ಹೋಟೆಲ್ನಲ್ಲಿ ಅಲ್ಲಿ ಇಲ್ಲಿ ಕುರುಕಲು, ಮಸಾಲೆ ತಿಂಡಿಗಳು ತಿನ್ನೋ ಚಟ ಇದೆ ನೋಡಿ, ಭಾರಿ ಕೆಟ್ಟದ್ದು ಕಣ್ರಿ. ಅದು ಗೊತ್ತಿದ್ದೂ ನಾನು ಆ ಚಟ ಬಿಡೋಕೆ ಆಗಿರಲಿಲ್ಲ. ಹಿಂಗೆ ಇದರಿಂದಾಗಿನೆ ಹೋದ ವಾರ ಹೊಟ್ಟೆ ಕೆಡಿಸ್ಕೊಂಡು ಆಸ್ಪತ್ರೆ ಸೇರ್ಕೊಬೇಕಾಯ್ತು. ಆಸ್ಪತ್ರೇಲಿ ಇರೋದು ಬೇಜಾರಿದ್ರು, ಅಲ್ಲಿ ನಡ್ಯೋದು ನೋಡೋಕೆ ಒಂಥರಾ ಮಜಾ ಇತ್ತು. ಅಲ್ಲಿ ನಾನು ನನ್ನ ಜೀವನದ ಎರಡೂವರೆ ದಿನ ಕಳೆಯಲೇ ಬೇಕಾಗಿ ಬಂತು. ಈ ಆಧುನಿಕ ಆಸ್ಪತ್ರೆಗಳು, ಹೊರಗೆ ಹೋಗಲು ಬಿಡದ ಜೈಲುಗಳು ಹಾಗೂ ಹಣ ಹೀರುವ ತಿಗಣೆಗಳ ಸ್ಪೂರ್ತಿ ಪಡೆದಿವೆ ಅಂದ್ರೆ ತಪ್ಪಗೋದಿಲ್ಲ ಅನ್ಕೋತೀನಿ.
ಅದೊಂದು ಗುರುವಾರ ಬೆಳಗ್ಗಿನಜಾವಕ್ಕೆ ತಿಂದ್ದದ್ದೆಲ್ಲ vomit (ಈ ಪದ ಕನ್ನಡದ ಪದಕ್ಕಿನ್ನ ಕಿವಿಗೆ ಸ್ವೀಟ್ ಆಗಿ ಕೆಳ್ಸತ್ತೆ) ಆಗೋಕೆ ಶುರು ಆಯ್ತು. ಇದು ವಿಪರೀತ ಅನ್ನಿಸ್ದಾಗ ನನ್ನ ಪಕ್ಕ ಇದೆಲ್ಲದರ ಪರಿವೆ ಇಲ್ದೆ ಚನ್ನಾಗಿ ಗೊರಕೆ ಹೊಡ್ಕೊಂಡು ಮಲಗಿದ್ದ ಗೆಳೆಯರನ್ನ ಎಬ್ಬಿಸಿ, ಎಲ್ಲರೂ ಜೊತೆಯಲ್ಲಿ ಆಸ್ಪತ್ರೆಗೆ ಬಂದ್ವಿ. ಆಸ್ಪತ್ರೆಯವರು ಸಹ ಬೆಳಗ್ಗೆಯೇ ಒಳ್ಳೆ ಕುರಿ ಬಂತು ಅಂತ ಅತಿವಿನಯದಿಂದ (ಅತಿವಿನಯಂ ಧೂರ್ತ ಲಕ್ಷಣಂ) ಒಳಗೆ ಹಾಕ್ಕೊಂಡ್ರು. ಒಬ್ಬ ಡಾಕ್ಟ್ರು ಬಂದು ಒಂದು ಸೂಜಿ ಚುಚ್ಚಿದ್ರು, ಅದಕ್ಕೆ ಮತ್ತು ಬಂದ ಹಾಗೆ ಆಗಿ ಮಲಗಿದೆ.
ಎದ್ದಾಗ, ಅಲ್ಲೇ ನನಗಾಗಿ ತಯಾರಾಗಿದ್ದ (ಬಂದಿ)ಖಾನೆಯೊಳಗಿದ್ದೆ, ನನ್ನ ಎಡಗೈನಲ್ಲಿ ಗ್ಲೂಕೋಸ್ ತುಂಬ್ಸೋಕೆ ಒಂದು ಸೂಜಿ ಹಾಕಿ, ಆಗ್ಲೇ ಗ್ಲೂಕೋಸ್ ಏರಿಸ್ತಿದ್ರು. ನಾನು ಎಚ್ಚರ ಆಗೋದನ್ನೇ ಕಾಯುತ್ತ ಕೂತಿದ್ದ ಆಸ್ಪತ್ರೆಯವ್ನು ಒಬ್ಬ 'ನಿಮ್ಮದು ಇನಶುರನ್ಸ್ ಇದೆಯಾ?, ಇಲ್ಲಾಂದ್ರೆ ಕಾಸು ಕಟ್ಟುತ್ತೀರ.....?' ಅಂತ ಕೇಳಿದ. ಇನಶುರನ್ಸ್ ಇದೆ ಅಂತ ಹೇಳಿ ಅದರ ಮಾಹಿತಿ ಕೊಟ್ಟೆ. ಮತ್ತೆ ಸ್ವಲ್ಪ ಸಮಯ ಬಿಟ್ಟು ಬಂದ 'ಇನ್ನೂ ನಿಮ್ಮ ಇನ್ಶುರನ್ಸ್ ಅನುಮೋದನೆ ಆಗಿಲ್ಲ, ಅದು ಆಗಿಲ್ಲ ಅಂದ್ರೆ ಕಾಸು ಕಟ್ಟಬೇಕಾಗತ್ತೆ.' ಅಂತ ಮತ್ತೆ ಕೇಳಿದ!!. ನಾನೇ ಆ ಇನಶುರನ್ಸ್ ಮಾಹಿತಿ ಕೇಂದ್ರಕ್ಕೆ ಒಂದು ಕರೆ ಮಾಡಿ ಅವರಿಗೆ ಕಳಿಸಬೇಕಾದ ಮಾಹಿತಿ ಮತ್ತು ಬಗೆ ಹೇಗೆ ಅಂತ ತಿಳ್ಕೊಂಡು ಅವನಿಗೆ ತಿಳಿಸಿದೆ. ಅದನ್ನು ತಗೊಂಡು ಹೋದವನು ಮತ್ತೆ ಬಂದ 'ಇಲ್ಲ ಇನ್ನೂ ಅನುಮೋದನೆ ಆಗ್ತಿಲ್ಲ' ಅಂತ ಮತ್ತೆ ಓಡಿ ಬಂದ!! ಕಡೆಗೆ ರೋಸಿ ಹೋಗಿ ನಾನೇ ಎದ್ದು ಅವರ ಸ್ಥಳಕ್ಕೆ ಹೋಗಿ ಕುಂತು ಮಾಡಿಸಿ ಬಂದೆ. (ಆ ವೇಳೆಗೆ ಆಗ್ಲೇ ಹಾಕಿದ್ದ ಗ್ಲುಕೋಸ್ ಖಾಲಿ ಆಗಿತ್ತು). ಆ ಕಡೆಯಿಂದ ಸಮ್ಮತಿ ಬಂದ ಮೇಲೆ ತಿಳಿಸಿ ಅಂತ ಹೇಳಿ ಮತ್ತೆ ಬಂದು ಮಲಗಿದೆ. ಆ ವೇಳೆಗೆ ಅಲ್ಲಿನ ಕನ್ನಡವನ್ನು ಅವರ ರಾಗವಾದ ಶೈಲಿಯಲ್ಲೇ ಮಾತಾಡುವ ಮಲಯಾಳಿ ನರ್ಸ್ ಒಬ್ಬಳು ಇನ್ನೊಂದು ಬಾಟಲ್ (ಗ್ಲುಕೋಸ್ ಬಾಟಲ್) ಏರಿಸೋಕೆ ಕಾಯ್ತಿದ್ಲು. ತಿಂಡಿ ತಿನ್ನಲು ಅನುಮತಿ ಪಡೆದು, ಮುಗಿಸಿ ಮತ್ತೆ ಬಾಟಲ್ ಏರಿಸ್ಕೊಂಡು ಮಲಗಿದೆ. ಈ ಬಾಟಲ್ ಪ್ರಕ್ರಿಯೆ ಎರಡು ದಿನ ನಡೆದವು ಬಿಡಿ. ಆ ನಂತರ ನಾನೇ ಬಲವಂತವಾಗಿ ಬೇಡ ಅಂತ ಹೇಳಿ ನಿಲ್ಲಿಸದೆ. ಆದರು ಅಲ್ಲಿನ ನರ್ಸ್ ಬಾಟಲ್ ಹಾಕಲೇಬೇಕೆಂಬ ಹಠ ತೊಟ್ಟಿದ್ದಂತೆ ಕಂಡಿತು. ಇನ್ನೊಬ್ಬ ಡಾಕ್ಟರ ನ ಕರೆದು, 'ಸರ್, ನನಗೀಗ ಊಟ ಸರಿಯಾಗಿ ಸೇರ್ತಿದೆ ಅಂದಮೇಲೆ ಈ ಗ್ಲುಕೋಸ್ ಏನಕ್ಕೆ?! ದಯವಿಟ್ಟು ಇದನ್ನ ಹಾಕಬೇಡಿ' ಅಂತ ಕೇಳ್ಕೊಂಡೆ. ಅವ್ರು ನಕ್ಕೊಂಡು 'ಸರಿ ಬಿಡಿ ಹಾಕೋದಿಲ್ಲ...' ಅಂತ ನರ್ಸ್ ನೋಡಿದ್ರು, ಆಕೆಗೂ ಅದು ಅರ್ಥ ಆಯ್ತು. ಅವರ ಧರ್ಮಕ್ಕೆ ತ್ಯುಚಿ ತಂದೆ ಅನ್ನೋ ಕಾರಣಕ್ಕೆ, ಆ ನರ್ಸ್, ಕೋಪಿಸಿಕೊಂಡವಳ ನೋಡಿ ಹೋದಳು!
ಹಾಂ, ಆ ಮೊದಲನೇ ದಿನನೇ ಸಂಜೆ ಡಾಕ್ಟ್ರು ಬಂದು ನನ್ನ ನೋಡಿದರು, ಅಷ್ಟೊತ್ತಿಗೆ ಆಗ್ಲೇ ನನ್ನದೊಂದು ದೊಡ್ಡ ಫೈಲೇ ರೆಡಿ ಮಾಡಿದ್ರು. ಅದರ ಗಾತ್ರ ನೋಡಿನೇ ನಂಗೆ ಯಾವ್ದೋ ದೊಡ್ಡ ರೋಗ ಬಂದಿದೆ ಅನ್ನೋ ಭಾವನೆ ಬಂತು. ಅದರಲ್ಲಿ ಆಗಲೇ ನನ್ನ ರಕ್ತ ಪರೀಕ್ಷೆಯ ವರದಿಗಳು ಸೇರ್ಕೊಂಡಿದ್ವು. ಸುಮಾರು ೧೦ ಸೊಳ್ಳೆ ಹೀರೋಕಿನ್ನ ಜಾಸ್ತಿನೇ ರಕ್ತ ಹೀರ್ಕೊಂಡಿದ್ರು ಅಂತ ಕಾಣ್ಸತ್ತೆ. ಅದು ತಗೊಂಡಿದ್ದು ಅರೆ ಪ್ರಜ್ಞಾವಸ್ಥೆಯಲ್ಲಿ ನಾನು ಮಲಗಿದ್ದಾಗ ಅನ್ನೋದು ತಿಳೀತು. ಆ ಡಾಕ್ಟರ ಸ್ಕ್ಯಾನ್ನಿಂಗ್, ECG, ಅಂತ ಇನ್ನು ಅಷ್ಟು ಪರೀಕ್ಷೆ ಹೇಳಿ ಹೋದರು. 'ಏನಿಲ್ಲಪ್ಪ ಊಟದಲ್ಲಿ ಏನೋ ತೊಂದ್ರೆ ಆಗಿ ಹೀಗೆ ಆಗಿದೆ' ಅಂತ ನನ್ನ ಸಮಾಧಾನ ಮಾಡಿದ್ರು. ಆದರು ನನಗೆ ಆ ಪರೀಕ್ಷೆಗಳೆಲ್ಲ ಯಾಕೆ ಹೇಳಿದ್ರು ಅಂತ ಆಗ ಅರ್ಥ ಆಗ್ಲಿಲ್ಲ. ನಾನು ಬಿಡೋ ವೇಳೆಗೇನೆ ತಿಳಿದಿದ್ದು ಅಲ್ಲಿ ಇನಶುರನ್ಸ್ ಇಂದ ೧೦ಸಾವಿರದ ವರೆಗೆ ಅನುಮೋದನೆ ಸಿಕ್ಕಿತ್ತು. ಇವರು ಹೇಗಾದರೂ ಅದನ್ನು ತಲುಪಲೇ ಬೇಕೆಂದು ನಿಶ್ಚಯಿಸಿಕೊಂಡು ಅದಕ್ಕೆ ತಕ್ಕ ಕಾರ್ಯತಂತ್ರ ರೂಪಿಸಿಕೊಂಡಿದ್ರು ಅಂತ.
ಇಲ್ಲಿ ಇನ್ನೊಂದು ಸಣ್ಣ ನೆನಪು ಅಂದ್ರೆ, ಆಸ್ಪತ್ರೆ ನಲ್ಲಿ ಇದ್ದ ಮೇಲೆ ನೋಡೋಕೆ ಬರೋರು ಬ್ರೆಡ್ಡು-ಬಿಸ್ಕೆಟ್ಟು ತರೋದೆ ತಾನೇ. ಹಾಗೆ ಗೆಳೆಯ ರಾಕೇಶ್ ಕೂಡ ತಂದಿದ್ದ. ಆದ್ರೆ ನಮ್ಮ ಹುಡುಗ್ರು 'ನಿಂಗೆ ಹೊಟ್ಟೆ ಸರಿ ಇಲ್ಲ ನಿಂಗೆ ಬೇಡ' ಅಂತ ಹೇಳಿ ತಾವೇ ಸಮಾಪ್ತಿ ಗೊಳಿಸಿದರು. ಮೊದಲೇ ತಿಂಡಿ ಪೂತನಾದ ನಾನು, ಇದು ಕಣ್ಣ ಮುಂದೆಯೇ ನಡೆಯುತ್ತಿದ್ದರೂ, ಏನು ಮಾಡಲಾಗದೆ ಅಸಹಾಯಕನಾಗಿ ನೋಡುತ್ತಿದ್ದೆ.
ಅಲ್ಲಿ ಹೊಸದಾಗಿ ಸೇರಿರೋ ಮೂರು ನರ್ಸ್ ಗಳು ಇದ್ದರು. ಅವರಿಗಂತೂ ಅವರು ಕಷ್ಟ ಪಟ್ಟು ಕಲಿತ ವಿದ್ಯೆ ಪ್ರಯೋಗ ಮಾಡೋಕೆ ನಾನೇ ಪ್ರಯೋಗದ ಮಂಗವಾಗಿ ಸಿಕ್ಕಿಬಿಟ್ಟಿದ್ದೆ. ಒಬ್ಬ ನರ್ಸ್ ಆ ಗ್ಲುಕೋಸ್ ಸೂಜಿ ಸರಿಯಾಗಿ ಚುಚ್ಚದೆ 5ml ಅಷ್ಟು ರಕ್ತ ಹಾಗೆ ಹರಿಸಿದಳು. ಅದನ್ನು ಪಾಪ ಸೊಳ್ಳೆಗಾದರೂ ದಾನ ಮಾಡಿದ್ದರೆ ಅದರ ಕುಟುಂಬವೆಲ್ಲ ಔತಣ ಮಾಡುತ್ತಿದ್ದವೇನೋ! ಎಡಗೈನಲ್ಲಿ ಆ ಸೂಜಿ ಚುಚ್ಚಿದ್ದ ಜಾಗ ಊದಿಕೊಂಡ ಕಾರಣ, ಹೊಸ ಸೂಜಿಯೊಂದನ್ನು ತಂದು ಬಲಗೈನಲ್ಲಿ ಹಾಕಿದರು. ಇನ್ನೊಂದು ಸನ್ನಿವೇಶದಲ್ಲಿ ಅವರು ರಕ್ತ ವತ್ತಡ ಪರೀಕ್ಷೆ ಮಾಡಿದ ರೀತಿ ಇದಕ್ಕಿಂತ ಚಂದವಾಗಿತ್ತು. ಒಬ್ಬಳು ನನ್ನ ತೋಳಿಗೆ ರಕ್ತ ವತ್ತಡ ಮಾಪನದ ಪಟ್ಟಿ ಕಟ್ಟಿ ಪರಿಕ್ಷೀಸಿದಳು ಅವಳಿಗೆ ಸರಿಯಾಗಿ ಗೊತ್ತಾಗಲಿಲ್ಲ ಅನ್ಸತ್ತೆ. ಅದಕ್ಕೆ ಸಾಹಯವಾಗಿ ಇದ್ದ ಇನ್ನೊಬ್ಬಳ ಮುಖ ನೋಡುತ್ತಾ ನಿಂತಳು. ಅಲ್ಲಿಯ ತನಕ ಹಿಂದಿದ್ದ, ಸ್ವಲ್ಪ ಮುಂದಾಳಿನಂತಿದ್ದವಳು ಈ ಇಬ್ಬರನ್ನು ಸರಿಸಿ ಬಂದು ಮತ್ತೆ ಪರಿಕ್ಷೀಸಿದಳು. ಅವಳಿಗೂ ಗೊತ್ತಾಗಲಿಲ್ಲ. ಇದು ನಿಮಿಷ ಬಿಟ್ಟು ಬರ್ತೀವಿ ಅಂತ ಹೊರಟುಹೋದರು. ಮತ್ತೆ ಬಂದರು, ಹುಡುಗನಿಗೆ ಹೆಣ್ಣು ಕೊಡುವಾಗ ವಿಚಾರಿಸುವ ಹಾಗೆ ನಮ್ಮ ಕುಟುಂಬದ ಮಾಹಿತಿ ತಗೆದುಕೊಂಡರು. (ನಾನು ಅದೇ ನಿರೀಕ್ಷೆನಲ್ಲೆ ಇದ್ದೆ, ಆದರೆ ಆಮೇಲೆ ಗೊತ್ತಾಗಿದ್ದು ಅದು ಅವರ ಬೆಲೆ ಪಟ್ಟಿ ತುಂಬಿಸೋಕೆ ಸಮರ್ಥರೋ ಅಲ್ಲವೋ ಅನ್ನೋ ಅನುಮಾನಕ್ಕೆ ಕೊಂಡ ಮಾಹಿತಿ ಅಂತ). ಮತ್ತೆ ಇದು ನಿಮಿಷ ಬಿಟ್ಟು ಆ ಮೂರು ಜನ ಬಂದು (ಹೇಳಿಸ್ಕೊಂಡು ಬಂದಿದ್ದರೋ, ಇಲ್ಲ ಅವರವರೆ ಒಂದು ಪ್ರಯೋಗ ಮಾಡ್ಕೊಂಡು ಆಮೇಲೆ ಬಂದರೋ ಗೊತ್ತಿಲ್ಲ), ಮತ್ತೆ ರಕ್ತ ವತ್ತಡ ಪರೀಕ್ಷೆ ಮಾಡಿದ್ರು, 'ಈ ಸರಿಯಿದೆ' ಅನ್ನುವ ರೀತಿಯಲ್ಲಿ ಏನೋ ಬರೆದುಕೊಂಡು ಹೋದರು.
ಆದರು ಏನೇ ಹೇಳಿ, ಅಲ್ಲಿ ಆ ಮಲಯಾಳಿ ನರ್ಸ್ ಗಳ ಕೆಲಸ ಮೆಚ್ಚಬೇಕಾದ್ದೆ. ಕಣ್ಣು ತಂಪಾಗೋ ವಿಚಾರ ಬೇರೆ ಬಿಡಿ, ನಾನು ಹೇಳ್ತಿರೋದು ಅವರ ಸೇವೆ ಮನೋಭಾವನೆ ಬಗ್ಗೆ. ಅದು ಮಾತ್ರ ಮೆಚ್ಚಬೇಕಾದ್ದೆ.
ಆ ದಿನ ಸಂಜೆ ಕೂಡ ಡಾಕ್ಟ್ರು ಬಂದ್ರು ಆ ಹೊತ್ತಿಗೆ ನಾನು ಮಾಮೂಲಿನಂತೆ ಇದ್ದೆ, ಅವರು ಪರೀಕ್ಷೆ ಮಾಡಿ ಏನು ಹೇಳದೆ ಹೋಗ್ತಿದ್ರು. ಅಲ್ಲಿವರೆಗೆ ಆ ದಿನ ಬಿಡುಗಡೆ ಸಿಗತ್ತೆ ಅನ್ನೋ ಆಸೆಯಲ್ಲಿದ್ದ ನನಗೆ ಭಯವಾಯಿತು. ನಾನೇ ಕೇಳಿಬಿಟ್ಟೆ, 'ನಾನು ಮನೆಗೆ ಹೋಗಬಹುದಲ್ಲ?!...'. ಅದಕ್ಕೆ ಅವ್ರು ನಕ್ಕುಬಿಟ್ರು, ನನಗೆ ಆಗ ನನ್ನ ಕಿವಿಯಲ್ಲಿನ ಚೆಂಡು ಹೂವುಗಳು ಕಾಣಿಸಿದವು. ಕೂಡಲೇ ನನ್ನ ಗೆಳಯನ್ನ ಅವರ ಹಿಂದೆ ಕಳಿಸಿದೆ. 'ನಾಳೆ ಬಿಡಲೇ ಬೇಕು, ಅವನಿಗೆ ಮುಖ್ಯವಾದ ಕೆಲಸ ಇದೆ' ಅಂತ ಹೇಳಿದ್ದಕ್ಕೆ ಬೆಳಗ್ಗೆ ಕರೆ ಮಾಡಿ ಹೇಳ್ತೀನಿ ಅಂತ ಹೇಳಿ ಅವ್ರ ಮನೆಗೆ ಹೊರಟುಹೋದರು. ಆ ರಾತ್ರಿಯೂ ಅಲ್ಲೇ ಕಳೆದುಹೋಯಿತು. ಕಣ್ಮುಂದೆಯೇ ನರ್ಸ್ ಗಳು ಲಲನಾಮಣಿಯರಂತೆ ಓಡಾಡುತ್ತಿದ್ದರೂ, ಆ ಆಸ್ಪತ್ರೆ ಜೈಲು ಅನ್ಸೋಕೆ ಶುರು ಆಯ್ತು. ಮಾರನೇ ದಿನ ಎದ್ದು, ಬೆಳಗ್ಗೆ ೯ ರಿಂದಲೇ ಡಾಕ್ಟರ ಗೆ ಕರೆ ಮಾಡಿ ಅಲ್ಲಿಂದ ನಿರ್ಗಮಿಸುವ ಪ್ರಕ್ರಿಯಿಗೆ ಚಾಲನೆ ಶುರು ಮಾಡಿಸದೆ. ಇನ್ನು ಅರ್ಧ ಗಂಟೆ, ಐದು ನಿಮಿಷ, ಇನ್ನೇನು ಬರ್ತಿದೆ, ಬೆಲೆಪಟ್ಟಿ ಬಂದ ಕೂಡಲೇ ಕಳಿಸ್ತೀವಿ ಅಂತ ಗಂಟೆ ಮಧ್ಯಾಹ್ನ ೧ ಹೊಡೆದರು ಹೇಳ್ತಾನೆ ಇದ್ರೂ. ಅಷ್ಟರಲ್ಲಿ ನನ್ನ ಗಂಟು ತಯಾರು ಮಾಡ್ಕೊಂಡು, ಕೈಗಳಿಗೆ ಹಾಕಿದ್ದ ಬೇಡಿ (ಸೂಜಿ!) ತಗೆಸ್ಕೊಂದು ಅಲ್ಲೇ ಹೋಗಿ ಕುಂತೆ, 'ಈಗಲೇ ಕಳಿಸಿ' ಅಂತ, ಅಲ್ಲಿನ ಜವಾನ ಆ ಸಮಯದಲ್ಲೇ ತುಂಬಾ ಕೆಲಸವಿದ್ದ ಕಾರಣ, ನಮಗೂ ಹೋಗುವ ಆತುರವಿದ್ದ ಕಾರಣ ನನ್ನ ಗೆಳಯನೆ ಹೋಗಿ ಅದನ್ನೆಲ್ಲ ತಯಾರು ಮಾಡಿಸ್ಕೊಂಡು ಬಂದ. ಕಡೆಗೂ ಅಲ್ಲಿನ ಎರಡೂವರೆ ದಿನಗಳ ಅಜ್ಞಾತವಾಸ ಕಳೀತು, ಆಚೆ ಬಂದಾಗ ಖುಷಿಯಿಂದ ಹಾಯ್ ಎನಿಸಿತು. 'ಆ...' ಎಂದು ನರಳುತ್ತ ಬಂದ ಆಸ್ಪತ್ರೆಯ ಹೆಬ್ಬಾಗಿಲಲ್ಲಿ ನಿಂತು 'ಮತ್ತೆ ಬರೋಲ್ಲ....!!' ಅಂತ ಹೇಳಿ ಬಂದೆ.
Good one :-)
ಪ್ರತ್ಯುತ್ತರಅಳಿಸಿchennagide
ಪ್ರತ್ಯುತ್ತರಅಳಿಸಿGo with whatever disease, hospitals will do successful pocket surgery!!
kya pravachan de raha hai be
ಪ್ರತ್ಯುತ್ತರಅಳಿಸಿchennagide......
ಪ್ರತ್ಯುತ್ತರಅಳಿಸಿ