ಶುಕ್ರವಾರ, ಜನವರಿ 21, 2011

ಉಪ್ಪಿಟ್ಟು - ಕೇಸರಿಭಾತ್...!!

ಅಬ್ಬಬ್ಬಾ! ಈ ಹುಡುಗ ಹುಡುಗಿ ಓದು ಮುಗಿಸಿ, ಕೆಲಸ ಹಿಡಿದು, ಮುಖದಲ್ಲಿ ಮೊಡವೆ ಬರೋ ವಯ್ಯಸಾಯ್ತು ಅಂದ್ರೆ ಮನೆಯವ್ರ್ಗೆಲ್ಲ ಬಂತು ನೋಡ್ರಿ "ಯಾವಾಗ ನಿಮ್ಮ ಮಗನ/ಮಗಳ ಮದುವೆ?!" ಅನ್ನೋ ಪ್ರಶ್ನೆಯ ತಲೆ ನೋವು. ಈ ವಿಚಾರದಲ್ಲಿ ಮಕ್ಕಳನ್ನು ಬೆಳೆಸಿದ ಅಪ್ಪ ಅಮ್ಮನಿಗಿಂತ ಸುತ್ತಲಿನ ನೆಂಟರಿಗೆ ಹೆಚ್ಚು ಆಸಕ್ತಿ ಇರತ್ತೆ ಕಣ್ರೀ. ಮದುವೆ, ಮುಂಜಿ ಇಲ್ಲ ಮಸಣದಲ್ಲೇ ಆಗಲಿ ತಂದೆ ತಾಯಿರಿಗೆ ಈ ಪ್ರಶ್ನೆ ಬೇತಾಳದಂತೆ ಬೆನ್ನು ಹತ್ತಿರುತ್ತೆ. ಈ ಪ್ರಶ್ನೆಗಳಿಂದ ಬೇಸತ್ತೋ ಇಲ್ಲ ತಮ್ಮ ಮಕ್ಕಳು ಮದುವೆ ಮಾಡ್ಕೊಂಡು ಜವಾಬ್ದಾರಿ ಹೊತ್ಕೊತಾರೆ ಅನ್ನೋ ಅರಿವಿನಿಂದಲೋ ದೊಡ್ಡವರು ವಧು/ವರ ಬೇಟೆಗೆ ಎಲ್ಲಾ ಶಸ್ತ್ರಗಳೊಂದಿಗೆ ತಯರಾಗ್ತಾರೆ. ಅಲ್ಲಿಗೆ ಶುರು ನೋಡಿ ಭಾವಿಚಿತ್ರಗಳು ಮತ್ತೆ ಜಾತಕಗಳ ಆಟ ಓಡಾಟ...


ಕೆಲವೊಂದು ಸಂದರ್ಭಗಳಂತೂ ತುಂಬಾನೆ ತಮಾಷೆಯಗಿರತ್ತೆ ಕೇಳೋಕೆ. ನೋಡಿ ಹೀಗೆ ನನ್ನ ಸ್ನೇಹಿತನೊಬ್ಬ ಹುಡುಗಿ ನೋಡೋಕೆ ಅವರ ಮನೆಗೆ ಹೋಗಿದ್ದ. ಇವರು ಮಾಹಿತಿ ವಿನಿಮಯಗಳನ್ನೆಲ್ಲಾ ಮುಗಿಸಿ ಹೊರಡಬೇಕಿತ್ತು. ಅಷ್ಟರಲ್ಲೇ, ಇನ್ನೊಂದು ತಂದ ಇದೇ ಹುಡುಗಿಯ ಸಂದರ್ಶನಕ್ಕೆ ಬಂದು ಇಳೀತು!!. ಬಂದವರೇ ಬಾಗಿಲ ಎದುರಿಗೆ ಕುಳಿತಿದ್ದ ಇವರಿಗೆ ನಮಸ್ಕರಿಸಿ, 'ನೋಡಿ ಸ್ವಾಮೀ, ಇವನೇ ಹುಡುಗ..' ಅಂತ ಪರಿಚಯನು ಮಾಡಿಸಿಬಿಟ್ರು!!. ಪಾಪ ಇವರಿಗೆ ನಗಬೇಕೋ ಇಲ್ಲ ಹುಡುಗಿ ಮನೆಯವರ ಪರಿಸ್ತಿತಿಗೆ ಅಳಬೇಕೋ ಗೊತ್ತಾಗದೆ ಬೇಗನೆ ಅಲ್ಲಿಂದ ಕಾಲು ಕಿತ್ತಿದ್ದಾರೆ! ಇಂಥ ಇರುಸು-ಮುರುಸುಗಳು ಆಗ ಏನು ತೊಚದಂಗೆ ಮಾಡಿದ್ರು ಆಮೇಲೆ ನೆನೆಸ್ಕೊಂದಾಗ ಬಿದ್ದು ಬಿದ್ದು ನಗೊದಂತು ಖಾತ್ರಿ ನೋಡಿ...

ಹುಡುಗ ಹುಡುಗಿಗೂ ಅಷ್ಟೇ ಇದು ಒಂಥರ ಹೊಸ ಅನುಭವ ಹೊಸ ಜೋಡಿ ಸಿಗತ್ತೆ ಅನ್ನೋ ಖುಷಿ ಹುಟ್ಟತ್ತೆ ಒಳಗೊಳಗೆ. ತಮ್ಮ ಕನಸಿನ ಕಲ್ಪನೆಯ ಜೋಡಿಗೆ ಇರಬೇಕಾದ ರೂಪುವೈಶಿಶ್ಥ್ಯಲಕ್ಷಣಗಳ ಪಟ್ಟಿಯೊಂದು ಮನಸಿನಲ್ಲೇ ತಯಾರುಗುತ್ತೆ. ಬರುವ ಪ್ರಸ್ತಾಪಗಳೆಲ್ಲವನ್ನು ಈ ಪಟ್ಟಿಯೊಂದಿಗೆ ತಾಳೆ ಹಾಕಿ ನೋಡ್ತಾರೆ.  ದಿನಕ್ಕೊಂದು ಭಾವಚಿತ್ರದ ಅವಲೋಕನ, ಒಪ್ಪಿಗೆಯಾದರೆ ಜಾತಕ ಹೋಲಿಕೆಯ ಪರೀಕ್ಷೆ, ಈ ಅಡ್ಡಗಳನ್ನು ಹಾರಿದ ಮೇಲೆ ಪ್ರತ್ಯಕ್ಷ ದರ್ಶನದ ಸೌಭಾಗ್ಯ. ಕೆಲವರು ಅದೃಷ್ಟವಂತರು ಪುಣ್ಯವಂತರು ಅಂತ ಇರ್ತಾರಲ್ಲ ಅವ್ರಿಗೆ ಮಾತ್ರ ನೋಡಿ ಒಂದು ಇಲ್ಲ ಎರಡನೇ ಸಂದರ್ಶನದಲ್ಲೇ ಪಟ್ಟಿಯ ಎಲ್ಲಾ ಅಂಶಗಳನ್ನ ಹೋಲುವಂಥವ್ರು ಸಿಕ್ಕಿಬಿಡ್ತಾರೆ. ಇನ್ನು ಮಿಕ್ಕವ್ರದ್ದೆ ಪಾಡು, ಅವರನ್ನ ನೋಡಿದ್ರೆ ಅಯ್ಯೋ ಅನ್ಸತ್ತೆ!!. ಶತಕ ಸಂದರ್ಶನಗಳನ್ನ ಹೊಡೆದರು, ಜಾತಕ ಹೊಂದೋದು ನಮಗೆ ಇಷ್ಟ ಆಗಲ್ಲ, ಇಷ್ಟ ಆಗೋದು ಜಾತಕ ಹೊಂದಲ್ಲ ಅನ್ನೋ ಹಾಗಾಗತ್ತೆ. ಬಹುಶಃ ಇದನ್ನ ನೋಡಿನೇ ಗಾದೆ ಮಾಡಿದ್ರು ಅನ್ಸತ್ತೆ "ಹುಚ್ಚು ಬಿಡೋವರೆಗೂ ಮದುವೆ ಆಗಲ್ಲ ಮದುವೆ ಆಗೋವರೆಗೂ ಹುಚ್ಚು ಬಿಡಲ್ಲ" ಅಂತ.

ಇನ್ನು ಸಂದರ್ಶನದ ಪ್ರಕ್ರಿಯೆ ಬಗ್ಗೆ ಹೇಳೋದಾದ್ರೆಹುಡುಗನ ಮನೆಯವರ ಒಂದು ದಂಡು ಹುಡುಗಿಯ ಮನೆಯೆಡೆಗೆ ಬಂದು ನಿಲ್ಲತ್ತೆ. ಅಲ್ಲಿ ಸ್ವಲ್ಪ ಹೆಚ್ಚಾಗಿಯೇ ಮರ್ಯಾದೆಗಳು ನಡೆಯುತ್ತವೆ. ಭಾವಿ ವರನಿಗೆ ಹುಡುಗಿ ಎಲ್ಲೂ ಕಾಣ್ತಿಲ್ಲವಲ್ಲ ಅಂತ ಕಣ್ಣುಗಳು ಅವಳನ್ನೇ ಹುಡುಕುತ್ತಿರುತ್ತೆ. ಸ್ವಲ್ಪ ದೊಡ್ಡವರ ಹರಟೆಯಾದ ಮೇಲೆ ಹುಡುಗಿಯನ್ನು ಕರೆಸುತ್ತಾರೆ. ಅಲ್ಲಿಯವರೆಗೆ ಉಪಯೋಗಿಸಿರದೆ ಪ್ರದರ್ಶನಕ್ಕೆ ಮಾತ್ರ ಮೀಸಲಿದ್ದ ಪಿಂಗಾಣಿ ಲೋಟಗಳು ಕಾಫಿ ತುಂಬಿಕೊಂಡು ಒಂದು ತಟ್ಟೆಯಲ್ಲಿ ಕುಳಿತು ಹೊಸ ಸ್ಟೀಲಿನ ಪ್ಲೇಟಿನಲ್ಲಿ ತಿಂಡಿಯ ಜೊತೆ ಹುಡುಗಿಯ ಕೈ ಪಲ್ಲಕ್ಕಿಯಲ್ಲಿ ಬರುತ್ತವೆ. ಇಷ್ಟರಲ್ಲಿ ಹುಡುಗನ ತಲೆಯಲ್ಲಿ ಆ ಪಟ್ಟಿ ಎದ್ದು ತಾಳೆ ಹಾಕಲು ಸಿದ್ಧವಾಗಿರತ್ತೆ. ಹುಡುಗನು ಸೇರಿದಂತೆ ಎಲ್ಲರ ಕಣ್ಣುಗಳು ಅವಳನ್ನು ಒಮ್ಮೆ ವಿಶ್ಲೇಷಣೆ ನಡೆಯುತ್ತೆ. ಕಾಪಟಿನಲ್ಲಿನ ಒಡವೆಗಳು ಅಮ್ಮನ ರೇಷ್ಮೆ ಸೀರೆ ಹುಡುಗಿಯ ಮೈತುಂಬಿರತ್ತೆ. ಹುಡುಗಿಗೂ ಸ್ವಲ್ಪ ನಾಚಿಕೆ ಅದೇ ಸಣ್ಣ ನಗುವಿನ ರೂಪ ತಾಳಿ ಮೊಗದಲ್ಲಿ ತುಂಬಿರುತ್ತೆ.

ಇಬ್ಬರು ಒಬ್ಬರನ್ನೊಬ್ಬರು ನೋಡುತ್ತಾರೆ. ನಂತರ 'ಏನು ಓದಿರೋದು?', 'ಎಲ್ಲಿ ಓದಿದ್ದು?', 'ಇಗ ಏನು ಮಾಡ್ತಿರೋದು?'...ಇನ್ನು ಒಂದಷ್ಟು ಮೊದಲೇ ಉತ್ತರ ಗೊತ್ತಿರುವ ಪ್ರಶ್ನೆಗಳು ಹಾರಾಡುತ್ತವೆ. ನಂತರ ದೊಡ್ಡವರು ಅವರ ಸಂಬಂಧಿಗಳ ಪರಿಚಯದಿಂದ ಇಬ್ಬರು ಹೇಗೆ ಹತ್ತಿರವಾಗ್ತಾರೆ ಅನ್ನೋದನ್ನ ಕಂಡು ಹಿದ್ಯೋಕೆ ಶುರು ಮಾಡ್ತಾರೆ. ಅಲ್ಲಿಯವರೆಗೆ ಹುಡುಗನ ಬಾಯಿ ಕಾಫಿ ಕುಡ್ಯೋಕೆ ಬಿಟ್ರೆ ಮತ್ತೆ ತೆರೆದೇ ಇರಲ್ಲ. ಇಷ್ಟ ಆಗ್ಬಿಟ್ರೆ ಸ್ವಲ್ಪ ಧೈರ್ಯ ಮಾಡಿ, 'ಅಂಕಲ್, ಅವ್ರ ಹತ್ರ ಸ್ವಲ್ಪ ಮಾತಾಡಬಹುದ?!' ಅಂತ ಭಯ ಇದ್ರೂ ತೋರಿಸ್ಕೊಲ್ದೆ ಕೇಳಿಬಿಡ್ತಾನೆ. 'ಅದಕ್ಕೇನಂತೆ ಮಾತದ್ಕೊಲಿ. ಹೋಗಮ್ಮ, ಇಬ್ರು ಮಾತಾಡ್ಕೊಳಿ ..' ಅಂತ ಹಸಿರು ನಿಶಾನೆ ಕೊಡ್ತಾರೆ. ಮನೆಯಿಂದ ಬರುತ್ತಾ ದಾರಿಯಲ್ಲಿ ತಯಾರು ಮಾಡ್ಕೊಂಡಿದ್ದ ಪ್ರಶ್ನೆಗಳು, ಇದೇ ರೀತಿ ಸಂದರ್ಶನಕ್ಕೆ ಹೋಗಿ ಬಂದ ಸ್ನೇಹಿತರ ಸಲಹೆಗಳಿಂದ ಸಿದ್ಧ ಮಾಡಿದ ಸವಾಲುಗಳು, ಅಲ್ಲಿ ಮರೆತುಹೋಗುತ್ತೆ. ಆಗ ಮತ್ತೆ 'ಎಲ್ಲಿ ಓದಿದ್ದು?'... ಅದೇ ಉತ್ತರವಿರುವ ಪ್ರಶ್ನೆಗಳು ಶುರು ಅಗತ್ವೆ. ಪರಸ್ಪರ ಮಾಹಿತಿಗಳು ವಿನಿಮಯವಗುತ್ತೆ. ಮತ್ತೆ ಮರಳಿ ಬರುತ್ತಾರೆ. ಇವರು ಹೋದಾಗ ಶುರು ಮಾಡಿದ್ದ, (ಅವರ ಹಿರಿಯರಿಗೆ ಕಾಣದಂತೆ ಎಷ್ಟೇ ಸುತ್ತು ಹೊದೆಡಿದ್ರು) 'ನಮ್ಮ ಕಾಲದಲ್ಲಿ ಹಿಂಗಿರ್ಲಿಲ್ಲ ನೋಡಿ, ನಾವು ನಮ್ಮ ಹೆಂಡ್ತಿರನ್ನ ನೋಡಿದ್ದು ಮದುವೆ ಮಂಟಪದಲ್ಲೇ' ಅನ್ನೋ ಅವರ ಕಾಲದ ಮಾತುಗಳು ಇನ್ನು ಅದೇ ಕೊನೆಯಲ್ಲಿ ಗಸ್ತು ಹೊಡೆಯುತ್ತಿರುತ್ವೆ. ಸಂದರ್ಶನ ಮುಗಿಯತ್ತೆ, ಭಾವಿ ವರ ಮತ್ತು ಮನೆಯವರು ಮನೆಯ ಕಡೆಗೆ ಹೊರಡ್ತಾನೆ. ಖಾಲಿ ಉಪ್ಪಿಟ್ಟು ಕೆಸರಿಭಾತಿನ ಪ್ಲೇಟುಗಳು ಇದನ್ನೆಲ್ಲಾ ಒಂದು ಸಿನೆಮಾ ಥರ ನೋಡ್ಕೊಂಡು ಸುಮ್ಮನೆ ಇರತ್ವೆ.






2 ಕಾಮೆಂಟ್‌ಗಳು: