ಶನಿವಾರ, ಜೂನ್ 26, 2010

ದೂರ ಹೊರಟಾಗ...

ಸದಾ ಹರಟುವ, ಮಕ್ಕಳಂತೆ ಮುಕ್ತ ಮನಸಿನಿಂದ ಒಂದಾಗುವ ಸ್ನೇಹಿತರ ಗುಂಪಿನಲ್ಲಿ ಈಗ ನಾನು ಒಬ್ಬ. ಗಡಿಯಾರದ ಮುಳ್ಳು ೪-೩೦ ಮುಟ್ಟುವುದನ್ನು ಕಾಯುತ್ತಲೇ ದಿನದ ಕೆಲಸ ಶುರುವಾಗುತ್ತದೆ! ಆ ಸಮಯಕ್ಕೆ ಸರಿಯಾಗಿ ವೇಣು ತಮ್ಮ ಬಂಡಿ ಸಿದ್ಧವಾಗಿಟ್ಟುಕೊಂಡು ನಮಗಾಗಿ ಕಾಯುತ್ತಿರುತ್ತಾರೆ. ನಮ್ಮ ಬಂಡಿಯೇ ಕಡೆಗೆ ಹೊರಡುವುದಾದರೂ ದಿನವೂ ಬರುವವರೆಲ್ಲಾ ಬರುವವರೆಗೂ ಕಾಯದೆ ಹೊರಡುವುದಿಲ್ಲ. ಮನೆಗೆ ಹೊರಡುವಾಗ ಸಂಜೆ ಒಂದೆಡೆಯಲ್ಲಿ ನಿಲ್ಲಿಸಿ ಕುರುಕಲು ತಿಂಡಿಗಳನ್ನು ಬಾರಿಸುವುದು ನಮ್ಮಲ್ಲಿನ ಒಂದು ಸಂಪ್ರದಾಯ. ನಡುಪಟ್ಟಿಯ ಮೇಲೆ ಜೋತುಬಿದ್ದ ಹೊಟ್ಟೆಯನ್ನು ನೋಡಿದಾಗ 'ಹೀಗೆ ತಿನ್ನೋದು ಕಮ್ಮಿ ಮಾಡ್ಬೇಕು' ಅನ್ನೋ ಕಾನೂನು ಮಾಡ್ಕೊಂಡ್ರು. ಆ ಕಾನೂನು ಮುರಿಯೋದು ಏನು ಹೊಸ ವಿಷಯವಲ್ಲ.

ಬಂಡಿಯಲ್ಲಿ ನನ್ನದು ವೇಣು ಪಕ್ಕದಲ್ಲಿ ಮುಂದಿನ ಜಾಗ, ಹಿಂದೆ ರಾಕೇಶ ಮತ್ತು ಜೋಷಿ ಕೂತ್ಕೋತಾರೆ, ಕಡೆಯ ಸಾಲಿನಲ್ಲಿ ಅರ್ಚನ, ಶುಭ, ಮಮತ, ಮೂರು ಜನ. ಜೋಷಿಯವರ ವಯಸ್ಸು ಅವರಿಗೆ ಹಿಂದಿನ ಸಾಲಿನಲ್ಲಿ ಕೂರುವ ಇಕ್ಕಟ್ಟಿನಿಂದ ಪಾರು ಮಾಡಿತ್ತು. ಕಂಪನಿಯಲ್ಲಿ ಮತ್ತು ನಮ್ಮ ಜೊತೆಗಿನ ಬಂಡಿಯ ಪಯಣ ಇವತ್ತು 'ಶುಭ'ಗೆ ಕಡೆಯ ದಿನ. ಅಮೆರಿಕಾದ ಪಿಟ್ಸ್ ಬರ್ಗ್ ನಲ್ಲಿರುವ ಕಾರ್ನಗಿ ಮೆಲ್ಲನ್ ವಿಶ್ವ ವಿದ್ಯಾಲಯದ ಟೆಪ್ಪರ್ ಸ್ಕೂಲ್ ಆಫ್ ಬಿಸಿನೆಸ್ ನಲ್ಲಿ ಉನ್ನತ ವ್ಯಾಸಂಗಕ್ಕಾಗಿ ಅವಳು ಹೊರಟಿದ್ದಳು. ಬಂಡಿ ಸಂಜೆ ಹೊರಡುತಿದ್ದಂತೆಯೇ ಜೋಷಿಯವರು 'ಇವತ್ತು ಇವಳ ಕಡೆ ದಿನ ಸೊಗದ ಹಾಡು ಹಾಕಪ್ಪ' ಅಂತ ಮುಂದೆ ಕೂತು F.M ಚಾನಲ್ಲುಗಳನ್ನ ನಿಭಾಯಿಸುವ ಜಾವಾಬ್ದಾರಿ ಹೊತ್ತ ನನಗೆ ಹೇಳಿದ್ರು. ಒಂದೂ ಆ ರೀತಿಯ ಹಾಡು ಬಾರದ ಕಾರಣ ತಮ್ಮ ಬ್ಲಾಕ್ ಬೆರಿಯಲ್ಲೇ ಹಾಡು ಶುರು ಮಾಡಿದರು. ಯಾರಿಗೂ ಅದು ಇಷ್ಟವಾಗದೆ ಆ ಮೊಬೈಲನ್ನ ಕಿತ್ತುಕೊಂಡು ಹಾಡು ನಿಲ್ಲಿಸಲು ಗೊತ್ತಾಗದೆ ಮತ್ತೆ ಜೋಷಿಯವರ ಬಳಿ' ಹಾಡು ನಿಲ್ಲಿಸಿ ಸಂತೋಷದ ಮಾತಾಡಿ' ಎನ್ನುವ ಮನವಿಯೊಂದಿಗೆ ವಾಪಸಿತ್ತರು. ಹಾಡು ನಿಲ್ಲಿಸಿ ಅವರಿಗೆ ಬಂದ ಒಂದೆರಡು ಕರೆಗಳನ್ನು ಮುಗಿಸಿ ಮತ್ತೆ ಮಾತಿಗಿಳಿದರು. ಸಂಪ್ರದಾಯದಂತೆ ಇಂದು ಎಲ್ಲಿ ತಿನ್ನಲು ಹೋಗುವುದು ಎಂಬ ಪ್ರಶ್ನೆಗೆ ಮಲ್ಲೇಶ್ವರಂನ ವೀಣಾ ಸ್ಟೋರ್ಸ್ ಒಕ್ಕಲೂರಿನ ಉತ್ತರವಾಯಿತು. ನಮ್ಮ ಚಾಲಕ ಮಹಾಶಯ ವೇಣುವಿನ ಹೆಸರು ಆ ಅಂಗಡಿಯ ಹೆಸರೊಂದಿಗೆ ಕೊಂಚ ಹೊಂದುವುದರಿಂದ ಅದಕ್ಕೆ ಅವರ ಕಣ್ಮಣಿಗಳ ಹೆಸರು ಸೇರಿಸಿ, R.V.R (ರಮ್ಯ-ವೇಣು-ರಾಧಿಕ) ಸ್ಟೋರ್ಸ್ ಎಂಬ ಹೊಸ ನಾಮಕರಣವೂ ಆಗಿಹೋಯಿತು. ಈ ಮಧ್ಯದಲ್ಲಿ 'ಈ ಸಲ ನಮ್ಮ ಗೋವುಗೆ ಟಾಕ್ಸ್ ಹಾಕ್ಸೋಣ' ಎಂದು ಮರೆ ಮಾಡಿಕೊಂಡು ಹಿಂದಿನ ಲಲನೆಯರ ಜೊತೆ ರಾಕೇಶ ಪಿತೂರಿ ಮಾಡುತಿದ್ದ. ಮಮತ ಅದಕ್ಕೆ 'ಗೋವು ಕಿ ಜೈ' ಅಂತ ಕೈ ಎತ್ತಿ ಜೈಕಾರ ಸೇರಿಸಿಬಿಟ್ಟಳು. ಸರಿ! ವಡೆ, ಖಾರಬಾತು ಬಾರಿಸಿ ಕಾಫಿಯನ್ನು ಇಳಿಸಿಕೊಂಡೆವು. ಇನ್ನೂ ಕೆಲವು ದಿನ ಇಲ್ಲಿಯೇ ಇರುವ ಅವಳನ್ನು ಮತ್ತೊಮ್ಮೆ ಎಲ್ಲರೂ ಭೇಟಿಯಾಗುವ ಯೋಜನೆಯು ಹಾಕಿಯಾಯಿತು. ಮಮತ ತಾನು ಅವಳನ್ನು ವಿಮಾನ ಹತ್ತಿಸಿ ಟಾಟಾ ಹೇಳಿಯೇ ಬರುತ್ತೇನೆ ಅನ್ನೋ ನಿರ್ಧಾರ ಮಾಡಿದಳು. ಮಮತ ಒಂದು ಸಲ ನಿರ್ಧಾರ ಮಾಡಿದ್ರೆ ಮುಗಿತು, ಆಮೇಲೆ ಅವಳ ಮಾತು ಅವಳೇ ಕೇಳಲ್ಲ ಎನ್ನುವ ನಮಗೆಲ್ಲ ಚನ್ನಾಗಿಯೇ ಗೊತ್ತು!.

'ನೋಡು ಇದೆ ಕಡೆ ಸಾರಿ ನೀನು ಹೀಗೆ ತಿನ್ನೋದು' ಜೋಷಿಯವರ ಈ ಮಾತಿಗೆ 'ಇನ್ನೂ ಒಂಬತ್ತು ದಿನ ಇದೆ. ಇನ್ನೊಂದು ಸಲ ಬಂದು ತಿನ್ಕೊಂಡು ಹೋಗ್ತೀನಿ' ಥಟ್ಟನೆ ನೇರ, ರಚನಾತ್ಮಕ ಉತ್ತರ ಶುಭಾಳಿಂದ ಬಂತು. ಅವಳದು ನೇರ ನುಡಿ ಎಲ್ಲರೊಂದಿಗೆ ಸ್ನೇಹದಿಂದೊಂದಾಗುವ ಗುಣ. ಯಾಕೆ ಎನ್ನುವ ಪ್ರಶ್ನೆಗೆ ಯಾಕಗೊಲ್ಲ ಎನ್ನುವುದೇ ಅವಳ ಉತ್ತರ. ಅರ್ಚನ ಸಮಯ ಸಿಕ್ಕಾಗಲೆಲ್ಲ ಶುಭಾಳ ಭೋದನ ಶಾಲೆಯಲ್ಲಿ ಕೆಲವು ಸಂಗತಿಗಳನ್ನು ಕೇಳಿ ತಿಳಿದು ಕಲಿತುಕೊಂಡವಳು. ಅವಳಿಗೆ ಈ ದಿನ ನಮ್ಮೆಲ್ಲರಿಗಿಂತ ತುಸು ಹೆಚ್ಚೇ ಬೇಸರವಿತ್ತು.

ಎರಡು ದಿನಗಳ ಹಿಂದೆ ತಾನೆ ಅದೇ ಬಂಡಿಯಲ್ಲಿ ಎಲ್ಲರೂ ಒಂದೊಂದು ಪಕ್ಷವಾಗಿ ಕೂಗಾಡುತಿದ್ದಾಗ ಇದೇ ಶುಭ ಎಲ್ಲರಿಗು ಶಾಂತಿ ಮಂತ್ರ ಭೋದಿಸಿದ್ದಳು. ಆಗ ಅವಳಿಗಿಟ್ಟ ಹೆಸರು ಶುಭಾನಂದ. ಆ ದಿನ ಜೋಷಿಯವರು ನಮೊಂದಿಗಿರದಿದ್ದ ಕಾರಣ ರಾಕೇಶ ಈಗ ಆ ವಿಷಯ ಪ್ರಸ್ತಾಪ ಮಾಡಿದ. ಅದು ಎಲ್ಲರನ್ನು ಮತ್ತೆ ಮಾತಿಗೆಳೆಯಿತು. ಮುಂದಿನ ತಿಂಗಳಿಂದ ನಮ್ಮೆಲ್ಲರನ್ನೂ ಬೇರೆ ಬೇರೆ ಬಂಡಿಗಳಿಗೆ ತುಂಬಿ ನಮ್ಮನ್ನೆಲ್ಲಾ ಬೇರೆ ಮಾಡುವ ಹುನ್ನಾರ ಕಂಪನಿಯ ಸಾರಿಗೆ ಸಂಸ್ಥೆಯಿಂದ ನಡೆದಿತ್ತು. ವೇಣು ಕೂಡ 'ನಮ್ಮ ಗಾಡಿಲಿ ಬರೋರೆಲ್ಲ ಹೀಗೆ, ನಮ್ಮ ಗಾಡಿಗೆ ಬರುವಾಗ ಒಂದು ಒಳ್ಳೆ ಗುಂಪಾಗಿ ಬರ್ತಾರೆ ಆದರೆ ಹೋಗುವಾಗ ಅವರು ಎಲ್ಲಾ ಬೇರೆ ಬೇರೆ ಆಗಿ ಹೋಗ್ತಾರೆ' ಎನ್ನುವಾಗ ಅವರಲ್ಲೂ ನಮ್ಮನ್ನು ಅಗಲುವುದು ತುಸು ಬೇಸರ ತಂದಿರುವುದನ್ನು ತೋರಿಸುತಿತ್ತು. ಅಷ್ಟರಲ್ಲೇ ಸಮಯ ಕಳೆದು ಶುಭಾಳ ಮನೆ ಸಮೀಪಿಸಿತು, ಬಂಡಿಯೂ ನಿಂತಿತು. ಎಲ್ಲರೂ ಕೈ ಕುಲುಕಿ ಅವಳನ್ನು ಬೀಳ್ಕೊಟ್ಟೆವು. ತನ್ನ ಚೀಲವನ್ನು ಬೆನ್ನಿಗಂಟಿಸಿಕೊಂಡು ಮನೆಯ ಕಡೆ ಹೊರಟವಳು ಕೊಂಚ ದೂರ ಹೋಗಿ ಹಿಂತುರಿಗಿ ನೋಡಿದಳು. ನಾವಿನ್ನೂ ಅಲ್ಲೇ ಇದ್ದೆವು. ಬಂಡಿಯಲ್ಲಿ 'ನಿನ್ನನ್ನ ಇವತ್ತು ಅಳಿಸ್ತೀನಿ' ಎನ್ನುವ ಜೋಷಿಯವರ ಪಣಕ್ಕೆ ಸೋಲದ ಆ ಕಣ್ಣುಗಳು ಹಾಗೆ ಹಿಂದುರಿಗಿ ನೋಡುವಾಗ ತೆವವಿದ್ದಂತೆ ಕಂಡಿತು....!

                       *        *        *        *

ನೆನಪುಗಳ ಪುಟಗಳಿಂದ ಹಳೆಯ ಒಂದು ಕವನ....

ಎಲ್ಲೋ ಹುಟ್ಟಿ ಎಲ್ಲೋ ಬೆಳೆದು,
ಸೇರಿದೆವೆಲ್ಲಾ ಒಂದು ದಿನ,
ನಲಿವೆ ಇರಲಿ ನೋವೆ ಬರಲಿ,
ಅಳಿಯದೆ ಉಳಿಯಲಿ ಗೆಳೆತನ!

1 ಕಾಮೆಂಟ್‌:

  1. woooooowww :) "idenidu!!" anno curiosity inda tegeda mail oLage intha super baraha kaadide!!

    awesome aagi bardiddira!! kannige katto anta description :) ending antu very nice! :)

    thanks a lot govardhan!!! ee barahada link annu khanditha treasure maadkothini :)

    ಪ್ರತ್ಯುತ್ತರಅಳಿಸಿ