ್ಮ ಅಪ್ಪನ ಹತ್ರ ತುಂಬಾ ದುಡ್ಡಿದೆ. ಮನೆನಲ್ಲಿ ತುಂಬಾ ಬೇಜಾರು ಹೊಡಿತ ಇತ್ತು, ಕಾಲ ಕಳ್ಯೋಕೆ ಏನಾದ್ರೂ ಮಾಡಬೇಕಲ್ಲ ಅದಕ್ಕೆ ಇಲ್ಲಿ ಕೆಲ್ಸಕ್ಕೆ ಸೇರೋಣ ಅಂತ ಬಂದೆ' ಎಂದು ತನ್ನ ಪ್ರಶ್ನೆಗಳು ಬರುವ ಪರಿಚೆಯ ಮಾಡಿಕೊಡುತ್ತಾಳೆ. ಮೇಜಿನ ಕೆಳಗೆ ಕೈ ಆಡಿಸಲು ಪ್ರಯತ್ನಿಸಿ, 'ಅಯ್ಯೋ ಇದೇನ್ರಿ ಈ ಮೇಜಿನ ಕೆಳಗೆ ಜಾಗನೇ ಇಲ್ಲ. ನಿಮ್ಮ ಕಛೇರಿಲಿ ಮಜಿನ ಕೆಳಗಿನ ವ್ಯವಹಾರ ನೆಡ್ಯೋದೆ ಇಲ್ವಾ?!' ಎಂದು ಕ್ಯಾಶ್ ಕುಮಾರಿ ಆಶ್ಚರ್ಯದಿಂದ ಉದ್ಗರಿಸುತ್ತಾಳೆ. ಅದಕ್ಕೆ ಉದರಪೂರ್ಣ 'ಛೆ ಛೆ ಹಾಗೇನಿಲ್ಲ. ಈಗ ಲೋಕಾಯುಕ್ತರ ಕಾಟ ಜಾಸ್ತಿ ಆಗಿದೆ ನೋಡಿ ಅದಕ್ಕೆ ಎಲ್ಲಾ ಈ ಥರದ ಮೆಜನ್ನೇ ಹಾಕ್ಸಿದ್ದಿವಿ. ಆ ವಿಚಾರ ಆದ್ರೆ ಕೆಳಗೆ ಚಹಾ ಅಂಗಡಿಯಲ್ಲಿ ಹೋಗಿ ತಲುಪಿಸಿ ಬಿಡಿ. ನಾವು ನಂತರ ತಗೊತೀವಿ.' ಎಂದು ತಮ್ಮ ಬುದ್ಧಿವಂತಿಕೆಯ ಹೊಸ ಯೋಜನಗಳನ್ನು ಹೇಳುತ್ತಾರೆ. ಅಲ್ಲಿಯವರೆಗೂ ಅವರ ಸೀರೆ, ಒಡವೆಯ ಮೇಲೆ ಕಣ್ಣು ಇಟ್ಟಿದ್ದ ಮಂದಾಕಿನಿ ಕಡೆಗೂ ಬಾಯಿ ಬಿಟ್ಟು ಕೇಳಿಯೇ ಬಿಡುತ್ತಾಳೆ, 'ರೀ ರೀ, ಈ ಸೀರೆ ಎಲ್ಲಿ ತಗೊಂಡ್ರಿ? ಹೊಸ ಥರ ಇದೇ!'. 'ಒಹ್! ಇದು ಹೊಸ ವಿನ್ಯಾಸ. _________ ಸೀರೆ ಅಂತ' ಎಂದು ಸೌಂದರ್ಯ ವರ್ಧಕ ವಸ್ತುಗಳ ಬಗ್ಗೆ ಮಂದಾಕಿನಿ ಮತ್ತು ಕ್ಯಾಶ್ ಕುಮಾರಿ ಮಾತಿಗಿಳಿಯುತ್ತಾರೆ. ಇದರಿಂದ ರೇಗಿ ಹೋದ ಸೀತಾರಾಮು 'ಅದೇನು ಹಾಳು ಸುಡುಗಾಡು ಎಲ್ಲಿ ಹೋದರು ಇದೇ ವಿಷ್ಯ ಮಾತಾಡ್ತೀರಲ್ಲ್ರಿ. ಥೂ ಹಾಳು ಸುಡುಗಾಡು' ಮಂದಾಕಿನಿಯ ಮೇಲೆ ಸಿಡುಕುತ್ತಾರೆ. 'ಸರಿ ನಾನು ಕೆಳಗಿನ ಅಂಗಡಿಯಲ್ಲಿ ನಿಮ್ಮ ದಕ್ಷಿಣೆ ತಲುಪಿಸಿ ಹೋಗ್ತೀನಿ' ಎಂದು ಮುನಿಸಿಕೊಂಡೆ ಕ್ಯಾಶ್ ಕುಮಾರಿ ಹೊರಡುತ್ತಾಳೆ.

ಈಗ ವಿದ್ಯಾಕುಮಾರನ ಸರತಿ. ಯಾರು ಅಡ್ಡ ಬರುತ್ತಿಲ್ಲವೆಂದು ಖಚಿತ ಪಡಿಸಿಕೊಂಡು, ಮತ್ತೊಮ್ಮೆ ಅಕ್ಕ ಪಕ್ಕ ನೋಡಿ, ವಿದ್ಯಾಕುಮಾರ ಒಳಹೊಗುತ್ತಾನೆ. 'ಸಂದರ್ಶನ ಶುರು ಮಾಡೋಣವೆ' ಎಂದು ಉದರಪೂರ್ಣ, ಮಂದಾಕಿನಿ ಮತ್ತು ಸೀತಾರಾಮು ಅವರಿಗೆ ಹೇಳುತ್ತಾರೆ. ಅಲ್ಲಿಯವರೆಗಿನ ಎಲ್ಲಾ ಕಥೆಗಳನ್ನು ಎದುರೆ ನೋಡಿದ ವಿದ್ಯಾಕುಮಾರ, 'ನೋಡಿ ಸಾರ್, ಸರ್ಕಾರಿ ಕಚೇರಿ ಕತೆಯೆಲ್ಲ ಹಿಂಗೆನೆ ಅಂತ ಗೊತ್ತು ಬಿಡಿ ಸಾರ್. ಇಲ್ಲಿ ಕೆಲಸ ಪಡ್ಯೋಕೆ ಒಂದು ದುಡ್ಡು ಬೇಕು ಇಲ್ಲ ಅಂದ್ರೆ ಪ್ರಭಾವಿ ವ್ಯಕ್ತಿಯ ಶಿಫಾರಸ್ಸು ಬೇಕು. ಅದೆಲ್ಲ ಗೊತ್ತಿದ್ರು ಇಲ್ಲಿ ಯಾಕೆ ಬಂದಿದ್ದೀನಿ ಗೊತ್ತ?!' ಎಂದು ಪ್ರಶ್ನೆ ಇಟ್ಟಾಗ ಮೂವರು ಸಂದರ್ಶಕರು ತಬ್ಬಿಬ್ಬಾಗಿ ನೋಡುತ್ತಾರೆ. ' ಇದು ನನ್ನ ನೂರೊಂದನೆ ಸಂದರ್ಶನ. ಇದು ಮುಗಿಸಿ ನಾನು ಗಿನ್ನಿಸ್ ದಾಖಲೆ ಮಾಡ್ತೀನಿ. ಅದರಿಂದ ಬಾರೋ ದುಡ್ಡಲ್ಲಿ ಬಡ್ಡಿ ವ್ಯಾಪಾರ ಮಾಡ್ಕೊಂಡು ನೆಮ್ಮದಿಯಾಗಿರ್ತೀನಿ. ಬರ್ಲಾ. ಹಾಂ, ನಿಮ್ಮ ಮಕ್ಕಳಿಗೆ ಕೆಲ್ಸಕ್ಕೆ ಸೇರ್ಸೋಕೆ ದುಡ್ಡು ಬೇಕಿದ್ರೆ ಬನ್ನಿ ಸ್ವಲ್ಪ ರಿಯಾಯಿತಿ ಮೇಲೆ ಸಾಲ ಕೊಡ್ತೀನಿ' ಎಂದು ಹೇಳಿ ಹೊರಟು ಹೋಗುತ್ತಾನೆ. ಮೂವರು ಸಂದರ್ಶಕರು ಇಬ್ಬರ ಮುಖವನ್ನೊಬ್ಬರು ನೋಡಿಕೊಳ್ಳುತ್ತಾರೆ!!.

ಭಾನುವಾರ, ಆಗಸ್ಟ್ 1, 2010

ಸ್ನೇಹ.....ಗೆಳೆತನ.....ದೋಸ್ತಿ....

ಅಂಬೆಗಾಲಿಡುತ್ತ ಆಡುವಾಗ ಸಿಗುವ ಪಕ್ಕ ಮನೆಯ ಗೆಳೆಯರಿಂದ ಕೈಗೊಂದು ಕೋಲು ಬಂದು ಉದ್ಯಾನದಲ್ಲಿ ಓಡಾಡುವವರೆಗೂ ಸ್ನೇಹಿತರ ಬಳಗ ಬೆಳೆಯುತ್ತಲೇ ಹೋಗುತ್ತೆ. ಶಾಲೆಯ ಬೆಂಚಿನಲ್ಲಿ ಪಕ್ಕ ಕೂರುವ ಮೊದಲನೆ ಗೆಳೆಯನೆ ಇರಬಹುದು, ಇಲ್ಲವೇ ಎಂದೋ ಒಮ್ಮೆ ಮಳೆಯೆಂದು ಸೂರಿನಡಿ ನಿಂತಿದ್ದಾಗೆ ಕೊಡೆ ಹಿಡಿದು ಅನಿರೀಕ್ಷಿತವಾಗಿ ಬರುವ ಸ್ನೇಹಿತನೆ ಇರಬಹುದು, ಒಮ್ಮೆ ಭಾವನೆಗಳ ಸ್ಪಂದನ ಹೊಂದಿಕೊಂಡರೆ ಆಯಿತು ಮೊದಲ ನೋಟದ ಪ್ರೇಮದಂತೆ ಸ್ನೇಹ ಬೆಳೆದು ಹೋಗುವುದು. ಪ್ರತಿಯೊಬ್ಬರೂ ತಾವು ಹುಟ್ಟಿನಿಂದ ಬೆಳೆದು ಹೋದಂತೆ ಅವರವರ ಸ್ನೇಹಿತರ ಬಳಗ ಹೆಚ್ಚುತ ಹೋಗುತ್ತದೆ. ಹಾಂ, ಅಣ್ಣ-ತಮ್ಮ, ಅಪ್ಪ-ಅಮ್ಮ, ಮಾವ-ಅತ್ತೆ, ಹೀಗೆ ಇನ್ನಿತರ ರಕ್ತಸಂಬಂಧಗಳಿಗೆ ಇರೋ ನಿರ್ದಿಷ್ಟ ವ್ಯಾಖ್ಯಾನ ಈ ಸ್ನೇಹ ಅನ್ನೋ ಸಂಬಂಧಕ್ಕೆ ಇಲ್ಲ. ಹಾಗೆ ಅರ್ಥ ಹುಡುಕುತ್ತ ಹೋದರೆ ನಾವು ಅದರ ಎಲ್ಲಾ ಭಾವರೂಪಗಳನ್ನು ವರ್ಣಿಸುತ್ತೇವೆ ಹೊರತು ಒಂದು ಖಂಡಿತವಾದ ಅರ್ಥ ಕೊಡುವುದಕ್ಕೆ ಕಷ್ಟವಾಗುತ್ತದೆ. ನಮ್ಮ ಸಂಬಧಿಗಳಲ್ಲಿ, ನೆಂಟರಲ್ಲಿ ಎಷ್ಟೇ ಹೊಂದಿಕೊಂಡಿದ್ದರು ಸ್ನೇಹಿತರ ಬಳಿ ಸಿಗುವ ಸಾಂತ್ವಾನ, ಆತ್ಮೀಯತೆ, ಸಲುಗೆ, ರಕ್ತ ಸಂಬಧಿಗಳಿಂದ ಸಿಗುವುದಿಲ್ಲ. ನಾವು ಎಷ್ಟೋ ಬಾರಿ ನಮ್ಮ ತಂದೆ-ತಾಯಿಯ ಬಳಿ ಹೇಳಿಕೊಳ್ಳಲಾಗದ ವಿಷಯಗಳನ್ನು ಸ್ನೇಹಿತರ ಬಳಿ ಹೇಳಿಕೊಂಡು ಚರ್ಚಿಸುತ್ತೇವೆ, ಸಲಹೆ-ಉತ್ತರ ಕಂಡುಕೊಳ್ಳುತೇವೆ. ಜೀವನ ನಿರ್ಧಾರಗಳಲ್ಲಿ ಹೆಜ್ಜೆ ತಪ್ಪಿ ಹೋದರೆ ಕೈ ಹಿಡಿದು ಎತ್ತುವರು ಕೂಡ ಈ ಸ್ನೇಹಿತರೆ. ಈ ಸ್ನೇಹಿತರ ಪ್ರಭಾವ ಜೀವನವನ್ನೇ ಬದಲಿಸುವಷ್ಟು ಶಕ್ತಿಯುತವಾಗಿರುತ್ತದೆ. ನಮಗೆ ಸಿಗುವ ಅಥವಾ ನಾವೇ ಜೀವನದಲ್ಲಿ ಆಯ್ದುಕೊಳ್ಳುವ ಸ್ನೇಹಿತರ ಮಹತ್ವ ಅತಿ ಹೆಚ್ಚು. ಸ್ನೇಹಿತರಲ್ಲಿ ಕೆಟ್ಟವರು-ಒಳ್ಳೆಯವರಿರಬಹುದೇ ಹೊರತು ಸ್ನೇಹ ಮಾತ್ರ ಎಂದಿಗೂ ಯಾವುದೇ ಕಳಂಕ ಹತ್ತದ, ಹತ್ತಿ ಕೊಳ್ಳಲು ಸಾಧ್ಯವಿಲ್ಲದ ನಿರ್ಮಲ ಭಾವ. ಮನೆಗಳಲ್ಲಿ ನಡೆಯುವ ಶುಭ ಕಾರ್ಯಗಳಿಗೆ ಬಂದು ಹೋಗುವ ಬಂಧುಗಳು ಮತ್ತೆ ಕಾಣಿಸುವುದು ಮುಂದಿನ ಶುಭ ಕಾರ್ಯಕ್ಕೆ ಕರೆದಾಗ ಮಾತ್ರ ಆದರೆ ಸ್ನೇಹಿತರು ಅದರ ಮುಂಚಿಂದಲೂ, ಮುಗಿದ ಮೇಲೂ ಜೊತೆಯಲ್ಲೇ ಇರುತ್ತಾರೆ.


ಸ್ನೇಹಿತರೊಂದಿಗೆ ಸೇರಿ ಹರಟುವ ಆ ಖುಷಿಯೇ ಬೇರೆ. ಅಲ್ಲಿ ಸಿಗುವ ಆ ಸಲುಗೆ, ಆ ಮುಗ್ಧ ಮಾತುಗಳು, ಅನುಭವಸಿದವರೇ ಪುಣ್ಯವಂತರು. ಹೊಸದಾಗಿ ಪರಿಚೆಯವಾದಾಗ 'ಬನ್ನಿ... ಹೋಗಿ' ಎನ್ನುವ ಮಾತುಗಳು ಯಾವಾಗ 'ಲೋ...ನಿಮ್ಮಜ್ಜಿ...' ಎಂದು ಎಷ್ಟು ಸಲೀಸಾಗಿ ಬದಲಾಗುತ್ತವೋ ತಿಳಿಯುವುದೇ ಇಲ್ಲ. ತಂದೆ-ತಾಯಿ ಬಂಧುಗಳು ಸೇರಿ ನಮಗೆ ಅರಿವು ಬರುವ ಮುಂಚೆಯೇ ಒಂದು ಹೆಸರನ್ನಿಟ್ಟಿರುತ್ತರಾದರು, ಬೆಳೆಯುತ್ತ ನಮ್ಮ ವಿಶೇಷ ಲಕ್ಷಣ-ಸ್ವಭಾವವನ್ನು ಗುರುತಿಸಿ ನಮಗೆ ಮತ್ತೊಂದು ಅಡ್ಡ ಹೆಸರಿಡುವ ಸಂಸ್ಕೃತಿ ಸ್ನೇಹದಲ್ಲಿ ಮಾತ್ರವೇ ಕಾಣಸಿಗುತ್ತೆ. ಅರಿಯದ ಚಿಕ್ಕ ವಯಸ್ಸಿನಲ್ಲಿನ ಸ್ನೇಹವೇ ಇರಲಿ, ಯೌವನದಲ್ಲಿ 'ಸಕ್ಕತ್ತಾಗವ್ಳೆ ನೋಡೋ ಮಗ...' ಎಂದು ಚಂದ ಹುಡುಗಿಯನ್ನು ಟೀಕಿಸುವ ತುಂಟು ಸ್ನೇಹವೇ ಆಗಲಿ, ಇಲ್ಲವೇ ಕಾಲೇಜಿನಲ್ಲಿ ಮಜಾ ಮಾಡಿ ಪರೀಕ್ಷೆಯ ಹಿಂದಿನ ದಿನದ ರಾತ್ರಿ ಕೂಡಿ ಓದುವ ಜೊತೆಯೇ ಇರಲಿ ಎಲ್ಲಿಯೂ ಸ್ನೇಹದಲ್ಲಿ ಸಣ್ಣ ಕಪ್ಪು ಚುಕ್ಕೆಯ ಕಳಂಕವು ಕಾಣುವುದಿಲ್ಲ. ಕೈಲ್ಲೊಂದು ನೌಕರಿ ಹಿಡಿದು ಮನೆಯವರು ಮದುವೆ ಗೊತ್ತು ಮಾಡಿ, ಹೊಸ ಸಂಗಾತಿಯಾಗುವಳ ಜೊತೆ ಹರಟುವಾಗ ಕೂಡ ರೇಗಿಸುವ ಹಕ್ಕು ಕೇವಲ ಸ್ನೇಹಿತರಿಗೆ ಮಾತ್ರ ಮೀಸಲಿರುತ್ತದೆ. ನಂತರ ಮದುವೆಯಲ್ಲೂ ಸಹ ನೆಂಟರ ಜೊತೆಗಿನ ಚಿತ್ರಗಳಿಗಿಂತ ಹಳೆಯ ಗೆಳೆಯರೊಂದಿಗೆ ಸೇರಿ ತಗೆಸಿಕೊಂಡ ಚಿತ್ರಗಳೇ ಹೆಚ್ಚು ನೆನಪಿನಲ್ಲಿ ಉಳಿಯುತ್ತವೆ ಎನ್ನುವ ಮಾತು ತಗೆದು ಹಾಕುವಂತಿಲ್ಲ. ಎಂದೋ ಒಮ್ಮೆ ಕುಳಿತಿದ್ದಾಗ ಹಳೆಯ ಚಿತ್ರಗಳಲ್ಲಿ ಸ್ನೇಹಿತರ ಮುಖ ಕಂಡಾಗ ಆಗುವ ನೆನಪುಗಳು ಆ ಸಂತೋಷ ವರ್ಣನಾತೀತ.


ತಂದೆ-ತಾಯಿಯ ವಾತ್ಸಲ್ಯ, ಅಣ್ಣ-ತಮ್ಮರ ಆತ್ಮೀಯತೆ, ಸಂಗಾತಿಯ ಸಲುಗೆ, ಗುರುವಿನ ನಿರ್ದೇಶನ ಎಲ್ಲವು ಸ್ನೇಹವೊಂದರಲ್ಲೇ ಅಡಕವಾಗಿರುವುದು ನಿಜಕ್ಕೂ ಆಶ್ಚರ್ಯವೇ!. ಸ್ನೇಹದ ಬಗ್ಗೆ ಹೀಗೆ ಹೇಳುತ್ತಾ ಹೋದರೆ ಪುಟಗಳೇ ಸಾಲದೇ ತುಂಬಿ ಹೋಗುತ್ತವೆ. ನೀವು ಒಮ್ಮೆಯಾದರು ನಿಮ್ಮ ಬಾಲ್ಯದಿಂದ ಇಲ್ಲಿಯವರೆಗಿನ ನಿಮ್ಮ ಸ್ನೇಹಿತರನ್ನು ನೆನಪಿಸಿಕೊಂಡು ಅವರನ್ನು ಭೇಟಿ ಮಾಡಿ, ಸಾಧ್ಯವಾಗದಿದ್ದರೆ ಒಂದು ಕರೆಯನ್ನಾದರೂ ಮಾಡಿ. ಅವರೊಂದಿಗೆ ಮತ್ತೊಮ್ಮೆ ಮಾತಾಡಿ. ಅದು ನಿಮ್ಮಲ್ಲಿ ಗೊತ್ತಿಲ್ಲದೆ ಒಂದು ಹೊಸ ಸ್ಪ್ಪೋರ್ತಿ ತಾನಾಗೆ ಅರಳುವಂತೆ ಮಾಡುತ್ತದೆ.

ಹಾಗೆ ನನ್ನ ಕವನಗಳ ಪುಟದಿಂದ ಒಂದು ಕವನ,
+++++++++++++++++++++++++
ಈ ಸುಂದರ ಇಳೆ ಮೇಲೆ
ನೀ ಬರುವ ಮುಂಚಿಂದಲೇ
ಅಂಟಿಕೊಂಡೇ ಬರುವುದು
ಕರುಳ ಬಳ್ಳಿಯ ಕಳೆಯದ ಸ್ನೇಹ

ಅಂಬೆಗಾಲಿನಿಂದ ಮೇಲೆದ್ದು
ತನ್ನ ಕಾಲಲ್ಲಿ ನೆದೆಯೋತನಕ
ಕೈ ಹಿಡಿದು ನಡೆಸಿದ್ದು
ಜನುಮದಾತನ ಕೈಗಳ ಬೆಚ್ಚನೆಯ ಸ್ನೇಹ


ಕುಣಿಕುಣಿದು ನಲಿವಾಗ
ಆಟದಲಿ ಜೊತೆಯಾಗಿ
ಖುಷಿಯನ್ನು ಹಂಚಿದ್ದು
ಒಡಹುಟ್ಟಿದವರೊಡೊನಾಟದ ನಲುಮೆಯ ಸ್ನೇಹ


ಸರಸತಿಯ ತವರಿನಲ್ಲಿ
ಕೈಹಿಡಿದು ತಿದ್ದಿಸಿ
ವ್ಯಕ್ತಿತ್ವ ರೂಪಿಸಿ ಬೆಳೆಸಿದ್ದು
ಕಳಿಸಿದ ಗುರುಗಳ ಬಾಂಧವ್ಯದ ಸ್ನೇಹ


ಸೋತಾಗ ಸಂತೈಸಿ
ಗೆಲುವನ್ನು ಉಲ್ಬಣಿಸಿ
ಸದಾಕಾಲ ಜೊತೆಗಿರುವ
ಜೊತೆ ಬೆಳೆದು ಬಾಳಿದ ಗೆಳೆಯೆರ ಸ್ನೇಹ


ಎಲ್ಹೆಜ್ಜೆ ಜೊತೆ ನೆಡೆದು
ಜೀವನವ ಹಂಚಿಕೊಂಡು
ಕಡೆತನಕ ಕೈಹಿಡಿದ
ಮನೆ ತುಂಬಿ ಮನ ಬೆಳಗಿದ ಮಡದಿಯ ಸ್ನೇಹ


ಜನುಮದಿಂದ ಕೊನೆವರೆಗೆ
ಉಸಿರಿತ್ತು ಕಾಪಾಡಿ
ಪೋಷಿಸಲು ನೆಲೆ ಕೊಟ್ಟು
ಪ್ರಕೃತಿಯು ಹಂಚಿದ ಕರುಣೆಯ ಸ್ನೇಹ


ಸ್ನೇಹದಿಂದಲೇ ಆರಂಭವಾಗಿ
ಸ್ನೇಹದಲೇ ಕೊನೆಗೊಳ್ಳುವಾಗ
ಕೊಡುತಲಿರು ಎಡೆಬಿಡದೆ
ಹಂಚಿದಕ್ಕಿಂತ ಹೆಚ್ಚಾಗುವ ಆಸ್ತಿ ಈ ಸ್ನೇಹ
+++++++++++++++++++++++++


ಇಲ್ಲಿಯವರೆಗೆ ನನ್ನ ಬಾಳ ಪುಟದಲ್ಲಿ ತಮ್ಮ ಹಸ್ತಾಕ್ಷರಗಳನ್ನು ಬರೆದ ಎಲ್ಲಾ ಸ್ನೇಹಿತರಿಗೂ ಧನ್ಯವಾದಗಳು.

ಭಾನುವಾರ, ಜುಲೈ 18, 2010

ಹಣೆಬರಹ!!

ನಿನ್ನೆ ಸಂಜೆ ಅಮ್ಮನ ಸ್ನೇಹಿತೆಯೊಬ್ಬರು ಮನೆಗೆ ಬಂದಿದ್ದರು. ಅವರ ಮಗ ಶಂಕರ  ಈ ವರ್ಷ ತನ್ನ ತಾಂತ್ರಿಕ ವಿದ್ಯೆ ಮುಗಿಸಿದ್ದನಂತೆ. ಅಯ್ಯೋ, ತಾಂತ್ರಿಕ ಅಂದ್ರೆ ತಂತ್ರ-ಮಂತ್ರ ಮಾಡೋ ವಿದ್ಯೆ ಅಲ್ಲ! ಇಂಜಿನಿಯರಿಂಗ್ ಅಂತಾರಲ್ಲ ಅದು. ಇದು ಒಂಥರಾ ತಂತ್ರ ಮಂತ್ರ ಮಾಡೋ ವಿದ್ಯೆನೆ ಬಿಡಿ. ಅವನಿಗೆ ಇನ್ನು ಕೆಲಸದ ಬೇಟೆ ಶುರು ಅಲ್ವ, ಅದಕ್ಕೆ ನನಗೆ ಪರಿಚೆಯ ಮಾಡಿಸಿ ನನಗೆ ಗೊತ್ತಿದ್ದಲ್ಲಿ ಕೆಲಸವಿದ್ದರೆ ತಿಳಿಸೋಕೆ ಕೇಳಿದ್ರು. ಹುಡುಗನು ಚೂಟಿಯೇ, ಅವನಿಗೂ ನಮಗೆ ಹಿಡಿದಿರುವ ಹಾಗೆ ಖಾಸಿಗಿ ಕಂಪನಿಯ, ಹೆಚ್ಚಿನ ಸಂಬಳದ ವ್ಯಾಮೋಹವೋ ಏನೋ, 'ನನಗೆ ಟೀಚಿಂಗ್ ಮಾಡೋಕೆ ಇಷ್ಟ ಇಲ್ಲ. ಕಂಪಿನಿ ಕಡೆನೇ ಕೆಲಸ ಮಾಡಬೇಕು' ಅಂತ ತನ್ನ ಆಸೆಯನ್ನ ನನ್ನ ಮುಂದಿಟ್ಟ. ನಾವು ಆಗ ಒಂದು ವರ್ಷ ಕೆಲಸಕ್ಕಾಗಿ ಅಲೆದು ಪಟ್ಟ ಪಾಡು ಹಾಗೆ ಕಣ್ಣಿನ ಪರದೆಯ ಮೇಲೆ ಒಂದು ಚಿತ್ರವಾಗಿ ಬಂದು ಹೋಯಿತು. ಆ ಅನುಭವವನ್ನು ಶಂಕರನೊಂದಿಗೆ ಹಂಚಿಕೊಂಡೆ. ಅವನು ಕೂಡ ಆಗಲೇ ಕೆಲವೊಂದು ಕಡೆ ಅಲೆದು ಬಂದಿದ್ದ. ಅವನಿಗೆ ಬೆಂಗಳೂರಿನಲ್ಲೇ ಇದ್ದು ಕೆಲಸ ಹುಡುಕಲು ಪ್ರಯತ್ನಿಸು ಆಗ ಸುಲಭ ಆಗುತ್ತೆ ಅಂತ ಇನ್ನೊಂದು ಬುದ್ಧಿ ಮಾತು ಸೇರಿಸಿ ಹೇಳಿದೆ. ಚಹಾ ಮುಗಿಸಿ ಅವರು ಹೊರಡಲು ನಿಂತರು. ಆಗ ಕಡೆಯ ಮಾತುಗಳೆಂಬಂತೆ 'ಏನೋ ಇವನ್ನ ಇಂಜಿನಿಯರ್ ಓದಿಸಬೇಕು ಅಂತ ನಂಗೆ ಆಸೆಯಿತ್ತು, ಓದಿಸ್ದೆ. ಇನ್ನು ಮುಂದಕ್ಕೆ ಏನೋ ಅವನ ಹಣೆಬರಹ ಇದ್ದ ಹಾಗೆ ಆಗುತ್ತೆ' ಅನ್ನುವ ಮಾತುಗಳ ಶಂಕರನ ಅಮ್ಮನಿಂದ ಹೊರಬಂತು. ಆ ಮಾತು ಕ್ಷಣಕಾಲ ನನ್ನ ದಂಗು ಬಡಿಸ್ತು. ಅಲ್ಲ, ಮಗ ಏನು ಓದಬೇಕು ಅಂತ ನಿರ್ಧಾರ ಮಾಡಿದವರು ಇವರು, ಓದಿಸಿದವರು ಅವರು, ಓದಿದ್ದು ಇವನು, ಇಷ್ಟೆಲ್ಲಾ ಇವರೇ ಮಾಡ್ಕೊಂಡು ಮುಂದಿದ್ದು ಮಾತ್ರ ಹಣೆಬರಹದ ಮೇಲೆ ಹಾಕ್ತರಲ್ಲ ಇದು ನ್ಯಾಯನ?! ಆ ಹಣೆಬರಹ ಅನ್ನೋದೇನಾದ್ರೂ ಇದನ್ನೆಲ್ಲಾ ಕೇಳಿಸ್ಕೊಂಡ್ರೆ ಇವರ ಮೇಲೆ ಮಾನ ನಷ್ಟ ಮೊಕ್ಕದ್ದಮೆ ಹಾಕೋದ್ರಲ್ಲಿ ಅನುಮಾನಾನೆ ಇಲ್ಲ.

ನಮ್ಮ ಜನಗಳೇ ಹೀಗೆ ನೋಡಿ, ಮಗ ಯಾರನ್ನೋ ಪ್ರೀತಿ ಮಾಡಿದ್ರೆ, ಅಥವಾ ರಸ್ತೆಯಲ್ಲಿ ಯಾರೋ ವಾಹನದ ಅಪಘಾತ ಆಗಿ ರಕ್ತ ಹರಿದ್ರೆ, ಅವರ ಮೇಲೆ ಹಿಗ್ಗ ಮುಗ್ಗ ಮಾತುಗಳು, ಏಟುಗಳು ಧಾರಾಳವಾಗಿಯೇ ಸುರಿಸ್ತಾರೆ. ಅದೇ, ತಾವೇ ತಮ್ಮ ಮಗನಿಗೆ ಒಂದು ಗಯ್ಯಾಳಿಯಾದ ಹುಡುಗಿಯನ್ನು ತಂದು ಮದುವೆ ಮಾಡಿದ್ರೆ 'ಅವನ ಹಣೆಬರಹದಲ್ಲಿ ಅಂತ ಹುಡುಗಿ ಸಿಗಬೇಕು ಅಂತ ಇತ್ತು ಹಾಗೆ ಆಗಿದೆ ಅಷ್ಟೇ' ಅಂತಾರೆ!, ಆ ಅಪಘಾತದಲ್ಲಿ ತರಚಿದ ಗಾಯ ಸಹ ಆಗದೆ ಪಾರಾದರೆ 'ಹಣೆಬರಹ ಚನ್ನಾಗಿತ್ತು ಅದಕ್ಕೆ ಏನೋ ಆಗದೆ ಪಾರಾದ' ಅಂತ ಸುಮ್ಮನಾಗುತ್ತಾರೆ!. ಈ ಎರಡು ನಿದರ್ಶನದಲ್ಲಿ ಘಟನೆಗಳು ಒಂದೇ ಆದರೆ ಪ್ರತಿಕ್ರಿಯೆಗಳು ಮಾತ್ರ ಬೇರೆ!!. ಇದನ್ನ ಗಮನಿಸಿದರೆ, 'ಹಣೆಬರಹ'ನ ತಾವು ಮಾಡಿದ ತಪ್ಪುಗಳನ್ನು ಹೊರಿಸಿ ಕೈ ತೊಳೆದುಕೊಳ್ಳುವುದಕ್ಕೆ, ಇಲ್ಲವೇ ತಮ್ಮ ಅಸಹಾಯಕತೆಗೆ ಒಂದು ಕಾರಣದಂತೆ ಉಪಯೋಗಿಸ್ಕೊತಾಯಿರೋದು ಸ್ಪಷ್ಟವಾಗಿ ಕಾಣುತ್ತೆ. ಪಾಪ, ಈ ಹಣೆಬರಹದ ಹಣೆಬರಹ ಹೀಗೆ ಯಾಕಿದ್ಯೋ! 

ಆ ದೇವರು ಹಣೆಬರಹ ಅಂತ ಎಲ್ಲರ ಹಣೆನಲ್ಲಿ ಬರೆದಿದ್ದಾನೆ ಅಂತಾನೆ ಇಟ್ಟುಕೊಳ್ಳೋಣ. ಹಾಗಿದ್ದ ಮೇಲೆ ನಾವು ಆ ನಿಯಮಗಳ ಅನುಸಾರವಾಗಿ ನಡೆಯುವ ಗೊಂಬೆಗಳು ಅಲ್ಲವಾ? ಹಾಗಿದ್ದ ಮೇಲೆ ನಮ್ಮಲ್ಲಿ ಆಲೋಚನಾ ಸಾಮರ್ಥ್ಯ, ಪ್ರತಿಕ್ರೆಯಿಸುವ ಮನೋಭಾವ, ಸುಖ-ದುಖ, ಪ್ರೀತಿಸುವ ಭಾವನೆಗಳು ಇಲ್ಲವೆಂದಾಗುವುದಿಲ್ಲವ? ಆ ನಿಯಮಗಳ ಪ್ರಕಾರ ನೆಡೆದು ಗುರಿ ಮುಟ್ಟುವುದೊಂದೇ ನಮ್ಮ ಕೆಲಸವಾಗಬೇಕಿತ್ತು. ಆದರೆ ನಾವು ಹಾಗೆ ಬದುಕುತಿದ್ದೀವ?. ಇಲ್ಲವಲ್ಲ, ನಾವು ನಮ್ಮ ಕೆಲಸಗಳ ಬಗ್ಗೆ ಯೋಚಿಸುತ್ತೇವೆ, ಸುಖ-ದುಖ, ಪ್ರೇಮದ ಭಾವಗಳು ನಮ್ಮಲ್ಲಿ ಅರಳುತ್ತವೆ, ತಪ್ಪುಗಳಿದ್ದರೆ ತಿದ್ದಿಕೊಳ್ಳಲು ಬುದ್ಧಿ ಉಪಯೋಗಿಸುತ್ತೇವೆ. ಅಂದ ಮೇಲೆ, ನಮ್ಮ ಮೇಲೆ ಯಾವುದೇ ನಿಯಮಗಳನ್ನ ಹೇರದೆ ನಮ್ಮ  ನಿರ್ಧಾರಗಳನ್ನು ಆಲೋಚಿಸುವ, ಅನುಭವಿಸುವ, ಅರಿತುಕೊಳ್ಳುವ ಶಕ್ತಿಯನ್ನು ನಮಗೆ ದೇವರು ಕೊಟ್ಟಿದ್ದಾನೆಂದು ಆಯಿತಲ್ಲ. ಹಾಗಿದ್ದ ಮೇಲೂ ನಮ್ಮ ಜನ 'ಎಲ್ಲಾ ತಮ್ಮ ಹಣೆಬರಹ' ಅಂತ ಗೊಳುವುದು ಮಾತ್ರ ಬಿಡುವುದಿಲ್ಲ. ನಿಜವಾಗಿ ಎಲ್ಲಾ ಹಣೆಬರಹದ ಕರಾಮತ್ತೆ ಆಗಿದ್ದರೆ ಕೊಲೆ ಮಾಡುವುದು ಕೊಲೆಗಾರನ ಹಣೆಬರಹವೆಂದು ಕ್ಷಮಿಸಬೇಕಾಗಿ ಬರುತ್ತೆ!! ಹಾಗೆ ವಿಜ್ಞಾನಿಗಳು ಮಾಡುವ ಸಂಶೋದನೆ ಅವರ ಸಂಶೋಧನೆಗಳಾಗದೆ ಅವರ ಹಣೆಬರಹದ ಸಂಶೋಧನೆಗಳಾಗಿ ಹೋಗುತ್ತವೆ. ಇದು ಓದಿದರೇನೇ ಹುಚ್ಚು ಎನಿಸಿವುದಿಲ್ಲವೇ?! ದೇವರು ನಮಗೆ ಎಲ್ಲವನ್ನು ಕೊಟ್ಟು ಜೀವಿಸುವ ಅವಕಾಶ ಕೊಟ್ಟಿರುವಾಗ ನಾವು ನಮ್ಮ ಆಗುಹೋಗುಗಳನ್ನು ಹಣೆಬರದ ತಲೆಗೆ ಏಕೆ ಕಟ್ಟಬೇಕು?! ಹೋಗಲಿ ಬಿಡಿ, ಆ ಹಣೆಬರಹದ ಹಣೆಲಿ ಹಾಗೆ ಬರೆದಿದ್ರೆ ನಾವು ತಾನೆ ಏನು ಮಾಡೋಕೆ ಆಗತ್ತೆ!.